ತಿ.ನರಸೀಪುರ: ವೀರಶೈವ ಧರ್ಮ ಜಗತ್ತಿಗೆ ಸಮಾನತೆ ಸಂದೇಶ ನೀಡಿದೆ ಎಂದು ಮುಡುಕುತೊರೆ ಶ್ರೀ ತೋಪಿನ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಸಮಾಜ ಸೇವಾ ಸಮಿತಿ ಹಮ್ಮಿಕೊಂಡಿದ್ದ ಜಗದ್ಗುರು ಆದಿ ರೇಣುಕಾಚಾರ್ಯರ ಯುಗಮಾನೋತ್ಸವ, ಉಜ್ಜುಯನಿ ಜಗದ್ಗುರುಗಳ ಮೆರವಣಿಗೆ ಮತ್ತು ಮಹದೇವಸ್ವಾಮಿ ಶ್ರೀಗಳ ಸಂಸ್ಮರಣಾ ಮಹೋತ್ಸವ, ರೇಣುಕ ಸಭಾ ಭವನದ ವಾರ್ಷಿಕೋತ್ಸವ ಮತ್ತು ಗುರುರಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಟ್ಟಿನಿಂದ ಸಾವಿನ ತನಕ ದಶಕರ್ಮಗಳಲ್ಲಿ ಪೂಜೆ ಪುರಸ್ಕಾರ ಮಾಡುವ ಅನುಕೂಲ ಕಲ್ಪಿಸುವ ಧರ್ಮ ವೀರಶೈವ ಧರ್ಮ. ಇದು ಸಮಾನತೆಯ ಸಂಕೇತ. ಇಂದು ಅನೇಕ ಜನರು ಧರ್ಮದ ಚೌಕಟ್ಟನ್ನು ಬಿಟ್ಟು ಹೋಗುತ್ತಿದ್ದಾರೆ. ಧರ್ಮದ ಚೌಕಟ್ಟು ಬಿಟ್ಟು ಹೊರಟವರಿಗೆ ಒಳಿತು ಸಾಧ್ಯವಿಲ್ಲ. ಶಿವ ನಿರಾಕಾರ ಎಂಬುದು ನಿಮಗೆ ತಿಳಿದಿದೆ. ಇಷ್ಟಲಿಂಗ ಪೂಜೆ ಮಾಡಿ ಗುರುವಿನ ಮಂತ್ರ ಪಠಿಸಿದರೆ ನಮ್ಮಲ್ಲಿ ಜಾnನೋದಯವಾಗುತ್ತದೆ ಎಂದು ಹೇಳಿದರು.
ಶ್ರೀಮದ್ ಉಜ್ಜುಯನಿ ಸಧರ್ಮ ಸಿಂಹಾಸನ ಮಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವಾತ್ಪದರು ಹಾಗೂ ವಾಟಾಳು ಸೂರ್ಯ ಸಿಂಹಾಸನ ಮಠದ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮೈಸೂರು ಮರಿಮಲ್ಲಪ್ಪ ಕಾಲೇಜಿನ ಪ್ರಾಂಶುಪಾಲ ಎಸ್. ಪ್ರಫುಲ್ಲ ಚಂದ್ರಕುಮಾರ್ ಉದ್ಘಾಟಿಸಿ ಮಾತನಾಡಿದರು. ತ್ರಿಯಿಂಬಕ ಮಠದ ವೀರೇಶ ಶಿವಚಾರ್ಯ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನಾ ಉಜ್ಜುಯನಿ ಸದ್ಧರ್ಮ ಸಿಂಹಾಸನ ಮಠದ ಸಿದ್ಧಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಪಾದ ಪೂಜೆ ನೆರವೇರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳ ಜತೆ ಸ್ವಾಮೀಜಿಗಳ ಮೆರವಣಿಗೆ ನಡೆಸಲಾಯಿತು.
ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ತಾಯೂರು ವಿಠಲಮೂರ್ತಿ, ಸಮಾಜ ಸೇವಕ ಗುರುರಾಜ, ಎಸ್. ಶ್ವೇತಾ, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್ ಶಾಂತರಾಜು, ಉಪಾಧ್ಯಕ್ಷ ಎನ್. ಶಿವಪ್ರಸಾದ್, ಕಾರ್ಯದರ್ಶಿ ಸಿ. ವೀರೇಶ್, ಖಜಾಂಚಿ ಎನ್. ಮೋಹನ್, ಸಂಚಾಲಕ ಎಂ. ವೀರೇಶ್, ಅಂಗಡಿ ಶೇಖರ್, ನಾಗೇಶ, ಸಿದ್ಧಲಿಂಗಮೂರ್ತಿ, ನಾಗಪ್ಪ, ಸಿದ್ಧಲಿಂಗಸ್ವಾಮಿ, ವಕೀಲ ಕೆ.ಬಿ. ಪರಮೇಶ್ ಇತರರು ಉಪಸ್ಥಿತರಿದ್ದರು.