ಟಾಪ್ ಟೆನ್ ಹೂಡಿಕೆ ಆಯ್ಕೆಗಳು ಯಾವುವು ಎಂಬುದನ್ನು ಗುರುತಿಸುವಲ್ಲಿ ನಾವು ಮೊತ್ತ ಮೊದಲನೆ ಆಯ್ಕೆಯ ರೂಪದಲ್ಲಿ ನೇರ ಈಕ್ವಿಟಿ ಶೇರು ಹೂಡಿಕೆ (direct equity investment) ಅವಕಾಶ ಇರುವುದನ್ನು ಗುರುತಿಸಿರುವುದು ಅತಿಶಯದ ಮಾತೇನೂ ಅಲ್ಲ.
ಆದರೆ ಶೇರು ಮಾರುಕಟ್ಟೆಯ ನಿರಂತರ ಏರಿಳಿತ, ಓಲಾಟಗಳ ನಡುವೆ ಅತ್ಯಂತ ಕ್ಷಿಪ್ರವಾಗಿ ಲಾಭ ಮಾಡಲು ಸಾಧ್ಯವಿದೆ ಎಂಬ ಮರೀಚಿಕೆ ನಮ್ಮನ್ನು ಸದಾ ಆಮಿಷಕ್ಕೆ ದೂಡುತ್ತಿರುತ್ತದೆ ಎಂಬುದು ಅಷ್ಟೇ ನಿಜ. ಮನುಷ್ಯನಲ್ಲಿ ಅಂತರ್ಗತವಾಗಿರುವ ಆರು ಶತ್ರುಗಳ ಪೈಕಿ ಲೋಭ, ಮೋಹ ಗಳನ್ನು ಗೆಲ್ಲುವುದಕ್ಕೆ ಶೇರು ಮಾರುಕಟ್ಟೆಗಿಂತ ದೊಡ್ಡ ಸವಾಲು ಬೇರೊಂದು ಇರದು !
ಶೇರು ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂ. ಮಾಡಬೇಕಾದರೆ ನೀವು ಎರಡು ಲಕ್ಷ ದೊಂದಿಗೆ ಆರಂಭಿಸಿ ಎಂಬ ಹಾಸ್ಯದ ಮಾತು ಸದಾ ಕಾಲ ಪ್ರಸ್ತುತ. ಈ ಮಾತಿನ ಮರ್ಮವೇನೆಂದರೆ ನೀವು ಎರಡು ಲಕ್ಷ ರೂ.ಗಳನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿದರೆ ಅದು ಒಂದು ಲಕ್ಷಕ್ಕೆ ಇಳಿಯುತ್ತದೆ ಎಂಬ ಎಚ್ಚರಿಕೆ !
ಶೇರು ಮಾರುಕಟ್ಟೆಯಲ್ಲಿ ಲಾಭ, ನಷ್ಟಗಳ ನಡುವಿನ ಗೆರೆ ತುಂಬ ತೆಳು. ಮನುಷ್ಯನನ್ನು ಲೋಭ ಮತ್ತು ಮೋಹ ಸದಾ ಕಾಡುವುದರಿಂದ ಶೇರಿನಲ್ಲಿ ಹಣ ಮಾಡುವುದು ಕಷ್ಟ; ನಷ್ಟ ಸುಲಭ ಎನ್ನುವವರೇ ಹೆಚ್ಚು. ಆದರೆ ಒಂದಂತೂ ಸತ್ಯ : ಎಲ್ಲಿ ಗರಿಷ್ಠ ಲಾಭ ಇದೆಯೋ ಅಲ್ಲಿ ಗರಿಷ್ಠ ರಿಸ್ಕ್ ಇರುತ್ತದೆ. ರಿಸ್ಕ್ ಬೇಡ, ಲಾಭ ಬೇಕು ಎನ್ನುವವರು ಹೂಡಿಕೆಗಾಗಿ ಇತರ ಆಯ್ಕೆಗಳನ್ನು ಪರಿಗಣಿಸಬೇಕಾಗುತ್ತದೆ.
