ಈ ಸಲ ಜಾದೂ ಮಾಡಲು ಹೊಸ ಅಸ್ತ್ರ ಇದೆ. ಕಾರ್ಡು, ಗೀರ್ಡು ಅಂತೆಲ್ಲ ತಲೆ ತಿನ್ನುವುದಿಲ್ಲ. ಇದು ಹೊಸ ರೀತಿಯ ಪ್ರಯತ್ನ ಅಂತಲಾದರು ತಿಳಿದು ಕೊಳ್ಳಬಹುದು. ಅಂತದ್ದೇನಪ್ಪ? ಅಂತ ಕೇಳುತ್ತೀರ. ಹೌದು, ಹೇಳ್ತೀನಿ ಕೇಳಿ. ಮೂರು ಬೇರೆ ಬೇರೆ ಉದ್ದದ ಹಗ್ಗದ ತುಂಡುಗಳನ್ನು ಮಡಿಸಿ, ಆನಂತರ ಅದನ್ನು ಮತ್ತೆ ತೆರೆದರೆ ಎಲ್ಲಾ ಹಗ್ಗಗಳು ಒಂದೇ ಉದ್ದವಾಗಿರುತ್ತವೆ!
ಇದು ಹೇಗೆ?
ಪ್ರೇಕ್ಷಕರಿಗೆ ಇಂಥದೇ ಪ್ರಶ್ನೆ ಹುಟ್ಟುವಂತೆ ನೀವು ಮಾಡಬೇಕು. ಅವರ ಮುಖದಲ್ಲಿ ಆಶ್ಚರ್ಯ ಕಂಡರೆ ನಿಜಕ್ಕೂ ನೀವು ಗೆದ್ದಿರಿ ಅಂತಲೇ ಅರ್ಥ. ಇದೇನು ಕಷ್ಟದ ಕೆಲಸವಲ್ಲ.
ಈ ಮ್ಯಾಜಿಕನ್ನು ಮಾಡಲು 16 ಸೆಂ. ಮೀ., 30 ಸೆಂ. ಮೀ., ಮತ್ತು 44 ಸೆಂ. ಮೀ. ಉದ್ದದ ಮೂರು ಹಗ್ಗದ ತುಂಡುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಚಿತ್ರ (1) ರಲ್ಲಿ ತೋರಿಸಿರುವಂತೆ ನಿಮ್ಮ ಎಡಗೈಯಲ್ಲಿ ಹಿಡಿಯಿರಿ. ಅಂದರೆ, ಸಣ್ಣದು ಎಡಗಡೆ, ಮಧ್ಯದ್ದು ಮಧ್ಯದಲ್ಲಿ ಮತ್ತು ದೊಡ್ಡದು ಬಲಗಡೆಗೆ ಇರಬೇಕು. ಪ್ರತಿಯೊಂದು ಹಗ್ಗದ ತುದಿಯೂ ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳಿನ ಮೇಲೆ ಎರಡು ಇಂಚಿನಷ್ಟು ಇರಲಿ. ಈಗ ಈ ಹಗ್ಗಗಳ ಇನ್ನೊಂದೊಂದು ತುದಿಗಳನ್ನು ಚಿತ್ರ 2ರಲ್ಲಿ ತೋರಿಸಿರುವಂತೆ ಮೇಲೆ ತಂದಿಡಿ. ನಂತರ 3ನೇ ಹಗ್ಗವನ್ನು ತೆಗೆದು 4ನೇ ನಂಬರ್ ಹಗ್ಗದ ಪಕ್ಕ ಬರುವಂತೆ ಇಡಿ (ಚಿತ್ರ 3). ಕೊನೆಗೆ 3, 5 ಮತ್ತು 6 ನಂಬರಿನ ಹಗ್ಗಗಳನ್ನು ಬಲಗೈನಲ್ಲಿ ಹಿಡಿದು ಕೆಳಗೆ ಎಳೆಯಿರಿ. ಆಗ ಎಲ್ಲಾ ಹಗ್ಗಗಳು ಒಂದೇ ಸಮನಾಗಿರುವಂತೆ ಕಾಣುತ್ತದೆ.
ಅತಿ ಸಣ್ಣ ಮತ್ತು ಅತಿ ಉದ್ದದ ಹಗ್ಗಗಳು ಸೇರುವ ಜಾಗವನ್ನು ನಿಮ್ಮ ಹೆಬ್ಬೆರಳಿನಿಂದ ಮರೆಮಾಡಬೇಕು. ಆಗಲೇ ಜಾದೂಗೆ ಮಜ ಬರುವುದು.
ಇಷ್ಟೆಲ್ಲ ಓದಿದ ಮೇಲೆ ತಲೆ ಕೆರೆದುಕೊಳ್ಳುತ್ತಿದ್ದೀರ. ಮತ್ತೂಮ್ಮೆ ಓದಿ. ಜಾದೂ ಮಾಡಲು ಮುಂದಾಗಿ. ಆಗ ಎಲ್ಲವೂ ಅರ್ಥವಾಗುತ್ತದೆ.
-ಉದಯ್ ಜಾದೂಗಾರ್