Advertisement

ಪರಿಸರ ರಕ್ಷಣೆಗೆ ಗಾಡ್ಗೀಳ್‌ ವರದಿ ಜಾರಿ ಅಗತ್ಯ

04:36 PM Nov 19, 2018 | |

ಶಿವಮೊಗ್ಗ: ಎಲ್ಲಿಯವರೆಗೆ ಸಮಾಜದಲ್ಲಿರುವ ಪ್ರತಿಯೊಬ್ಬರೂ ಪ್ರಾಮಾಣಿಕರಾಗುವುದಿಲ್ಲವೋ ಅಲ್ಲಿಯವರೆಗೆ ದುರಾಸೆ ನಿಯಂತ್ರಿಸಲು ಸಾಧ್ಯವಿಲ್ಲ. ದುರಾಸೆಯಿಂದುಟಾಗುವ ಭ್ರಷ್ಟಾಚಾರ ಹಾಗೂ ಅಂತವರನ್ನು ಶಿಕ್ಷಿಸುವುದಕ್ಕಾಗಿ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಶಿವಮೊಗ್ಗ ಘಟಕವು ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ “ಮಾಧವ್‌ ಗಾಡ್ಗೀಳ್‌ ವರದಿ ಜಾರಿಗೆ ತನ್ನಿ-ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಇತ್ತೀಚೆಗೆ ಬಿಡುಗಡೆ ಮಾಡಲಾದ ವರದಿಯೊಂದರ ಪ್ರಕಾರ, ಪ್ರಾಮಾಣಿಕತೆಯಲ್ಲಿ ಭಾರತ 84ನೇ ಸ್ಥಾನದಲ್ಲಿದೆ. ಪರಿಸರ ಹಾನಿಯಿಂದ ಲಾಭ ಪಡೆದವರ ಪಟ್ಟಿ ಇಲ್ಲ. ಪರಿಸರ ಹಾನಿಯ ಬಗ್ಗೆ ಅಂಕಿ ಅಂಶಗಳೂ ಸಿಗುವುದಿಲ್ಲ. ಕೆಲವರ ಆಸೆ ಪೂರೈಕೆಗೋಸ್ಕರ ಪರಿಸರ ಹಾಳು ಮಾಡಲಾಗುತ್ತಿದೆ. ಇದೂ ದುರಾಸೆಯಿಂದಲೇ ಆಗುತ್ತಿದೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಆಗಬೇಕಿದ್ದರೆ ಗಾಡ್ಗೀಳ್‌ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕಿದೆ ಎಂದರು.

ಅಕ್ರಮ ಗಣಿಗಾರಿಕೆಯ ಬಗ್ಗೆ ನಾನು ಲೋಕಾಯುಕ್ತದ್ದಲ್ಲಿದ್ದಾಗ ನೀಡಿದ್ದ ವರದಿ ಜಾರಿಗೆ ತರುವ ಶಕ್ತಿ ಯಾವುದೇ ಸರಕಾರಗಳಿಗೆ ಇಲ್ಲ. ಗಣಿಗಾರಿಕೆಯಿಂದಾಗುತ್ತಿರುವ ನಷ್ಟ ಹಾಗೂ ದೇಶದ ಸಂಪತ್ತಿನ ಲೂಟಿ ಸೇರಿದಂತೆ ಹಲವು ಶಿಫಾರಸುಗಳನ್ನು ಈ ವರದಿಯಲ್ಲಿ ಮಾಡಲಾಗಿದೆ. ಆದರಿದು ಧೂಳು ತಿನ್ನುತ್ತಿದೆ. ಇದೇ ರೀತಿ ಲಂಗು ಲಗಾಮಿಲ್ಲದೇ ಗಣಿಗಾರಿಕೆ ಮುಂದುವರಿದರೆ ಬರುವ ಮೂವತ್ತು ವರ್ಷಗಳಲ್ಲಿ ಅದಿರಿನ ಮೂಲವೇ ಇಲ್ಲವಾಗುತ್ತದೆ. 

