Advertisement

ಸಮ ಸಮಾಜ ಚಿಂತನೆ ಮುಖ್ಯ

11:52 AM Oct 21, 2018 | Team Udayavani |

ಕಲಬುರಗಿ: ಪದವಿ ಪಡೆದು ಕೇವಲ ವಿದ್ಯಾವಂತರಾದರೆ ಯಾವುದೇ ಪ್ರಯೋಜನವಿಲ್ಲ. ನಾವೆಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ಮತ್ತೂಬ್ಬರ ಏಳ್ಗೆಗೆ ಬಯಸುವ ಮನಸ್ಥಿತಿ, ಚಿಂತನೆಯನ್ನು ವಿದ್ಯಾವಂತರು ಹೊಂದಬೇಕು. ಸಮ ಸಮಾಜದ ಗುರಿ ಇಲ್ಲದ ಶಿಕ್ಷಣಕ್ಕೆ ಬೆಲೆ ಇಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದ ಕರ್ನಾಟಕ ಪೀಪಲ್ಸ್‌ ಶಿಕ್ಷಣ ಸಂಸ್ಥೆಯ ಡಾ| ಅಂಬೇಡ್ಕರ್‌ ಪದವಿ ಮಹಾವಿದ್ಯಾಲಯದಲ್ಲಿ ಸಿದ್ಧಾರ್ಥ ಕಾನೂನು ಕಾಲೇಜು ಹಾಗೂ ಬೆಂಗಳೂರಿನ ತಳಸಮುದಾಯಗಳ ಅಧ್ಯಯನ ಕೇಂದ್ರ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಡಾ| ಬಿ.ಆರ್‌. ಅಂಬೇಡ್ಕರ್‌ ಚಿಂತನೆಗಳು ಮತ್ತು ಯುವಜನ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಬಿ.ಆರ್‌. ಅಂಬೇಡ್ಕರ್‌ ದೇಶದ ಸಾರ್ವಭೌಮತೆ, ಸಮಾನತೆ ಹಾಗೂ ಭಾತೃತ್ವಕ್ಕೆ ಸಂವಿಧಾನದ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅಂಬೇಡ್ಕರ್‌ ವಿಚಾರ ಹಾಗೂ ಚಿಂತನೆಗಳನ್ನು ಮಾತಿನಲ್ಲಿ ಹೇಳಿದರೆ ಸಾಲದು. ಅವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಆಹಾರ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ವಿಚಾರಗಳನ್ನು ಒಳಗೊಂಡು ದೇಶದ ಸಮಗ್ರ ಜನತೆಗಾಗಿ ಅಂಬೇಡ್ಕರ್‌ ಸಂವಿಧಾನ ರಚಿಸಿದ್ದಾರೆ. ಸಂವಿಧಾನವು ಒಳ್ಳೆಯದು, ಕೆಟ್ಟದ್ದೆಂಬುದು ಆಡಳಿತ ನಡೆಸುವವರ ಮೇಲೆ ಅವಲಂಬಿತವಾಗಿದೆ. ಸಂವಿಧಾನ ಒಳ್ಳೆಯದಿದ್ದರೂ ಆಡಳಿತ ನಿರ್ವಹಿಸುವವರು ಕೆಟ್ಟವರಾಗಿದ್ದರೆ, ಅದು ಕೆಟ್ಟ ಸಂವಿಧಾನವಾಗಿರುತ್ತದೆ.

