ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬದಲಾವಣೆ ಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬ ವಾತಾವರಣದಲ್ಲಿ ಗೋಕಾಕ ತಾಲೂಕಿನ ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ.
ಕಳೆದ ಏಪ್ರಿಲ್ 23ರಂದು ಮತದಾನ ನಡೆದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅರಭಾವಿ ಕ್ಷೇತ್ರದಲ್ಲಿ ತಮಗೇ ಮುನ್ನಡೆ ಖಚಿತ ಎಂಬ ವಿಶ್ವಾಸದಲ್ಲಿದ್ದರೆ ಯುವ ಸಮುದಾಯ ಮಾತ್ರ ಮೋದಿ ದೇಶಕ್ಕೆ ಮತ್ತೆ ಪ್ರಧಾನಿ ಆದರೆ ಎಷ್ಟು ಅನುಕೂಲ ಹಾಗೂ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅಥವಾ ಕಾಂಗ್ರೆಸ್ ನ ಡಾ.ವಿ.ಎಸ್. ಸಾಧುನವರ ಅವರನ್ನು ಗೆಲ್ಲಿಸಿದರೆ ನಮಗೇನು ಲಾಭ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಮತದಾನದ ನಂತರ ಕ್ಷೇತ್ರದಲ್ಲಿ ಕಾಣುತ್ತಿರುವ ವಾತಾವರಣ ನೋಡಿದರೆ ಕಾಂಗ್ರೆಸ್ ಹಾಗೂ ಬಿಜೆಪಿ ಬಹುತೇಕ ಸಮ-ಸಮ ಮತಗಳನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಬಿಜೆಪಿ ವಿರುದ್ಧ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಸಾಧುನವರ ಈ ಕ್ಷೇತ್ರದಲ್ಲಿ ಮುನ್ನಡೆ ಗಳಿಸುವ ವಿಶ್ವಾಸದಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪರ ಈ ಬಾರಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪೂರ್ಣ ಪ್ರಮಾಣದಲ್ಲಿ ಪ್ರಚಾರಕ್ಕೆ ನಿಂತಿರುವದು ಪಕ್ಷದ ವಲಯದಲ್ಲಿ ಹೊಸ ಆಸೆ ಹುಟ್ಟಿಸಿದೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಸುರೇಶ ಅಂಗಡಿ ಹಿನ್ನಡೆ ಅನುಭವಿಸಿದ್ದರು. ಆದರೆ ಈ ಬಾರಿ ಶೇ. 60ರಷ್ಟು ಹೆಚ್ಚಿನ ಮತಗಳನ್ನು ಗಳಿಸುತ್ತಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳುತ್ತಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರಿದ್ದರೂ ಸುರೇಶ ಅಂಗಡಿಗೆ ಕಾಂಗ್ರೆಸ್ ಸಾಕಷ್ಟು ಆತಂಕ ಉಂಟುಮಾಡಿದೆ. ಈ ಬಾರಿ ಕಾಂಗ್ರೆಸ್‌ಗೆ ಜೆಡಿಎಸ್ ಕೈಜೋಡಿಸಿದೆ. ಈ ಕ್ಷೇತ್ರದಲ್ಲಿ ಸುರೇಶ ಅಂಗಡಿ ಹಾಗೂ ಸಾಧುನವರ ನಡುವಿನ ಚುನಾವಣೆ ಎನ್ನುವದಕ್ಕಿಂತ ಶಾಸಕ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸೆಣಸಾಟ ಎಂಬಂತೆ ಕಂಡುಬಂದಿದೆ.
ಕ್ಷೇತ್ರದ ಜನರಿಗೆ ಸುರೇಶ ಅಂಗಡಿ ಪರ ಅಸಮಾಧಾನ ಇದೆ. ಮೂರು ಬಾರಿ ಸಂಸದರಾಗಿದ್ದರೂ ನಮಗೆ ಏನೂ ಮಾಡಿಲ್ಲ. ಈ ಬಾರಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಅಭಿಪ್ರಾಯ ಕ್ಷೇತ್ರದ ಜನರಲ್ಲಿ ವಿಶೇಷವಾಗಿ ಯುವ ಸಮುದಾಯದಲ್ಲಿತ್ತು. ಇದು ತಮಗೆ ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸ.
ಕೇಂದ್ರದಲ್ಲಿ ಮೋದಿ ಅವರು ಐದು ವರ್ಷ ಮಾಡಿದ ಸಾಧನೆ ಜನರಿಗೆ ಬಹಳ ಮೆಚ್ಚುಗೆಯಾಗಿದೆ. ಮತ್ತೆ ಅವರೇ ಪ್ರಧಾನಿಯಾಗಿ ಬರಬೇಕು ಎಂಬ ಅಭಿಪ್ರಾಯ ಎಲ್ಲ ಕಡೆ ಇದೆ. ಇದಲ್ಲದೇ ಕಾಂಗ್ರೆಸ್‌ದಲ್ಲಿ ನಾಯಕತ್ವವೇ ಇರಲಿಲ್ಲ. ಅವರಲ್ಲಿನ ಗೊಂದಲ ನಮಗೆ ಸಹಾಯಮಾಡಿತು ಎಂಬುದು ಬಿಜೆಪಿ ಮುಖಂಡರ ಹೇಳಿಕೆ.
.ಕೇಶವ ಆದಿ