Advertisement

ಪರಿಸರ ಪೂರಕ ಗಣೇಶ ಚತುರ್ಥಿ; ತಾಜಾ ಅರಿಶಿನಕ್ಕೆ ಹುಡುಕಾಟ

09:28 PM Aug 18, 2020 | mahesh |

ಉಡುಪಿ: ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬದ ಸಂದರ್ಭ ಪರಿಸರಪೂರಕ ಗಣೇಶೋತ್ಸವವನ್ನು ಆಚರಿಸಲು ಕರೆ ಕೊಡುತ್ತಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಾರಿ ಅರಿಶಿನದಿಂದ ಗಣೇಶ ವಿಗ್ರಹಗಳನ್ನು ತಯಾರಿಸಲು ಕರೆ ನೀಡಿದೆ. ಇದುವರೆಗೆ ನೈಸರ್ಗಿಕ ಬಣ್ಣ ಬಳಸಲು ಕರೆ ನೀಡಲಾಗುತ್ತಿತ್ತು. ತರಕಾರಿ ಗಳಿಂದ ತಯಾರಿಸುವ ಬಣ್ಣ ನೈಸರ್ಗಿಕ ಬಣ್ಣ  ಎಂದು ಹೇಳುತ್ತಾರಾದರೂ ಇದು
ಮಾರುಕಟ್ಟೆಯಲ್ಲಿ ಸಿಗದೆ ಕೇವಲ ಪತ್ರಿಕಾ ಹೇಳಿಕೆಗೆ ಸೀಮಿತವಾಗುತ್ತಿತ್ತು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಸಾಧ್ಯ
ವಾದ ಅರಿಶಿನದಿಂದ ವಿಗ್ರಹ ತಯಾರಿಸಿ ಎಂದು ಮಂಡಳಿ ಕರೆ ನೀಡಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಅರಿಶಿನ ಎಷ್ಟು ತಾಜಾ ಎಂಬ ಸಂದೇಹ ಮೂಡುತ್ತಿದೆ. ಅರಿಶಿನ ನೆಲದಡಿ ಬೆಳೆಯುವ ಒಂದು ಗಡ್ಡೆ. ಇದು ಬೆಳೆದ ಬಳಿಕ ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೂ ಬಹಳ ಉತ್ತಮ. ಹೀಗಾಗಿ ಜ್ವರ, ಶೀತ ಬಾಧೆ ಸಂದರ್ಭ ಹಾಲಿಗೆ ಉತ್ತಮ ಗುಣಮಟ್ಟದ ಅರಿಶಿನದ ಪುಡಿಯನ್ನು ಬೆರೆಸಿ ಕುಡಿಯುವ ಕ್ರಮವಿದೆ.

Advertisement

“ಮಾರುಕಟ್ಟೆಯಲ್ಲಿ ಸಿಗುವ ಅರಿಶಿನವನ್ನು ದೇಹದ ಹೊರಗೆ  ಬಳಸಬಹುದೆ ವಿನಾ ಸೇವಿಸುವಂತಿಲ್ಲ. ನಮ್ಮಲ್ಲಿ ನೂರು  ಗ್ರಾಂ ಅರಿಶಿನಕ್ಕೆ 35 ರೂ. ಇದ್ದರೆ, ಮಾರುಕಟ್ಟೆಯಲ್ಲಿ ಒಂದು  ಕೆ.ಜಿ. ಅರಿಶಿನ 50ರಿಂದ 60 ರೂ.ಗೆ ಸಿಗುತ್ತದೆ. ಹಾಗಿದ್ದರೆ  ನೀವೇ ಗುಣಮಟ್ಟ ಊಹಿಸಿ’ ಎನ್ನುತ್ತಾರೆ ಸಾವಯವ ಕೇಂದ್ರವಾದ ಗೋಮಾತಾ ಟ್ರೇಡರ್ ಮಾಲಕ  ಸತೀಶ್‌ ಅವರು.

ಅರಿಶಿನವನ್ನು ನಾಗರ ಪಂಚಮಿ ದಿನ ತನು ತಂಬಿಲ ಹಾಕುವಾಗ ಬಳಸುತ್ತಾರೆ. ಆದ್ದರಿಂದ ದೇವರಿಗೆ ಸಮರ್ಪಿಸುವಾಗ ಎಂತಹ ಗುಣಮಟ್ಟದ ಅರಿಶಿನ ಬಳಸುತ್ತಿದ್ದೇವೆ ಎಂಬ ಅರಿವು ಮೂಡುತ್ತದೆ. ಇನ್ನು ಗಣೇಶನ ವಿಗ್ರಹ ತಯಾರಿಸುವಾಗಲೂ ಅರಿಶಿನದ ಗುಣ ಮಟ್ಟದ ಬಗ್ಗೆ ಜಾಗೃತಿ ವಹಿಸಬೇಕಾಗಿದೆ. ಕೊರೊನಾದಿಂದಾಗಿ ಈ ಬಾರಿ ಎಲ್ಲ ಕಲಾವಿದರೂ ಚಿಕ್ಕ ವಿಗ್ರಹ ನಿರ್ಮಿಸುತ್ತಿದ್ದಾರೆ. ಮನೆಗಳಲ್ಲಿ ಪೂಜಿಸುವವರಲ್ಲಿ ಬಹುತೇಕರು ಜಾಗೃತಿಯಾಗಿ ಕೇವಲ ಶುದ್ಧ ಮಣ್ಣಿನ ವಿಗ್ರಹ ಮಾಡಿ ಕೊಡಲು ಕಲಾವಿದರಿಗೆ ತಿಳಿಸಿದ್ದಾರೆ.

ಜೇಡಿಮಣ್ಣು ಜೀವರಾಶಿ ಉಳಿವಿಗೆ ಅಗತ್ಯ
ನೈಸರ್ಗಿಕವಾಗಿ ಒಂದು ಇಂಚು ಮಣ್ಣು ರೂಪುಗೊಳ್ಳಲು ಒಂದು ಸಾವಿರ ವರ್ಷ ಬೇಕು. ಜೇಡಿಮಣ್ಣು ಜೀವ ರಾಶಿ ಉಳಿವಿಗೆ, ಕೃಷಿಗೆ ಅತಿ ಮುಖ್ಯ. ಗಣೇಶನ ಪ್ರತಿಮೆಗಳನ್ನು ರೂಪಿಸಲು ಫ‌ಲವತ್ತಾದ ಮಣ್ಣನ್ನು ವ್ಯರ್ಥ ಮಾಡಬಾರದೆಂಬ ಪರಿಕಲ್ಪನೆಗೆ ನಾಂದಿ ಹಾಡಿ ರೋಗ ನಿರೋಧಕ ಶಕ್ತಿ ಇರುವ ಅರಿಶಿನದಿಂದ ಗಣೇಶನ ವಿಗ್ರಹ ತಯಾರಿಸಬಹುದಾಗಿದೆ.
– ಶ್ರೀನಿವಾಸುಲು, ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.

Advertisement

Udayavani is now on Telegram. Click here to join our channel and stay updated with the latest news.

Next