ಬೀದರ: ಐಟಿಐ ಶಿಕ್ಷಣ ಸ್ವಾವಲಂಬಿ ಜೀವನಕ್ಕೆ ನಾಂದಿಯಾಗಿದ್ದು, ಇದೀಗ ಸರ್ಕಾರ ಐಟಿಐ ಶಿಕ್ಷಣವನ್ನು ಪಿಯುಸಿಗೆ ಸರಿಸಮಾನ ಮಾಡಿ ಆದೇಶಿಸಿದೆ. ಅಲ್ಲದೇ ಡಿಪ್ಲೋಮಾ ಕಲಿಯಲೂ ಅವಕಾಶ ಕಲ್ಪಿಸಿದೆ. ಕೌಶಲ್ಯದ ಜೊತೆಗೆ ಪದವಿ ಕಲಿಯಲು ಐಟಿಐ ಕುಶಲ ಕರ್ಮಿಗಳಿಗೆ ಸವಲತ್ತು ನೀಡಿದೆ ಎಂದು ಶಾಸಕ ರಹೀಮ್ ಖಾನ ಹೇಳಿದರು.
ನಗರದ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಎಸ್ ಸಿ-ಎಸ್‌ಟಿ ಕುಶಲ ಕರ್ಮಿಗಳಿಗೆ ಟೂಲ್ ಕಿಟ್ ವಿತರಣೆ, ನಾರಾಯಣ ಗುರು ಜಯಂತಿ ಮತ್ತು ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಐಟಿಐ ವೃತ್ತಿ ಶಿಕ್ಷಣಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಬೀದರ ತಾಲೂಕಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಕ್ಯಾಂಪಸ್ ಸಂದರ್ಶನ ಮೂಲಕ
ನೇಮಕಾತಿಗೊಳ್ಳುತ್ತಿರುವುದು ಸಂತಸ. ಮೂರು ವರ್ಷದಲ್ಲಿ 3,418 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಮೊದಲು ಸರ್ಕಾರಿ, ಅನುದಾನಿತ ಐಟಿಐ ವಿದ್ಯಾರ್ಥಿಗಳಿಗೆ ಟೂಲ್ ಕಿಟ್, ಲೇಖನ ಸಾಮಗ್ರಿ, ಸಮವಸ್ತ್ರ, ಪುಸ್ತಕಗಳನ್ನು ಉಚಿತ ವಿತರಣೆ ಮಾಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅನುದಾನ ರಹಿತ ಐಟಿಐ ವಿದ್ಯಾರ್ಥಿಗಳಿಗೂ ಈ ಎಲ್ಲ ಸೌಲತ್ತು ಕೊಡಬೇಕೆನ್ನುವ ದಿಸೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಕೌಶಲ್ಯ ಕಲಿತು ತಮ್ಮ ಗ್ರಾಮದಲ್ಲೂ ಕೂಡ ಚಿಕ್ಕ ಪುಟ್ಟ ಕೆಲಸ ಮಾಡಲು ಟೂಲ್ ಕಿಟ್ ಉಪಯೊಗಿಸಬೇಕೆಂದು ಸಲಹೆ ನೀಡಿದರು.
ಗುಲ್ಬರ್ಗಾ ಹಾಲು ಒಕ್ಕೂಟ ಮಹಾ ಮಂಡಳದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ ಎನ್‌ಟಿಸಿ ಮೂಲ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಸಂಸ್ಥೆಯಲ್ಲಿ ಮೂರು ವರ್ಷಗಳಿಂದ 300 ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗಿದೆ. ಸಧ್ಯ 8 ಕುಶಲ ಕರ್ಮಿಗಳು ಬೀದರ ಐಟಿಐನಲ್ಲಿ ಐಆರ್‌ಎಸಿ ವೃತ್ತಿಯಲ್ಲಿ ಕಲಿತು ಕೆಲಸ ನಿರ್ವಹಿಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಬೀದರ ಸಂಸ್ಥೆಯಲ್ಲಿ ಕಲಿತು ಕನಿಷ್ಠ ನಾಲ್ಕು ತರಬೇತಿದಾರರಿಗೆ ಅಪ್ರಂಟಿಶಿಪ್ ತರಬೇತಿ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಜಂಟಿ ನಿರ್ದೇಶಕ ವೈಜಗೊಂಡ ಮಾತನಾಡಿ, ಬೀದರ ಐಟಿಐ ಸಂಸ್ಥೆ ಗುಣಾತ್ಮಕ ತರಬೇತಿ ನೀಡುವುದರ ಜೊತೆಗೆ ಉದ್ಯೋಗ ಕೊಡಿಸುವಲ್ಲಿ ಮುಂಚೂಣಿಯಲ್ಲಿದೆ. ಐಟಿಐ
ವಿದ್ಯಾರ್ಥಿಗಳು ಕೇವಲ ಕಾಟಾಚಾರಕ್ಕಾಗಿ ಕಾಲೇಜುಗಳಿಗೆ ಹಾಜರಾಗದೆ ಪ್ರಾಯೋಗಿಕ ಕೌಶಲ್ಯ ಅಳವಡಿಸಿ ಕೊಳ್ಳಲು
ಪ್ರಯತ್ನವಾದಿಗಳಾಗಬೇಕು ಎಂದು ಕರೆ ನೀಡಿದರು.
ಪ್ರಭಾರಿ ಪ್ರಾಚಾರ್ಯ ಶಿವಶಂಕರ ಟೊಕರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆ ವಸ್ತು ನಿಷ್ಠವಾಗಿ
ಅನುಷ್ಠಾನಗೊಳಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು. ಅಧಿಕಾರಿಗಳಾದ ಯೂಸುಫ್ ಮಿಯ್ನಾ ಜೋಜನಾ, ಬಾಬು ಪ್ರಭಾಜಿ ಹಾಗೂ ರಮೇಶ ಪೂಜಾರಿ ಅವರಿಗೆ “ಕೌಶಲ್ಯ ಶಿಕ್ಷಕ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬಾಬು ರಾಜೋಳಕಾರ ಪ್ರಾಸ್ತಾವಿಕ ಮಾತನಾಡಿದರು.ಬಾಬು ಪ್ರಭಾಜಿ ನಿರೂಪಿಸಿದರು. ಪ್ರಕಾಶ ಜನವಾಡಕರ ಸ್ವಾಗತಿಸಿದರು. ಯೂಸುಫ್ ಮಿಯಾ ವಂದಿಸಿದರು.