ಕೊಚ್ಚಿ: ಬೆಚ್ಚಿ ಬೀಳಿಸಿದ ಎರ್ನಾಕುಲಂನ ಕಲಮಸ್ಸೆರಿಯಲ್ಲಿ ಭಾನುವಾರ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನಾ ಸಭಾ ಕಾರ್ಯಕ್ರಮದಲ್ಲಿ ಸರಣಿ ಸ್ಫೋಟ ಸಂಭವಿಸಿದ ಬಳಿಕ ಬಾಂಬ್ ಇಟ್ಟಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ತ್ರಿಶೂರ್ ನ ಕೊಡಕ್ಕರ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಶರಣಾಗಿರುವ ಡೊಮಿನಿಕ್ ಮಾರ್ಟಿನ್ ಎಂಬಾತನನ್ನು ಬಂಧಿಸಿ ಕೊಚ್ಚಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸುತ್ತಿದ್ದು ಆತನ ಕುರಿತಾಗಿ ಯಾವುದೇ ಹೆಚ್ಚಿನ ವಿವರಗಳನ್ನು ಬಿಟ್ಟಕೊಟ್ಟಿಲ್ಲ. ವ್ಯಕ್ತಿ ಮಾನಸಿಕ ಅಸಮತೋಲನ ಹೊಂದಿದ್ದಾನೆಯೇ ಎನ್ನುವ ಕುರಿತು ಉನ್ನತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸರಣಿ ಸ್ಫೋಟ ಸಂಭವಿಸಿದ ಪರಿಣಾಮ ಮಹಿಳೆ ಮೃತಪಟ್ಟು, 36 ಮಂದಿ ಗಾಯಗೊಂಡಿದ್ದಾರೆ. 10 ಮಂದಿ ಅಲುವಾ ರಾಜಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಂದಿಯ ಸ್ಥಿತಿ ಸ್ಥಿರವಾಗಿದ್ದು, 3 ಮಂದಿ ಐಸಿಯುನಲ್ಲಿದ್ದಾರೆ. ಮೂವರಲ್ಲಿ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಸ್ಪೋಟಕ್ಕೆ ಬಳಸಿಕೊಳ್ಳಲಾದ ಶಂಕಿತ ನಿಗೂಢ ನೀಲಿ ಕಾರು ಚೆಂಗನ್ನೂರಿನ ಮಹಿಳೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದು ಬಂದಿದೆ.
ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಸ್ಫೋಟಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಎನ್‌ಐಎ ಮತ್ತು ಎನ್‌ಎಸ್‌ಜಿ ಈ ಬಗ್ಗೆ ಪರಿಶೀಲನೆ ನಡೆಸಲಿವೆ ಎಂದು ಹೇಳಿದ್ದಾರೆ. ತನಿಖೆಗಾಗಿ ಎನ್‌ಐಎಯ 5 ಸದಸ್ಯರ ತಂಡ ದೆಹಲಿಯಿಂದ ಕೊಚ್ಚಿಗೆ ಬಂದಿಳಿದಿದೆ. ಸ್ಫೋಟದಲ್ಲಿ ಐಇಡಿ ಕುರುಹುಗಳು ಪತ್ತೆಯಾಗಿವೆ.
ಕೋಝಿಕ್ಕೋಡ್ ರೈಲ್ವೇ ನಿಲ್ದಾಣದಲ್ಲಿ ಭದ್ರತಾ ತಂಡವನ್ನು ಹೆಚ್ಚಿಸಲಾಗಿದೆ. ಬಾಂಬ್ ಸ್ಕ್ವಾಡ್, ಪೊಲೀಸ್ ಮತ್ತು ಆರ್‌ಪಿಎಫ್ ತಂಡಗಳು ಜಂಟಿ ತನಿಖೆ ನಡೆಸುತ್ತಿವೆ.
ಕರ್ನಾಟಕ ಮತ್ತು ಕೇರಳ ಗಡಿ ಭಾಗಗಳಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೊಲೀಸರು ವಿಶೇಷ ನಿಗಾ ವಹಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸ್ಪೋಟದ ಬಳಿಕ ದೆಹಲಿ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.