ಹೀಗಾಗಿ, ಹೊರದೇಶಗಳಿಗೆ ರಫ್ತು ಮಾಡುವುದರ ಮೇಲೆ ಪ್ರತಿಬಂಧ ಹೇರಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು ಎಂದು ಹೇಳಿದರು. ದೇಶದಲ್ಲಿ ಸಾಕಷ್ಟು ಹಗರಣಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವು ಮಾತ್ರ ಬೆಳಕಿಗೆ ಬಂದಿವೆ. ದೇಶಕ್ಕೆ ಇದರಿಂದಾಗುತ್ತಿರುವ ನಷ್ಟದ ಬಗ್ಗೆ ಅಂದಾಜು ಹಾಕಬೇಕಿದೆ. ಈ ಹಿಂದೆ ಜೈಲಿಗೆ ಹೋಗಿ ಬಂದವರಿಗೆ ಊರಿಂದಲೇ ಬಹಿಷ್ಕಾರ ಹಾಕುತಿದ್ದರು. ಆದರೀಗ, ಅಂತಹವರಿಗೆ ಹಾರ ಹಾಕುವ ಸಂಸ್ಕೃತಿ ಬೆಳೆದಿದೆ ಎಂದು ಹೇಳಿದರು.

Advertisement

ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಸ್ಥಾಪಕ ಕೆ.ಎನ್‌.ಗೋವಿಂದಾಚಾರ್ಯ ಮಾತನಾಡಿ, ಪಶ್ಚಿಮಘಟ್ಟ ಸಂರಕ್ಷಣೆ ಸಂಬಂಧ ಮಹತ್ವದ ಶಿಫಾರಸು ಮಾಡಿರುವ ಪ್ರೊ| ಮಾಧವ್‌ ಗಾಡ್ಗೀಳ್‌ ವರದಿ ಪ್ರತಿಯೊಬ್ಬರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಗಾಡ್ಗೀಳ್‌ ವರದಿ ಪೂರ್ಣ ರೈತಾಪಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರ ಪರವಾಗಿ ಎಂಬ ಅಂಶ ಪ್ರತಿಯೊಬ್ಬರಿಗೆ ತಿಳಿಯಬೇಕು.

ಈ ಹಿಂದಿನಿಂದಲೂ ಈ ವರದಿ ಅನುಷ್ಠಾನದಿಂದ ರೈತರಿಗೆ ಅನಾನುಕೂಲಗಳೇ ಹೆಚ್ಚು ಎಂಬಂತೆ ರಾಜಕೀಯ ಪಕ್ಷಗಳು ಬಿಂಬಿಸಿವೆ. ವಾಸ್ತವದಲ್ಲಿ ವರದಿ ಏನನ್ನು ಹೇಳುತ್ತದೆ. ಆಗುವ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರಲ್ಲಿ ತಿಳಿವಳಿಕೆ ಮೂಡಿಸಬೇಕು. ಇದಕ್ಕೆ ಈ ಅಭಿಯಾನ ಪೂರಕವಾಗಲಿದೆ ಎಂದರು.

ಪರಿಸರ ಕೇಂದ್ರಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರತದಂತಹ ಭಿನ್ನ ಪರಿಸರ, ಸಂಸ್ಕೃತಿ ಇರುವ ದೇಶದಲ್ಲಿ ಆಯಾ ಪ್ರದೇಶದ ಪರಿಸರಕ್ಕೆ ಅನುಗುಣವಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಎಲ್ಲದ್ದಕ್ಕೂ ಒಂದೇ ಅಭಿವೃದ್ಧಿಯ ಸೂತ್ರ ಅನ್ವಯಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಡಿಪಿಯನ್ನೇ ಮಾನದಂಡವಾಗಿಟ್ಟುಕೊಂಡು ದೇಶದ ಪ್ರಗತಿಯನ್ನು ಅಳತೆ ಮಾಡಲಾಗುತ್ತಿದೆ. ಆದರೆ, ಜಾಗತಿಕ ಮಟ್ಟದ ಮಾನದಂಡವಾಗಿರುವ ಜಿಡಿಪಿ ಭಾರತದ ಮಟ್ಟಿಗೆ ಸೂಕ್ತವಲ್ಲ. ಉಳಿದ ದೇಶಗಳಲ್ಲಿ ಒಂದೇ ನಮೂನೆಯ ಪರಿಸರ, ನೈಸರ್ಗಿಕ ಸಂಪತ್ತಿದೆ. ಆದರೆ, ನಮ್ಮಲ್ಲಿ ಪರಿಸ್ಥಿತಿ ಹಾಗಿಲ್ಲ. ಆದ್ದರಿಂದ ದೇಶದ ಫಲವತ್ತಾದ ಭೂಮಿ, ಅರಣ್ಯ ಸಂಪತ್ತು ಹೀಗೆ ಹತ್ತು ಹಲವು ಅಂಶಗಳ ಆಧರಿಸಿ ಅಭಿವೃದ್ಧಿ ಅಳತೆ ಮಾಡಬೇಕು ಎಂದು ಸಲಹೆ ನೀಡಿದರು.

