ಪಾತ್ರಧಾರಿ ಪಾತ್ರಗಳ ಪ್ರತೀಕವಾಗಿ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರಿಗೆ ತಲುಪಿಸಿ ಕೌತುಕ ಮರೆದದ್ದು ಮಡಂತ್ಯಾರಿನ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಮಡಂತ್ಯಾರು ಹಾಗೂ ಶಿಶಿರ್ ಸೇವಾ ಪ್ರತಿಷ್ಠಾನ ಮಡಂತ್ಯಾರು ಇವರ ಸಹಯೋಗದೊಂದಿಗೆ ನಡೆದ ಭೀಷ್ಮಪ್ರತಿಜ್ಞೆ ತಾಳಮದ್ದಳೆ. ಪಾತ್ರಧಾರಿಗಳೆಲ್ಲರೂ ಪಾತ್ರದ ಅಭಿವ್ಯಕ್ತಿಯನ್ನು ಸಮತೂಕದಿಂದ ಎರಕ ಹೊಯ್ದ ಬಗೆಯೇ ಚಂದ.
ತೆಕ್ಕಟ್ಟೆ ಆನಂದ ಮಾಸ್ತರ್, ವಾಸುದೇವ ಸಾಮಗರು ದಾಶರಾಜ ಪಾತ್ರಕ್ಕೊಂದು ವಿಶಿಷ್ಟ ರೂಪ ನೀಡಿದ್ದರು. ದಾಶರಾಜನಾಗಿ ಪಾತ್ರಕ್ಕೊಂದು ಹೊಸ ಹೆಗ್ಗಳಿಕೆ ಕೊಟ್ಟದ್ದು ಸುಣ್ಣಂಬಳ ವಿಶ್ವೇಶ್ವರ ಭಟ್ಟರು. ಕಂಧರ ಮತ್ತು ಶಂತನು, ಕಂಧರ ಮತ್ತು ದೇವವ್ರತನ ನಡುವಿನ ಸಂಭಾಷಣೆಯನ್ನು ಸರಳವಾಗಿ ಕಡೆದಿಟ್ಟರು. ಪದ್ಯದಲ್ಲಿ ಕವಿ ಹಲಸಿನಹಳ್ಳಿಯವರು ದಾಶರಾಜನಿಗೆ ಗ್ರಾಮ್ಯಭಾಷೆಯ ಸೊಗಡುಳ್ಳ ಸಾಹಿತ್ಯವನ್ನೂ ನೀಡಿದ್ದಾರೆ. ಹಾಗಂತ ಆತ ತೀರಾ ಸಾಮಾನ್ಯ ಅಂಬಿಗ ಅಲ್ಲ ಎನ್ನುವುದನ್ನು ಸುಣ್ಣಂಬಳರು ಸಮರ್ಥವಾಗಿ ನಿರೂಪಿಸಿದರು.
ಪ್ರಾರಂಭದಿಂದ ಭೀಷ್ಮ ಪ್ರತಿಜ್ಞೆವರೆಗೆ ಮಗಳ ಮೇಲಿನ ನಿಷ್ಕಲ್ಮಶ ಪ್ರೀತಿ, ಭವಿಷ್ಯದ ಬಗೆಗಿನ ಕಾಳಜಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಹೋದರು. ದಾಶರಾಜ ಬೆಸ್ತ,ಅಂಬಿಗನಾದರೂ ಕೂಡ ಲೋಕಾನುಭವದಲ್ಲಿ ಕಡಿಮೆ ಇಲ್ಲ ಎನ್ನುವುದನ್ನು ಸೊಗಸಾಗಿ ನಿರೂಪಿಸಿದರು. ಅವರ ಹಾಸ್ಯಭರಿತ ಮಾತುಗಳು ಮುದ ನೀಡುತ್ತಿತ್ತು, ಹಾಸ್ಯದಲ್ಲಿ ಒಂದು ಗಾಂಭೀರ್ಯ ಇತ್ತು. ತಾನೊಂದು ಗುಂಪಿನ ನಾಯಕ, ಪ್ರಜ್ಞಾವಂತ ಅನುಭವಿ ವಯೋವೃದ್ಧ ಎಂಬ ಪ್ರಜ್ಞೆಯ ಪಾತ್ರ ಸುಣ್ಣಂಬಳರದ್ದು.
