Advertisement

ಹಾಸನ ಕೋವಿಡ್-19 ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆ ; ಲಾಕ್‌ಡೌನ್‌ಗೆ ಹೊಂದಿಕೊಂಡ ಜನ

03:06 PM Apr 12, 2020 | mahesh |

ಹಾಸನ: ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಈವರೆಗೂ ಕೋವಿಡ್-19 ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ. ಕೊರೊನಾ ಪ್ರಕರಣಗಳು ವರದಿಯಾದರೂ ಚಿಕಿತ್ಸೆಗೆ ಸಕಲ ವ್ಯವಸ್ಥೆ ಮಾಡಿಕೊಂಡು ಸನ್ನದ್ಧವಾಗಿದೆ.

Advertisement

1.99 ಲಕ್ಷ ಕ್ವಿಂಟಲ್‌ ಅಕ್ಕಿ ವಿತರಣೆ: ಜಿಲ್ಲೆಯಲ್ಲಿ ಒಟ್ಟು 4,54,560 ಅನ್ನ ಅಂತೋದ್ಯಯ ಮತ್ತು ಬಿಪಿಎಲ್‌ ಕಾರ್ಡುದಾರರಿದ್ದು, ಪ್ರತಿ ತಿಂಗಳು 99,577 ಕ್ವಿಂಟಲ್‌ ಅಕ್ಕಿ ವಿತರಣೆಯಾಗುತ್ತಿದ್ದು, ಎರಡು ತಿಂಗಳ ಪಡಿತರ ಅಕ್ಕಿ 1.99 ಲಕ್ಷ ಕ್ವಿಂಟಲ್‌ ಅಕ್ಕಿ ಹಾಗೂ 18,182 ಕ್ವಿಂಟಲ್‌ ಗೋಧಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿರುವ 873 ನ್ಯಾಯಬೆಲೆ ಅಂಗಡಿಗಳ ಮೂಲಕ ಏ.10ರ ಗಡುವಿನೊಳಗೆ ಶೇ.98 ರಷ್ಟು ಪಡಿತರ ವಿತರಣೆಯಾಗಿದೆ.

ತರಕಾರಿ ಮಾರುಕಟ್ಟೆ: ಲಾಕ್‌ಡೌನ್‌ ಜಾರಿಯಾದ ನಂತರ ಕಿಷ್ಕಿಂಧೆಯಾಗಿದ್ದ ಹಾಸನದ ದೇವರಾಜ ಅರಸ್‌ ಮಾರುಕಟ್ಟೆ (ಕಟ್ಟಿನಕೆರೆ ಮಾರುಕಟ್ಟೆ)ಯನ್ನು ಬಂದ್‌ ಮಾಡಿಸಿ ಎರಡು ಬಸ್‌ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿ ತರಕಾರಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಯಿತು. ಕಳೆದೆರಡು ದಿನಗಳಿಂದ ಮತ್ತೆ ವಿವಿಧ ಬಡಾವಣೆಗಳ ಮೈದಾನದಲ್ಲಿ 4 ತರಕಾರಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಸಗಟು ಮಾರಾಟ ವ್ಯವಸ್ಥೆ
ಮಾಡಲಾಗಿದೆ.

30 ಸಾವಿರ ಲೀ. ಹಾಲು ವಿತರಣೆ: ಕೊಳಚೆ ಪ್ರದೇಶಗಳು, ನಿರಾಶ್ರಿತರ ಶಿಬಿರಗಳಿಗೆ ಉಚಿತ ಹಾಲು ವಿತರಿಸಲು ಜಿಲ್ಲೆಗೆ 25 ಸಾವಿರ ಲೀ. ಹಾಲು ಹಂಚಿಕೆಯಾಗಿತ್ತು. ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಗೂ 25 ಸಾವಿರ ಲೀ. ಹಾಲು ಹಂಚಿಕೆಯಾಗಿದ್ದರೂ ಅಲ್ಲಿ ವಿತರಣೆಯಾಗದೇ ಉಳಿಯುತ್ತಿದ್ದ 5 ಸಾವಿರ ಲೀ. ಸೇರಿ ಜಿಲ್ಲೆಯಲ್ಲಿ 30 ಸಾವಿರ ಲೀ.ಹಾಲನ್ನು ಆಯಾಕ್ಷೇತ್ರದ ಶಾಸಕರು ಸೂಚಿಸಿದ ಪ್ರದೇಶಗಳಲ್ಲಿ ವಿತರಿಸಲಾಗುತ್ತಿದೆ.

21 ಚೆಕ್‌ಪೋಸ್ಟ್‌: ಹೊರ ಜಿಲ್ಲೆಯವರು ಪ್ರವೇಶಿಸದಂತೆ ನಿರ್ಬಂಧಿಸಲು ಪೊಲೀಸ್‌ ಇಲಾಖೆ 21 ಚೆಕ್‌ಪೋಸ್ಟ್‌ ತೆರೆದು
ಕಣ್ಗಾವಲಿರಿಸಿದೆ. ಹಾಸನದಲ್ಲಿ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 1,150 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಕೊರೊನಾ ಚಿಕಿತ್ಸೆಗೆ ಹಿಮ್ಸ್‌ ಆಸ್ಪತ್ರೆ ಸಜ್ಜು
ಹಾಸನದ ವೈದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯೆಂದು ಘೋಷಣೆ ಮಾಡಿದ್ದು, ಕೊರೊನಾ ಪರೀಕ್ಷಾ ಪ್ರಯೋಗಾಲವೂ ಇದೆ. ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಕೊರೊನಾ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಕೊರೊನಾ ಚಿಕಿತ್ಸಾ ವಾರ್ಡ್‌ ವಿಸ್ತರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 50 ಐಸಿಯು ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ 3 ಹಾಸಿಗೆಗಳ ಐಸಿಯು ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 18, ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದರಂತೆ 8 ವೆಂಟಿಲೇಟರ್‌ ಸೇರಿ ಜಿಲ್ಲೆಯಲ್ಲಿ ಒಟ್ಟು 26 ವೆಂಟಿಲೇಟರ್‌ಗಳ ವ್ಯವಸ್ಥೆ ಕೊರೊನಾ ಚಿಕಿತ್ಸೆಗಾಗಿ ಸನ್ನದ್ಧವಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಜ್ವರ ತಪಾಸಣಾ ವ್ಯವಸ್ಥೆ ಮಾಡಲಾಗಿದೆ.

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next