ತಂತ್ರಜ್ಞಾನದ ಅತಿ ವಿಜೃಂಭಣೆಯೂ ನಮ್ಮಿ ಸ್ಥಿತಿಗೆ ಕಾರಣವಾಗಿದೆ. ಪ್ರಸಕ್ತ ಎಲ್ಲವನ್ನು ತಂತ್ರಜ್ಞಾನವೇ ನಿಯಂತ್ರಿಸುತ್ತಿದೆ. ಇದರ ಫಲವಾಗಿ ಮಾರಣಾಂತಿಕ ಕ್ಯಾನ್ಸರ್‌ನಂತಹ ಕಾಯಿಲೆ ತುತ್ತಾಗುತ್ತಿದ್ದೇವೆ. ಇಷ್ಟೇ ಅಲ್ಲದೇ, ಖನ್ನತೆ, ಮನೋರೋಗ, ಅನಭಿವೃದ್ಧಿಗೂ ಅತಿಯಾಗಿ ತಂತ್ರಜ್ಞಾನದ ಮೇಲೆ ಅವಲಂಬನೆಯಾಗಿರುವುದೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಂಗಕರ್ಮಿ ಚರಕ ಪ್ರಸನ್ನ ಮಾತನಾಡಿ, ಮನುಷ್ಯನ ತಿಳಿವಳಿಕೆಗೆ ಮಿತಿ ಇಲ್ಲ. ವಿಷಯವನ್ನು ಸಮಗ್ರವಾಗಿ ತಿಳಿದುಕೊಳ್ಳುವ ಬದಲು ಪ್ರತ್ಯೇಕವಾಗಿ ತಿಳಿದುಕೊಳ್ಳುವವರೆ ಹೆಚ್ಚು. ಸಮಗ್ರ ಜ್ಞಾನದಿಂದ ದೂರ ಉಳಿದಿರುವುದೇ ಗಾಡ್ಗೀಳ್‌ ವರದಿ ಅನುಷ್ಠಾನಕ್ಕೆ ಹಿಂಜರಿಯಲು ಕಾರಣ. ಪ್ರತ್ಯೇಕಿತ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಧಿಕಾರದಲ್ಲಿರುವ ಸರಕಾರಗಳಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಹೀಗಾಗಿ, ಸರಕಾರಗಳನ್ನು ನಿರ್ಧರಿಸಬೇಕಾದ ನಾವು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದರು.

ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಪ್ರಮುಖರಾದ ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಪಶ್ಚಿಮಘಟ್ಟದ ಅಭಿವೃದ್ಧಿ ಬೇಡ; ಸಂರಕ್ಷಣೆ ಬೇಕಿದೆ. ಈ ಹಿನ್ನೆಲೆಯಲ್ಲಿಯೇ ಪಶ್ಚಿಮಘಟ್ಟ ತಜ್ಞರ ಸಮಿತಿ ರಚಿಸಲಾಗಿತ್ತು. ಪ್ರೊ| ಮಾಧವ್‌ ಗಾಡ್ಗೀಳ್‌ ಅಧ್ಯಕ್ಷತೆಯಲ್ಲಿ ನಡೆದ ಅಧ್ಯಯನ ವರದಿ ಕೂಡ ನೀಡಿದೆ. ಇದರಲ್ಲಿ ಸೂಕ್ಷ್ಮತೆಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದರು.

ಶೇ.75 ರಷ್ಟು ಅರಣ್ಯ ಪ್ರದೇಶ ಸಂರಕ್ಷಣೆಗೆ ಗಾಡ್ಗೀಳ್‌ ವರದಿ ಶಿಫಾರಸು ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕಸ್ತೂರಿ ರಂಗನ್‌ ವರದಿಯಲ್ಲಿ ಶೇ.27ರಷ್ಟು ಅರಣ್ಯ ಪ್ರದೇಶ ರಕ್ಷಣೆಯ ಬಗ್ಗೆ ಹೇಳಲಾಗಿದೆ. ಇದರ ಪ್ರಕಾರ, ಶೇ.53 ಸಾಂಸ್ಕೃತಿಕ ಅರಣ್ಯ ವಲಯ, ಶೇ.37 ನೈಸರ್ಗಿಕ ವಲಯ ಎಂದು ವಿಂಗಡಿಸಲಾಗಿದೆ ಎಂದು ತಿಳಿಸಿದರು.