ಮಹಾಭಾರತದ ಪಲ್ಲಟವೊಂದರ ದೃಶ್ಯರೂಪಕ ಈ ಪ್ರಸಂಗ. ಹಸ್ತಿನೆಯ ಆಡಳಿತವನ್ನು ಮೀರಿ ಅಧಿಕಾರಕ್ಕಾಗಿ ಆಸೆ ಮಾಡದೇ ಭೀಷಣವಾದ ಶಪಥ ಮಾಡುವ ಭೀಷ್ಮ ಮಹಾಭಾರತದುದ್ದಕ್ಕೂ ಕೇಂದ್ರಬಿಂದು. ಅವನ ಶಪಥದಿಂದಲೇ ನಂತರದ ಅಷ್ಟೂ ಕಥೆ ಬೇರೆಯೇ ತಿರುವು ಪಡೆದು ಒಂದು ಪಲ್ಲಟಕ್ಕೆ ಕಾರಣವಾದುದೂ ಹೌದು. ಇದನ್ನು ಸೂಚ್ಯವಾಗಿ ಹೇಳಿದ ಶಂತನು ಪಾತ್ರಧಾರಿ ಉಜಿರೆ ಅಶೋಕ ಭಟ್ಟರು ಪಾತ್ರದ ಆಶಯವನ್ನು ಜನರ ಭಿತ್ತಿಯಲ್ಲಿ ಮೂಡಿಸಿದರು.
ಶಂತನು ತಮಾಲಕೇತನೆಂಬ ರಾಕ್ಷಸನನ್ನು ಕೊಂದು ಋಷಿಗಳಿಗೆ ಹರ್ಷವನ್ನು ಉಂಟುಮಾಡಿ ಗಾಲವ ಋಷಿಯಿಂದ ಉಡುಗೊರೆಯಾಗಿ ಕಮಂಡಲು ಮತ್ತು ಕಾವಿ ವಸ್ತ್ರವನ್ನು ಪಡೆದುಕೊಳ್ಳುತ್ತಾನೆ. ಇವೆರಡು ಬ್ರಹ್ಮಚರ್ಯದ ಸಂಕೇತಗಳಾಗಿದ್ದುದರ ಎಳೆಯನ್ನು ಹಿಡಿದು ಅಶೋಕ ಭಟ್ಟರು ಕಾವಿ- ಕಮಂಡಲು ಋಷಿಗಳು ಯಾಕೆ ಕೊಟ್ಟರು ಎಂಬ ಜಿಜ್ಞಾಸೆಯೊದಗಿ ಅಪರೋಕ್ಷವಾಗಿ – ಅಂದು ಶಂತನು ಮುನಿಗಳ ಉಡುಗೊರೆಯನ್ನು ಮನಸಾ ಸ್ವೀಕರಿಸಿ ವಾನಪ್ರಸ್ಥಕ್ಕೆ ತೆರಳುತ್ತಿದ್ದರೆ ಮುಂದಿನ ಭರತ ದೇಶದ ಚಿತ್ರ ಭೀಷ್ಮಾಧಿಪತ್ಯದಲ್ಲಿ ಬೇರೆಯೇ ರೀತಿಯಲ್ಲಿ ಅರಳುತ್ತಿತ್ತೋ ಏನೋ ಎಂಬ ಧ್ವನಿ ಒದಗಿಸಿದರು. ಮೊದಲು ವೈರಾಗ್ಯದ ಮಡುವಿನಲ್ಲಿ ಬಿದ್ದಂತೆ ಕಾಣಿಸಿ ನಂತರ ಗಂಗೆಯ ನೆನಪು ಮತ್ತೆ ದಾಂಪತ್ಯ ಜೀವನದತ್ತ ಒಲವು ತೋರುವಂತೆ ಮಾಡಿ, ಶಂತನುವಿನ ಮಾನಸಿಕ ತೊಳಲಾಟವನ್ನು ಅಶೋಕ ಭಟ್ಟರು ಚೆನ್ನಾಗಿ ಚಿತ್ರಿಸಿದರು. ಶಂತನು ಸತ್ಯವತಿಯನ್ನು ನೋಡಿದ ಮೇಲೆ ಆಶಾವಾದಿಯಾಗಿ ಬದಲಾಗುವುದನ್ನು ಮಾತಿನಲ್ಲಿ ಮೂಡಿಸಿದರು.
