Advertisement

ಶಿಕ್ಷಣದಿಂದ ಬಡತನ ನಿರ್ಮೂಲನೆ

02:31 PM May 13, 2019 | Suhan S |

ಕೋಲಾರ: ಶಿಕ್ಷಣ ಒಂದೇ ಸಮಾಜದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂಬುದನ್ನು ಮಾಸ್ತಿ ತೋರಿಸಿಕೊಟ್ಟಿದ್ದಾರೆ ಎಂದು ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥ್‌ ಅಭಿಪ್ರಾಯಪಟ್ಟರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಟ್ರಸ್ಟ್‌ ಹಮ್ಮಿಕೊಂಡಿದ್ದ ಮಾಸ್ತಿ ಕವಿತೆಗಳ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಸ್ತಿಯವರು ಓದು ಮತ್ತು ಬುದ್ದಿವಂತಿಕೆಯಿಂದಲೇ ಉತ್ತಮ ವಿದ್ಯಾರ್ಥಿಯಾಗಿದ್ದರು. ಆದ್ದರಿಂದಲೇ ಅವರು ಸತತ ಪ್ರಯತ್ನದಿಂದ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಕಿರಿಯರ ಬೆಳೆಸುವ ಪ್ರಯತ್ನ: ಬೇಂದ್ರೆ, ಮಾಸ್ತಿ, ಡಿವಿಜಿ ಜಿಲ್ಲೆಯ ಮೂರು ಕಣ್ಣುಗಳು ಇದ್ದಂತೆ. ತಾಯಿನಾಡಿನ ಭಾಷೆಯಾದ ಕನ್ನಡವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ತೋರಿಸಿಕೊಂಡಿದ್ದಾರೆ. ಕಲೆ, ನಾಟಕ, ಪುಸ್ತಕ ರಚನೆ, ಸಂಪಾದಕೀಯದಿಂದ ತನ್ನ ಜತೆಗೆ ಕಿರಿಯರನ್ನು ಬೆಳೆಸುವ ಪ್ರಯತ್ನ ಮಾಡುತ್ತಾ ಇದ್ದರು ಎಂದು ಹೇಳಿದರು.

ಸಾಹಿತ್ಯ ರಚನೆಗೆ ಸಹಕಾರಿ: ಬರಹಗಾರರು ಹೇಗೆ ಬರೆಯಬೇಕು ಎಂದು ಮಾರ್ಗದರ್ಶನ ನೀಡುವ ಮೂಲಕ 122 ಪುಸ್ತಕ, 100 ಕತೆ ಬರೆದಿದ್ದಾರೆ. ಸಾಧಾರಣ ಮನುಷ್ಯ ಜೀವನವನ್ನು ಕತೆಯ ರೂಪದಲ್ಲಿ ರಚಿಸಿ ಜೀವನದ ಅನುಭವ ಹಂಚಿಕೊಂಡು ಕಿರಿಯರ ಸಾಹಿತ್ಯ ರಚನೆಗೆ ಸಹಕಾರಿಯಾಗಿದೆ ಎಂದು ಹೇಳಿದರು

ಮಾಸ್ತಿ ಕಲಿಯೋದು ತುಂಬಾ ಇದೆ: ಸಾಹಿತಿ ಸ.ರಘುನಾಥ್‌ ಮಾತನಾಡಿ, ಮಾಸ್ತಿ ಅವರು ಅಂತಃಕರಣದ ಚಿತ್ರಗಳನ್ನು ನಮ್ಮ ಮುಂದೆ ಇಟ್ಟಿದ್ದು, ಇದನ್ನು ಗಮನಿಸಿದರೆ ಅನ್ಯಾಯವನ್ನು ವಿರೋಧಿಸುವ ಮಾನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಸಾಮಾಜಿಕವಾಗಿ ಮಾಸ್ತಿಯವರಿಂದ ಕಲಿಯಬೇಕಾದ ಗುಣಗಳು ಹೆಚ್ಚು ಇವೆ. ಅವರು ಪದ್ಯ, ಕತೆಗಳನ್ನು ಓದುವಾಗ ಸಹೃದಯ, ತಿಳಿ ಕನ್ನಡವನ್ನು ಕಲಿಯಬಹುದು. ಇದನ್ನು ನಾಟಕ ರೂಪದಲ್ಲಿ ಹಾಡಲು ಸಾಧ್ಯವಿದ್ದು, ಈ ಪ್ರಯತ್ನ ಮಾಡಲು ಟ್ರಸ್ಟ್‌ ಮುಂದಾಗಬೇಕು ಎಂದು ತಿಳಿಸಿದರು.

Advertisement

ಮಾಸ್ತಿ ಕಾವ್ಯದಲ್ಲಿ ಧ್ವನಿ ಕುಸಿಯುತ್ತದೆ. ಬೇಂದ್ರೆ ಮತ್ತು ಕುವೆಂಪು ಕಾವ್ಯದಲ್ಲಿ ಬಹಳ ದೊಡ್ಡದಾದ ಧ್ವನಿಯಿದೆ. ತಮ್ಮ ಬದುಕಿನ ಸ್ಥರದ ಕೆಳಗೆ ಬೇರೆಯವರ ಬದುಕಿನ ಸ್ತರಗಳಲ್ಲಿರುವ ಮಾನವೀಯ ಸ್ತರಗಳನ್ನು ಎತ್ತಿ ತೋರಿಸಿದರು. ಪುತೀನ ಮತ್ತು ಮಾಸ್ತಿಯವರ ಬದುಕಿನಲ್ಲಿ ಸಮನ್ವಯಗೊಂಡ ಭಾವಗಳನ್ನು ಕಾಣಬಹುದಾಗಿದೆ ಎಂದರು.

ಮಾಸ್ತಿ ಕುರಿತ ಕವಿತೆಗಳನ್ನು ಪ್ರಾಧ್ಯಾಪಕ ಸಿ.ಎ.ರಮೇಶ್‌, ಜಿ.ಶಿವಪ್ಪ ಅರಿವು, ಪ್ರೊ.ರುದ್ರೇಶ್‌ ಅದಂರಗಿ, ಹರೀಶ್‌, ಎಸ್‌.ರವೀಂದ್ರ ಓದಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌, ಹೊಲ್ಲಂಬಳ್ಳಿ ಅಮರೇಂದ್ರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next