ಆಡಳಿತ ನಡೆಸುವವರು ಒಳ್ಳೆಯವರಾಗಿದ್ದರೆ ಸಂವಿಧಾನವೂ ಒಳ್ಳೆಯದು ಎಂಬ ಅಂಬೇಡ್ಕರ್‌ ಮಾತನ್ನು ಯಾರೂ ಮರೆಯಬಾರದು ಎಂದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ| ಮಾರುತಿರಾವ್‌ ಮಾಲೆ ಅಧ್ಯಕ್ಷತೆ ವಹಿಸಿದ್ದರು. ತಳಸಮುದಾಯಗಳ ಅಧ್ಯಯನ ಕೇಂದ್ರ ರಾಷ್ಟ್ರೀಯ ಕಾನೂನು ಶಾಲೆ ಸಹಾಯಕ ಪ್ರಾಧ್ಯಾಪಕ ಡಾ| ಆರ್‌.ವಿ. ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಐ.ಎಸ್‌. ವಿದ್ಯಾಸಾಗರ ನಿರೂಪಿಸಿದರು.

Advertisement

ತೆಲಂಗಾಣದ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳ ಸಂಸ್ಥೆ ಕಾರ್ಯದರ್ಶಿ ಡಾ| ಆರ್‌.ಎಸ್‌. ಪ್ರವೀಣಕುಮಾರ, ಬೆಂಗಳೂರಿನ ತಳಸಮುದಾಯಗಳ ಅಧ್ಯಯನ ಕೇಂದ್ರ ರಾಷ್ಟ್ರೀಯ ಕಾನೂನು ಶಾಲೆ ಸಂಚಾಲಕ ಪ್ರದೀಪ ರಮಾವತ್‌, ಡಾ| ಅಂಬೇಡ್ಕರ್‌ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಚಂದ್ರಶೇಖರ ಶೀಲವಂತ, ಸಿದ್ಧಾರ್ಥ ಕಾನೂನು ಕಾಲೇಜಿನ ಡಾ| ಚಂದ್ರಶೇಖರ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. 

“ದಲಿತ ಪದ ತರುತ್ತೆ ನೋವು’ ಅಂಬೇಡ್ಕರ್‌ ಅವರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅಂಬೇಡ್ಕರ್‌ ಅವರನ್ನು ಕೇವಲ ದಲಿತರ ನಾಯಕ, ಅಸ್ಪೃಶ್ಯರ ನಾಯಕ ಎಂದು ಹೇಳಬಾರದು. ಅನೇಕ ಸಭೆ, ಸಮಾರಂಭಗಳಲ್ಲಿ ದಲಿತ ನಾಯಕ ಅಂಬೇಡ್ಕರ್‌ ಎಂದು
ಸಂಬೋ ಧಿಸುತ್ತಾರೆ. ಅಲ್ಲದೇ, ನನಗೂ ದಲಿತ ನಾಯಕ ಎಂದೇ ಕರೆಯುತ್ತಾರೆ. ನನಗೆ ಅದನ್ನು ಕೇಳಿ ಬಹಳ ನೋವಾಗುತ್ತದೆ ಎಂದು ಸಂಸದ ಖರ್ಗೆ ನುಡಿದರು. ಅದೇ ಸಮಾರಂಭದಲ್ಲಿ ಬೇರೆ ಯಾವುದೇ ಸಮಾಜದ ನಾಯಕರಿದ್ದರೂ ಅವರನ್ನು ಜಾತಿಗೆ ಸೀಮಿತಗೊಳಿಸಿ ಸಂಬೋಧಿ ಸುವುದಿಲ್ಲ. ದಲಿತ ಸಮುದಾಯದ ನಾಯಕರನ್ನು ಮಾತ್ರ ಜಾತಿ ಮೂಲಕ ಬಿಂಬಿಸಲಾಗುತ್ತದೆ. ಸಂಸತ್ತಿನಲ್ಲೂ ಪದೇ ಪದೇ ಇಂತಹ ಪ್ರಶ್ನೆ ಉದ್ಭವಿಸುತ್ತದೆ. ದಲಿತ ನಾಯಕ ಎಂದಾಗ ಆಗುವ ನೋವು ನನಗೆ ಮಾತ್ರ ಗೊತ್ತು. ಬೇರೆ ಸಮುದಾಯದವರಿಗೆ ಆ ನೋವು ಅರ್ಥವಾಗಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next