Advertisement

ಒಪಿಎಸ್‌ ಷರತ್ತುಗಳಿಗೆ ಇಪಿಎಸ್‌ ಸಮ್ಮತಿ

06:05 AM Aug 18, 2017 | Harsha Rao |

ಚೆನ್ನೈ : ಕಳೆದ ಕೆಲವು ತಿಂಗಳು ಗಳಿಂದ ಹಲವು ರಾಜಕೀಯ ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ ತಮಿಳುನಾಡಿನಲ್ಲಿ 
ಈಗ ಹೊಸ ವಿದ್ಯಮಾನ ನಡೆದಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತು ತನಿಖೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಜಯಾ ವಾಸವಿದ್ದ ಪೋಯೆಸ್‌ ಗಾರ್ಡನ್‌ ಅನ್ನು ಸ್ಮಾರಕವಾಗಿ ಪರಿವರ್ತಿಸುವುದಾಗಿಯೂ ಘೋಷಿಸಿದ್ದಾರೆ.

Advertisement

ಈ ಘೋಷಣೆಗಳು ಒಂದೆಡೆ, ಎಐಎ ಡಿಎಂಕೆ ಪ್ರಧಾನ ಕಾರ್ಯದರ್ಶಿ, ಸದ್ಯ ಬೆಂಗಳೂರಿನ ಜೈಲಿನಲ್ಲಿರುವ ಶಶಿಕಲಾ ನಟರಾಜನ್‌ಗೆ ಅತಿದೊಡ್ಡ ಹಿನ್ನಡೆಯಾದರೆ, ಮತ್ತೂಂದೆಡೆ ಪಕ್ಷದ ಎರಡೂ ಬಣಗಳ ವಿಲೀನಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಏಕೆಂದರೆ, ಈ ಹಿಂದೆಯೇ ವಿಲೀನಕ್ಕೆ ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಬಣ ಮುಂದಾಗಿತ್ತಾದರೂ ಪಳನಿ ಬಣಕ್ಕೆ ಕೆಲವು ಷರತ್ತುಗಳನ್ನು ಹಾಕಿತ್ತು. ಆ ಷರತ್ತುಗಳಲ್ಲಿ ಜಯಾ ಸಾವಿನ ತನಿಖೆ, ಪೋಯೆಸ್‌ ಗಾರ್ಡನ್‌ನ ಸ್ಮಾರಕ ಕೂಡ ಸೇರಿತ್ತು. ಆದರೆ, ಸರಕಾರ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಘೋಷಿಸದ ಕಾರಣ ವಿಲೀನ ಮಾತುಕತೆ ಸ್ಥಗಿತಗೊಂಡಿತ್ತು.

ಈಗ ಗುರುವಾರ ಮಾತನಾಡಿರುವ ಸಿಎಂ ಪಳನಿಸ್ವಾಮಿ, “ಅಮ್ಮಾ ಸಾವಿನ ತನಿಖೆಗಾಗಿ ಮದ್ರಾಸ್‌ ಹೈಕೋರ್ಟ್‌ನ 
ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃ ತ್ವದ ಆಯೋಗ ರಚಿಸುತ್ತೇವೆ ಮತ್ತು ಪೋಯೆಸ್‌ ಗಾರ್ಡನ್‌ ಅನ್ನು ಸ್ಮಾರಕವಾಗಿ ಬದಲಾಯಿ ಸುತ್ತೇವೆ. ಇದನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸುತ್ತೇವೆ’ ಎಂದು ಹೇಳಿದ್ದಾರೆ. ಈ ಮೂಲಕ ಪಳನಿ ಬಣವು ಪನ್ನೀರ್‌ ಬಣದ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ, ವಿಲೀನದತ್ತ ಹೆಜ್ಜೆಯಿಟ್ಟಿರುವುದು ಸ್ಪಷ್ಟವಾಗಿದೆ.
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಒಪಿಎಸ್‌ ಬಣದ ನಾಯಕ ಪಾಂಡಿಯರಾಜನ್‌, “ವಿಲೀನ ಪ್ರಕ್ರಿಯೆಗಿದ್ದ ಎಲ್ಲ ಅಡ್ಡಿಯೂ ದೂರವಾಯಿತು’ ಎಂದಿದ್ದು, ವಿಲೀನ ಸನ್ನಿಹಿತವಾಗಿರುವ ಸುಳಿವು ನೀಡಿದ್ದಾರೆ. ಪನ್ನೀರ್‌ ಬಣದ ಎರಡು ಷರತ್ತುಗಳು ಇದರಿಂದ ಪೂರೈಸಿದಂತಾಗಿದೆ. ಇನ್ನು ಶಶಿಕಲಾ ಮತ್ತು ದಿನಕರನ್‌ ವಜಾಗೆ ಸಂಬಂಧಿಸಿದ ಪ್ರಕ್ರಿಯೆಗಳು ಬಾಕಿ ಯಿವೆ. ಕಳೆದ ವಾರವಷ್ಟೇ ಇವರಿಬ್ಬರ ಕುರಿತು ಮಾತನಾಡಿದ್ದ ಪಳನಿಸ್ವಾಮಿ ಬಣ, ಅವರಿಬ್ಬರ ನೇಮಕವೂ ಕಾನೂನುಬಾಹಿರ ಎಂದು ಹೇಳಿತ್ತು. ಇದು ದಿನಕರನ್‌ರ ಆಕ್ರೋಶಕ್ಕೂ ಕಾರಣವಾಗಿತ್ತು. ಅಲ್ಲದೆ, ಇದರ ಬೆನ್ನಲ್ಲೇ ತನಗೆ 20 ಮಂದಿ ಶಾಸಕರ ಬೆಂಬಲವಿದೆ ಎಂದು ದಿನಕರನ್‌ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next