ಗಂಗಾವತಿ: ಶಿಕ್ಷಣದ ಮೂಲಕ ಸಮಸಮಾಜ ನಿರ್ಮಾಣ ಮತ್ತು ಶೋಷಿತ ವರ್ಗಗಳ ಕಲ್ಯಾಣ ಸಾಧ್ಯವಾಗುತ್ತದೆ ಎಂದು ಮಕ್ಕಳ ತಜ್ಞವೈದ್ಯ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಅಮರೇಶ ಪಾಟೀಲ್ ಹೇಳಿದರು.
ಅವರು ನಗರದ ಶ್ರೀಕೃಷ್ಣ ಹೊಟೇಲ್ ಸಭಾಂಗಣದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಹಿಂದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಸಮಬಾಳು ಸಮಪಾಲು ಸಿಗಲು ಪ್ರತಿಯೊಂದು ಶೋಷಿತರು ಶಿಕ್ಷಣ ಪಡೆದು ಪ್ರಶ್ನಿಸುವ ಮೂಲಕ ತಮ್ಮ ಹಕ್ಕ ಪಡೆದು ಕರ್ತವ್ಯಗಳನ್ನು ನಿಭಾಯಿಸಬೇಕು. ಶಿಕ್ಷಣ ಪಡೆದ ವ್ಯಕ್ತಿ ದೇಶಕ್ಕೆ ಆಸ್ತಿಯಾಗುತ್ತಾನೆ. ಆದ್ದರಿಂದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸರಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕೆಂದರು.
ನಗರಸಭೆಯ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್ ಮಾತನಾಡಿ, ದಲಿತ ಮತ್ತು ಶೋಷಿತರ ಏಳ್ಗೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ೫೦ ವರ್ಷ ಕಷ್ಟ ಅನುಭವಿಸಿದ್ದಾರೆ. ಅವರು ಕಷ್ಟಪಟ್ಟು ನಮಗೆಲ್ಲಾ ಪ್ರಜಾಪ್ರಭುತ್ವದ ಮೂಲಕ ಸರಕಾರದ ಸೌಕರ್ಯಗಳನ್ನು ನೀಡಿದ್ದಾರೆ. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಭಾರತವನ್ನು ಶ್ರೇಷ್ಠವಾಗಿಸಿದ್ದಾರೆ. ಪ್ರಜಾಪ್ರಭುತ್ವದ ತಳಹದಿಯ ಭಾರತವನ್ನು ವಿಶ್ವವೇ ಗಮನಿಸುವಂತೆ ಮಾಡಿದ ಬಾಬಾ ಸಾಹೇಬರ ಆಶಯ ನಾವೆಲ್ಲ. ಈಡೇರಿಸಲು ಮೊದಲು ಶಿಕ್ಷಣವಂತರಾಗಬೇಕೆಂದರು.
ತಾ.ಪಂ.ಮಾಜಿ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ದಲಿತ ಶೋಷಿತರಿಗೆ ಬದುಕುವ ಮತ್ತು ಮುಖ್ಯವಾಹಿನಿಗೆ ಬರುವ ಹಕ್ಕನ್ನು ಸಂವಿಧಾನದ ಮೂಲಕ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಚರಿತೆಯನ್ನು ಸದಾ ಸ್ಮರಿಸುವ ಮೂಲಕ ಅವರನ್ನು ಜೀವಂತ ಇಡಬೇಕಿದೆ. ಶಿಕ್ಷಣ ಪಡೆದು ಜವಾಬ್ದಾರಿಯುತ ಪ್ರಜೆಗಳನ್ನು ನಿರ್ಮಿಸುವ ಮೂಲಕ ಸಂವಿಧಾನದ ಸಂರಕ್ಷಣೆ ಮಾಡಬೇಕಿದೆ. ಮಕ್ಕಳು ಪರಿಶ್ರಮದ ಮೂಲಕ ವಿದ್ಯಾಭ್ಯಾಸ ಮಾಡಿ ತಮ್ಮ ಸಮುದಾಯದ ಏಳ್ಗೆಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಕೆ.ನಿಂಗಜ್ಜ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಶರಣಪ್ಪ ನಾಯಕ, ಕಾಂಗ್ರೆಸ್ ಮುಖಂಡ ಅರಸಿನಕೇರಿ ಹನುಮಂತಪ್ಪ, ದೀಪಕ್ ಬಾಂಠಿಯಾ, ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸುಭಾಸ, ಜಿಲ್ಲಾಕಾರ್ಯಾಧ್ಯಕ್ಷ ಗಂಗಣ್ಣ, ಬಿಎಸ್ಪಿ ಮುಖಂಡ ಶಂಕರ್ ಸಿದ್ದಾಪೂರ, ಶಿವಪ್ಪ ಮಾದಿಗ, ಶಿವಣ್ಣ ಇಳಿಗನೂರು, ಹನುಮಂತಪ್ಪ ಡಗ್ಗಿ, ಮಲ್ಲೇಶ ದೇವರಮನಿ, ಮೂರ್ತಿ ಸಂಗಾಪೂರ, ಮೌನೇಶ ಸಂಗಾಪೂರ, ದೇವಣ್ಣ ಜಂತಗಲ್ ಸೇರಿ ಅನೇಕರಿದ್ದರು.