ಶಿವಮೊಗ್ಗ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದ್ದು ಎಲ್ಲ ಆಸ್ಪತ್ರೆಗಳು ಹೌಸ್‌ಫುಲ್ ಆಗಿವೆ. ಚಿಕೂನ್‌ಗುನ್ಯಾ, ಡೆಂಘೀ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾದಿಂದ ನರಳಿದ್ದ ಸಾರ್ವಜನಿಕರಿಗೆ ಮತ್ತೂಮ್ಮೆ ಆಘಾತ ಎದುರಾಗಿದೆ.
ಪ್ರತಿ ಗ್ರಾಮಗಳಲ್ಲೂ ಶೀತ, ಜ್ವರ, ವಾಂತಿ, ಭೇದಿ, ತಲೆನೋವು, ಮೈ-ಕೈ ನೋವಿನಿಂದ ಬಳಲುತ್ತಿರುವವರು ಕಂಡುಬರುತ್ತಿದ್ದಾರೆ. ಮನೆಯಲ್ಲಿ ಒಬ್ಬರಿಗೆ ಕಾಯಿಲೆ ಕಾಣಿಸಿಕೊಂಡರೆ ಮನೆಮಂದಿಗೆಲ್ಲ ರೋಗ ಲಕ್ಷಣಗಳು ಹಬ್ಬುತ್ತಿವೆ. ಕೆಲವರು ಮನೆಮದ್ದಿಗೆ ಮೊರೆ ಹೋಗಿದ್ದರೆ ಬಹಳಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಸ್ಪತ್ರೆಗೆ ಹೋದರೂ ತಕ್ಷಣ ಚಿಕಿತ್ಸೆ ಸಿಗುವ ಖಾತರಿ ಇಲ್ಲ. ಪ್ರತಿ ಆಸ್ಪತ್ರೆಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚಿನ ಜನ ಕಂಡುಬರುತ್ತಿದ್ದಾರೆ. ಜ್ವರ ಕಡಿಮೆಯಾದರೂ ಕೆಮ್ಮು, ಸುಸ್ತು ಮಾತ್ರ ನಿಲ್ಲುತ್ತಿಲ್ಲ. ಕೊರೊನಾ ಟೆಸ್ಟ್ ಗೆ ಹೆದರಿ ಕೆಲವರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಕೋವಿಡ್ ಲಸಿಕೆ ಪಡೆದವರಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತಿರುವುದು ವಿಶೇಷ. ಲಸಿಕೆ ಪಡೆದಿದ್ದರೂ ರೋಗ ಬೇಗ ವಾಸಿಯಾಗುತ್ತಿಲ್ಲ. ಮೊದಲೆಲ್ಲ ಇಷ್ಟೊಂದು ಕಾಯಿಲೆ ಕಾಡುತ್ತಿರಲಿಲ್ಲ ಎಂಬುದು ಜನರ ಅಭಿಪ್ರಾಯ.
ಗ್ರಾಪಂ, ನಗರ ಪ್ರದೇಶಗಳಲ್ಲಿ ಸ್ವತ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿಲ್ಲ. ಚರಂಡಿಗಳ ಸ್ವತ್ಛತೆ, ಫಾಗಿಂಗ್, ಜಲಮೂಲಗಳ ಸ್ವಚ್ಛತೆ ಮಾಡದಿರುವುದೇ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಾರಿ ನವೆಂಬರ್ ಅರ್ಧ ಭಾಗ ಕಳೆದರೂ ಮಳೆ ಆರ್ಭಟ ಮುಂದುವರಿದಿದ್ದು ಶೀತಗಾಳಿ ಹೆಚ್ಚಿದೆ. ಸ್ಥಳೀಯ ಆಡಳಿತ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರೆ ತಕ್ಕ ಮಟ್ಟಿಗೆ ರೋಗಗಳ ನಿಯಂತ್ರಣ ಮಾಡಬಹುದು ಎಂಬ ಒತ್ತಾಯ ಕೇಳಿ ಬಂದಿದೆ.
ಡೆಂಘೀ 393, ಚಿಕೂನ್‌ಗುನ್ಯಾ 206 ಪ್ರಕರಣ: ಜಿಲ್ಲೆಯಲ್ಲಿ ಶುಕ್ರವಾರದವರೆಗೆ 3177 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು 2268 ಮಂದಿ ರಕ್ತ ಮಾದರಿ ಸಂಗ್ರಹಿಸಲಾಗಿದೆ. ಒಟ್ಟು 393 ಮಂದಿಗೆ ಡೆಂಘೀ ಪಾಸಿಟಿವ್ ಬಂದಿದೆ. ಅದೇ ರೀತಿ 1623 ಶಂಕಿತ ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು 1129 ಮಂದಿ ರಕ್ತಮಾದರಿ ಸಂಗ್ರಹಿಸಲಾಗಿದೆ. 206 ಮಂದಿಗೆ ಪಾಸಿಟಿವ್ ಬಂದಿದೆ.
ಆಹಾರ ಸೇವಿಸಿ 300ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಶುಕ್ರವಾರ ಒಂದೇ ದಿನ 300ಕ್ಕೂ ಹೆಚ್ಚು ಮಂದಿ ಆಹಾರ ಸೇವಿಸಿದ ನಂತರ ಅಸ್ವಸ್ಥಗೊಂಡಿರುವುದು ಮತ್ತೂಂದು ಆತಂಕ ಸೃಷ್ಟಿಸಿದೆ. ಜಿಲ್ಲೆಯ ಕಾರ್ಗಲ್, ಆಲದಹಳ್ಳಿ, ಸಾಗರ, ಗಾಡಿಕೊಪ್ಪದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಊಟ ಸೇವಿಸಿದ ನಂತರ ವಾಂತಿ, ಭೇದಿ, ತಲೆನೋವು ಕಾಣಿಸಿಕೊಂಡಿದ್ದು 300 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆಗ್ಗಾನ್ ಒಂದರಲ್ಲೇ 150 ಮಂದಿ ದಾಖಲಾಗಿದ್ದಾರೆ. ಇದಲ್ಲದೆ ಹೊಳೆಹೊನ್ನೂರು, ಹೊಳಲೂರು, ಆನವೇರಿ, ಸಾಸ್ವೆಹಳ್ಳಿ, ಹೊನ್ನಾಳಿ ಸೇರಿದಂತೆ ಹಲವೆಡೆ ಖಾಸಗಿ ಕ್ಲಿನಿಕ್ ಗಳು ಫುಲ್ ಆಗಿವೆ. ಮಧ್ಯರಾತ್ರಿವರೆಗೂ ವೈದ್ಯರು ತಪಾಸಣೆ ಮಾಡಿದ್ದಾರೆ.
ಇನ್ನು ಹರಮಘಟ್ಟದಲ್ಲಿ ನಡೆದ ವಾಂತಿ, ಭೇದಿ ಪ್ರಕರಣಕ್ಕೆ ಬ್ಯಾಕ್ಟೀರಿಯಾ ಕಾರಣವಲ್ಲ ಎಂದು ತಿಳಿದುಬಂದಿದೆ. ಅರ್ಧಂಬರ್ಧ ಬೇಯಿಸಿದ್ದ ರೊಟ್ಟಿ ಒಂದರ ಮೇಲೊಂದು ಇಟ್ಟ ಪರಿಣಾಮ ಬೂಸ್ಟ್ ಬಂದಿದ್ದು ಅದನ್ನು ಸೇವಿಸಿದವರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.