ಬಾದಾಮಿ: ಪ್ರವಾಹ ತಗ್ಗಿದ ಬೆನ್ನಲ್ಲೇ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಆತಂಕ ಮೂಡಿಸಿದೆ. ಗ್ರಾಮದಲ್ಲಿ ರಸ್ತೆ ಕೆಸರುಮಯ ಆಗಿರುವ ಕಾರಣ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ತಾಲೂಕಿನ ಸುಳ್ಳ, ಹೆಬ್ಬಳ್ಳಿ, ಮಣ್ಣೇರಿ, ಢಾಣಕಶಿರೂರ ಸೇರಿದಂತೆ ಪ್ರವಾಹ ಪೀಡಿತ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಸ್ತೆಗಳು ಗಲೀಜಿನಿಂದ ಕೂಡಿದ ಕಾರಣ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಬರುತ್ತದೆ ಎಂಬ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.
ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ: ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಸ್ತೆಗಳೆಲ್ಲವೂ ಕೆಸರು ಮಯವಾಗಿರುವುದರಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.
ತಾಲೂಕಿನ ಸುಳ್ಳ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಇದರಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮನೆಯಲ್ಲಿ ನೀರು ತಗ್ಗಿದ ಕಾರಣ ಸ್ವಚ್ಛತಾ ಕಾರ್ಯ ನಡೆದಿದೆ. ಇದರಲ್ಲಿ ಕೆಲವರು ಮನೆಯತ್ತ ತೆರಳುತ್ತಿದ್ದರೆ, ಇನ್ನೂ ಕೆಲವು ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಜಿಲ್ಲಾಡಳಿತದಿಂದ ಸ್ವಚ್ಛತೆ, ಸಾಂಕ್ರಾಮಿಕ ರೋಗ ತಡೆಗಟ್ಟಲು ಮುಂಜಾಗ್ರತೆಗೆ ಕಟ್ಟೆಚ್ಚರ ಸೂಚನೆ ನೀಡಿದ್ದರೂ ಸಹಿತ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆ ಕೈಗೊಂಡಿಲ್ಲ. ತಾಲೂಕಾಡಳಿತ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ಸ್ವಚ್ಛತೆ ಕೈಗೊಂಡು ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ.
•ಶಶಿಧರ ವಸ್ತ್ರದ