ಸತ್ಯವತಿಯಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಚೆನ್ನಾಗಿ ನಿರ್ವಹಿಸಿದರು. ಚಕ್ರವರ್ತಿಯ ಕೈ ಹಿಡಿಯುವವಳು, ರಾಜ ಮಾತೆ ಆಗುವವಳಿಗೆ ಇರಬೇಕಾದ ಸರ್ವ ಗಾಂಭೀರ್ಯ, ವಿನಯಶೀಲ ಗುಣಗಳು,ಅದಕ್ಕಿಂತ ಹೆಚ್ಚಾಗಿ ಪರಿಸ್ಥಿತಿಯ ಅರಿವು ಮಾತು ಮಾತಿನಲ್ಲಿ ತಿಳಿಯುತ್ತಿತ್ತು.
ದೇವವ್ರತನಾಗಿದ್ದು ದೇವತೆಗಳಿಂದ ಭೀಷ್ಮ ಎಂದು ಕರೆಸಿಕೊಳ್ಳಲು ಪಡುವ ಹಂತದವರೆಗೆ ದೇವವ್ರತನಲ್ಲಿ ಕಂಡುಬಂದದ್ದು ನಿಷ್ಕಲ್ಮಶ ಪಿತೃಪ್ರೇಮ,ಅಚಲ ದೃಢತೆ , ತಂದೆಗಾಗಿ ಸರ್ವಸಮರ್ಪಣ ಭಾವ. ಸತ್ಯವತಿಯನ್ನು ನೋಡಿದಾಗ ಉಂಟಾಗುವ ಗೌರವಪೂರ್ಣ ಮಾತೃಭಾವವನ್ನು ಪ್ರಸ್ತಾಪಿಸಿದ ರಂಗಭಟ್ಟರು, ಯಮುನೆಯ ತೀರದಲ್ಲಿ ಸತ್ಯವತಿಯನ್ನು ನೋಡಿದಾಗ ನನಗೆ ಅಮ್ಮನ ನೆನಪಾಗುತ್ತದೆ, ಹಾಗಿರುವಾಗ ತಂದೆ ಶಂತನುವಿಗೆ ನನ್ನ ಅಮ್ಮನ ನೆನಪಾದುದರಲ್ಲಿ ತಪ್ಪಿಲ್ಲ ಎಂದ ರಂಗ ಭಟ್ಟರ ನಿರೂಪಣೆ ಎಲ್ಲರನ್ನು ಆಕರ್ಷಿಸಿತು. ಸತ್ಯವತಿಯನ್ನು ನೋಡಿದಾಗ ದೇವವ್ರತನಿಗೆ ಲಕ್ಷ್ಮೀ, ಅನ್ನಪೂರ್ಣೆ ಮತ್ತು ವಿದ್ಯಾಧಿದೇವತೆಯಂತೆ ಭಾಸವಾಗುತ್ತದೆ. ಆದ್ದರಿಂದ ಈಕೆ ಹಸ್ತಿನಾವತಿಯ ಭಾಗ್ಯವಿದಾತೆಯಾಗುತ್ತಾಳೆ ಎಂಬ ಸಂಭ್ರಮ ಪುಟಿದೆದ್ದದ್ದು ರಂಗಭಟ್ಟರ ಅರ್ಥಗಾರಿಕೆಯಲ್ಲಿತ್ತು.
ಭಾಗವತ ಪುತ್ತಿಗೆ ರಘುರಾಮ ಹೊಳ್ಳರು ಸ್ವರದಿಂದ, ಔಚಿತ್ಯಪೂರ್ಣ ರಾಗಗಳ ಬಳಕೆಯಿಂದ, ಸಾಹಿತ್ಯ ಸ್ಪಷ್ಟತೆಯಿಂದ ಪದ್ಯದ ಅಂದವನ್ನು ಹೆಚ್ಚಿಸಿದರು. ಇಡೀ ಪ್ರಸಂಗದ ಭಾವವನ್ನು ಹƒದಯದಲ್ಲಿರಿಸಿ ಹಾಡಿದರು. ಅವರ “ಅಗರಿ ಮಟ್ಟು’ ಪ್ರೇಕ್ಷಕರಿಂದ ಕರತಾಡನ ಗಳಿಸಿತು. ಕೃಷ್ಣ ಪ್ರಕಾಶ ಉಳಿತ್ತಾಯರು ಮದ್ದಳೆಯಲ್ಲಿ ಹಾಗೂ ಚೆಂಡೆಯಲ್ಲಿ ಚಂದ್ರಶೇಖರ ಆಚಾರ್ಯ ಭಾಗವತರ ಮನೋಧರ್ಮದಂತೆ ನುಡಿಸಿದರು.
ವಿಭಾ ಕೃಷ್ಣಪ್ರಕಾಶ ಉಳಿತ್ತಾಯ