ಡ್ಯಾಂ ಕಾಮಗಾರಿಗಳಿಗೆ ಗಾಡ್ಗೀಳ್‌ ವಿರೋಧಿಸಿದ್ದರು. ಆದರೆ, ರಂಗನ್‌ ಇವುಗಳಿಗೆ ಒಪ್ಪಿಗೆ ನೀಡುತ್ತಾರೆ. ಆದರೆ, ಅರಣ್ಯ ಸಂರಕ್ಷಣೆ ಸಂಬಂಧ ಸಿದ್ಧಪಡಿಸಲಾಗಿರುವ ವರದಿ ಅನುಷ್ಠಾನಗೊಂಡಲ್ಲಿ ಹಳ್ಳಿಗರು ಒಕ್ಕಲೇಳಬೇಕಾಗುತ್ತದೆ ಎಂದು ಹಸಿ ಸುಳ್ಳು ಹೇಳಲಾಗುತ್ತಿದೆ. ಇದು ಕೇವಲ ರಾಜಕೀಯ ಪ್ರೇರಿತವಾಗಿ ಹೇಳುವಂತದ್ದಾಗಿದೆ. ಈ ಎರಡೂ
ವರದಿಯಲ್ಲಿ ಇಂತಹ ಯಾವುದೇ ಶಿಫಾರಸು ಇಲ್ಲ ಎಂದರು.
 
ರೈತ ಹೋರಾಟಗಾರ ಕೆ.ಟಿ. ಗಂಗಾಧರ ಮಾತನಾಡಿ, ಈಗ ಅಗ್ರಿ”ಕಲ್ಚರ್‌’, ಅಗ್ರಿ”ಬಿಸಿನೆಸ್‌’ ಆಗಿ ಪರಿವರ್ತನೆಯಾಗಿದೆ. ಹೀಗಾಗಿಯೇ, ಬಂಡವಾಳಶಾಹಿಗಳ ಪರವಾದ ನೀತಿಗಳನ್ನೇ ಸರಕಾರಗಳೂ ರೂಪಿಸುತ್ತಿವೆ. ಕಾನೂನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳೇ ರೈತರಲ್ಲಿ ಇದರ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದರು.

“ನದಿಗಳ ಸಂರಕ್ಷಣೆಯಲ್ಲಿ ಸ್ವಾಭಾವಿಕ ಅರಣ್ಯಗಳ ಮಹತ್ವ’ ಕುರಿತು ನಿವೃತ್ತ ಐಎಫ್‌ಎಸ್‌ ವಿಶೇಷ ಕಾರ್ಯದರ್ಶಿ ಆ.ನ. ಯಲ್ಲಪ್ಪ ರೆಡ್ಡಿ ಮಾತನಾಡಿದರು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಂಚಾಲಕ ಬಸವರಾಜ್‌ ಪಾಟೀಲ್‌, ದಕ್ಷಿಣ ಭಾರತದ ಸಂಚಾಲಕ ಸಿ.ಪಿ. ಮಾಧವನ್‌, ಜಿಯೋಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಕಾರ್ಯದರ್ಶಿ ಆರ್‌.ಎಚ್‌.ಸಾವಾರ್‌, ಕಾಂತೇಶ್‌ ಕದರಮಂಡಲಗಿ, ಪ್ರೊ| ಚಂದ್ರಶೇಖರ್‌, ಕೆ.ವಿ.ವಸಂತ್‌ ಕುಮಾರ್‌ ಇತರರಿದ್ದರು. ಎಸ್‌.ಪಿ. ಅಶೋಕ್‌ ವಂದಿಸಿದರು.

ಪರಿಸರ ಕೇಂದ್ರಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರತದಂತಹ ಭಿನ್ನ ಪರಿಸರ, ಸಂಸ್ಕೃತಿ ಇರುವ ದೇಶದಲ್ಲಿ ಆಯಾ ಪ್ರದೇಶದ ಪರಿಸರಕ್ಕೆ ಅನುಗುಣವಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಎಲ್ಲದ್ದಕ್ಕೂ ಒಂದೇ ಅಭಿವೃದ್ಧಿಯ ಸೂತ್ರ ಅನ್ವಯಿಸುವುದು ಸರಿಯಲ್ಲ  ಕೆ.ಎನ್‌.ಗೋವಿಂದಾಚಾರ್ಯ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಸ್ಥಾಪಕ 

Advertisement

Udayavani is now on Telegram. Click here to join our channel and stay updated with the latest news.

Next