ಕನಕಗಿರಿ: ಪರಿಸರ ದಿನಾಚರಣೆ ಪರಿಸರದ ಸಮಸ್ಯೆಗಳನ್ನು ಕೇಂದ್ರೀಕರಿಸುವ ಮತ್ತು ಅವುಗಳನ್ನು ಸಂಪೂರ್ಣವಾಗಿ ಪರಿಹರಿಸಲು ಪ್ರಯತ್ನಿಸುವ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ತಾಪ ಇಒ ಕೆ.ವಿ. ಕಾವ್ಯರಾಣಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಕ್ಷೀಣಿಸುತ್ತಿರುವ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರಿಗೆ ಅದರ ಬಗ್ಗೆ ತಿಳಿಸಲು ಪರಿಸರ ದಿನ ಆಚರಿಸಲಾಗುತ್ತದೆ. ಇದು ಪರಿಸರವನ್ನು ಉಳಿಸಲು ಕೆಲವು ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಗಮನ ಹರಿಸುತ್ತದೆ. ಈ ದಿನವನ್ನು ಜಾಗತಿಕವಾಗಿ ನೂರಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿದೆ. ಏಕೆಂದರೆ ಈ ಸಮಸ್ಯೆಯನ್ನು ಒಂದು ದೇಶದಿಂದ ಪ್ರತ್ಯೇಕವಾಗಿ ಪರಿಹರಿಸಲಾಗುವುದಿಲ್ಲ. ಪರಿಸರದಲ್ಲಿ ಬದಲಾವಣೆಗಳನ್ನು ನಿಯಂತ್ರಿಸಲು ಪ್ರತಿ ಮಕ್ಕಳು ನಿಮ್ಮ ಮನೆ ಆವರಣದಲ್ಲಿ ಮರಗಳನ್ನು ಬೆಳೆಸಿ, ನಾಡನ್ನು ಉಳಿಸಿ. ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಉಪವಲಯ ಅರಣ್ಯ ಅಧಿಕಾರಿ ಶ್ರೀರಾಮಣ್ಣ, ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ, ಪ್ರಭಾರಿ ಉಪ ಪ್ರಾಂಶುಪಾಲರಾದ ಸೌಜಾದ ಶಭಾನ, ಶಿಕ್ಷಕರಾದ ಶಂಕ್ರಪ್ಪ, ಸುಮಾ ಜಿ., ಅನಿಲ್ ಕುಮಾರ್, ವಿದ್ಯಾವತಿ, ಶಾಮೀದಸಾಬ್ ಹಾಗೂ ಅರಣ್ಯ ಸಿಬ್ಬಂದಿಗಳಾದ ಚಂದ್ರಶೇಖರ, ಶಿವಕುಮಾರ, ದಾವಲಸಾಬ್, ಈರಪ್ಪ, ಲಕ್ಷ್ಮಣ ಸೇರಿದಂತೆ ಇತರರು ಇದ್ದರು.