ಅಂತೆಯೇ ನಮ್ಮ 10 ಟಾಪ್ ಹೂಡಿಕೆ ಆಯ್ಕೆಗಳಲ್ಲಿ ನಾವೀಗ ಮುಂದಿನವುಗಳನ್ನು ಚರ್ಚಿಸುವುದು ಪ್ರಸ್ತುತವಾಗುತ್ತದೆ. ಆ ಪ್ರಕಾರ ಶೇರಿನ ಬಳಿಕದ ಎರಡನೇ ಟಾಪ್ ಹೂಡಿಕೆ ಆಯ್ಕೆ ಈಕ್ವಿಟಿ ಮ್ಯೂಚುವಲ್ ಫಂಡ್.
ನಾವು ಖುದ್ದಾಗಿ ನೇರ ಶೇರು ಹೂಡಿಕೆ ಮಾಡುವ ಹಾಗೆಯೇ ಈಕ್ವಿಟಿ ಮ್ಯೂಚುವಲ್ ಫಂಡ್ ನಮ್ಮ ಪರವಾಗಿ ಶೇರು ಮಾರುಕಟ್ಟೆಗಳಲ್ಲಿ ನೇರ ಹೂಡಿಕೆ ಮಾಡುತ್ತದೆ. ಈ ಕೆಲಸವನ್ನು ಫಂಡ್ ಮ್ಯಾನೇಜರ್ ಗಳು ಸಂಶೋಧನೆ, ವಿಶ್ಲೇಷಣೆ, ಲೆಕ್ಕಾಚಾರ ಇತ್ಯಾದಿಗಳ ನೆಲೆಯಲ್ಲಿ ಮಾಡುತ್ತಾರೆ. ಹಾಗಾಗಿ ಅವರ ಹೂಡಿಕೆ ನಿರ್ಧಾರಗಳು ನಮಗಿಂತ ಹೆಚ್ಚು ವೈಜ್ಞಾನಿಕವೂ ಸಕಾಲಿಕವೂ ವಿವೇಚನಾಯುಕ್ತವೂ ಆಗಿರುತ್ತದೆ ಎನ್ನುವುದು ಗಮನಾರ್ಹ.
ಶೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿ (ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ರೂಪಿಸಿರುವ ನಿಯಂತ್ರಣ ಕ್ರಮಗಳ ಪ್ರಕಾರ ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ತಮ್ಮಲ್ಲಿನ ನಿಧಿಯ ಶೇ.65ರಷ್ಟನ್ನು ಈಕ್ವಿಟಿ ಶೇರುಗಳಲ್ಲಿ ಮತ್ತು ತತ್ಸಂಬಂಧಿ ಹಣಕಾಸು ಪತ್ರಗಳಲ್ಲಿ ಹೂಡಬೇಕು. ಈಕ್ವಿಟಿ ಫಂಡ್ ಗಳನ್ನು ಕ್ರಿಯಾತ್ಮಕವಾಗಿ ಇಲ್ಲವೇ ಅಲಿಪ್ತ ರೀತಿಯಲ್ಲಿ ನಿಭಾಯಿಸಲಾಗುತ್ತದೆ.
ಕ್ರಿಯಾತ್ಮಕವಾಗಿ ನಿಭಾಯಿಸಲ್ಪಡುವ ಫಂಡ್ ಗಳಲ್ಲಿ ಫಂಡ್ ಮ್ಯಾನೇಜರ್ ಗಳ ಕೌಶಲ್ಯ, ಬುದ್ಧಿವಂತಿಕೆ, ಕಠಿನ ನಿರ್ಧಾರ ಗಳನ್ನು ಅನುಸರಿಸಿ ಲಾಭ ಬರುತ್ತದೆ. ಸಾಮಾನ್ಯವಾಗಿ ಇಂಡೆಕ್ಸ್ ಫಂಡ್ ಗಳು ಮತ್ತು ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಗಳು (ಇಟಿಎಫ್) ನಿರ್ಲಿಪ್ತವಾಗಿ ನಿಭಾಯಿಸಲ್ಪಡುತ್ತವೆ ಮತ್ತು ಇವುಗಳು ಸೂಚ್ಯಂಕ ಆಧಾರಿತವಾಗಿ ಮುನ್ನಡೆಯುತ್ತವೆ.
ಈಕ್ವಿಟಿ ಸ್ಕೀಮುಗಳನ್ನು ಸಾಮಾನ್ಯವಾಗಿ ನಿಧಿ ಹೂಡಿಕೆಯ ನಿರ್ದಿಷ್ಟ ವಲಯಾನುಸಾರದ ಮಾರುಕಟ್ಟೆ ಬಂಡವಳೀಕರಣದ ಆಧಾರದಲ್ಲಿ ವರ್ಗೀಕರಿಸಲಾಗುತ್ತದೆ. ಇವುಗಳನ್ನು ಭಾರತೀಯ ಕಂಪೆನಿಗಳ ಶೇರುಗಳಲ್ಲಿ ಹೂಡಿಕೆ ಮಾಡುವ ಫಂಡ್ ಗಳಾಗಿ ಮತ್ತು ಅಂತಾರಾಷ್ಟ್ರೀಯ ಶೇರು ಮತ್ತು ಸಾಗರೋತ್ತರ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಫಂಡ್ ಗಳಾಗಿ ವರ್ಗೀಕರಿಸಲಾಗುತ್ತದೆ.
ಪ್ರಕೃತ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿನ ಹೂಡಿಕೆಗಳು 1 ವರ್ಷ, 3 ವರ್ಷ ಮತ್ತು 5 ವರ್ಷಗಳ ನೆಲೆಯಲ್ಲಿ ಅನುಕ್ರಮವಾಗಿ ಶೇ.15, ಶೇ.15 ಮತ್ತು ಶೇ.20ರ ಲಾಭವನ್ನು ತರುತ್ತಿವೆ.
ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ಹೂಡಿಕೆ ಗುಣಲಕ್ಷಣಗಳನ್ನು ನಾವು ಈ ರೀತಿ ಪಟ್ಟಿ ಮಾಡಬಹುದು :
1. ಇವುಗಳಲ್ಲಿನ ಹೂಡಿಕೆ ರಿಸ್ಕ್ ಸಾಮಾನ್ಯದಿಂದ ಗರಿಷ್ಠ;
2. ಇವುಗಳು ಸಾಮಾನ್ಯವಾಗಿ ಓಪನ್ ಎಂಡ್ ಆಗಿರುತ್ತವೆ (ELSS ಗಳಲ್ಲಿ 3 ವರ್ಷ ಲಾಕ್ ಇನ್ ಪೀರಿಯಡ್ ಇರುತ್ತದೆ);
3. ನಗದೀಕರಣದ ಸೌಕರ್ಯ ಗರಿಷ್ಠ ಇರುತ್ತದೆ;
4. ಇವುಗಳಲ್ಲಿ ಲಾಭ ಯಾವತ್ತೂ ಶೇರು ಮಾರುಕಟ್ಟೆಯ ಏರಿಳಿತಗಳಿಗೆ ಪಕ್ವವಾಗಿರುತ್ತದೆ;
5. ದೀರ್ಘಾವಧಿಯ LTCG (1 ವರ್ಷ) ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಶೇ.10; ಕಿರು ಅವಧಿಯ ಅಂದರೆ STCG ತೆರಿಗೆ ಶೇ.15 ಇರುತ್ತದೆ.
ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಇಎಲ್ಎಸ್ಎಸ್ ಸ್ಕೀಮನ್ನು ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ತಿಂಗಳಿಗೆ ಕೇವಲ 500 ರೂ. ಸಿಪ್ ಮೂಲಕ ಆರಂಭಿಸಬಹುದಾಗಿದೆ. ದೀರ್ಘಾವಧಿಗೆ ಇಎಲ್ಎಸ್ಎಸ್ ಸಿಪ್ ಸ್ಕೀಮ್ ಅತ್ಯಂತ ಲಾಭದಾಯಕ; ಕರೋಡ್ ಪತಿಗಳಾಗುವುದಕ್ಕೆ ಅನುಕೂಲಕರ.
ನಿವೃತ್ತಿಯ ದಿನಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅನ್ನು ಸಿಸ್ಟಮ್ಯಾಟಿಕ್ ವಿದ್ ಡ್ರಾವಲ್ ಪ್ಲಾನ್ ಗೆ ಪರಿವರ್ತಿಸಿ ಪಿಂಚಣಿಯ ಹಾಗೆ ನಿರಂತರ ಮಾಸಿಕ ಅದಾಯ ಪಡೆಯಬಹುದು.