ಯುವ ಜನರಿಗೆ ಪರಿಸರದ ಕಾಳಜಿ ಮೂಡಿಸಲು ಆಚರಿಸುವ ದಿನವೇ ವಿಶ್ವ ಪರಿಸರ ದಿನ. ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ. ಈ ಸಂದರ್ಭದಲ್ಲಿ ಪರಿಸರದ ಶಿಶುಗಳೆನಿಸಿದ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಇಂದಿನ ಪರಿಸರ ಮಾಲಿನ್ಯದ ಗೂಡಾಗಿದ್ದು, ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು , ನಮ್ಮ ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಅಧಿಕ ಉಷ್ಣಾಂಶ, ಮಣ್ಣಿನ ಮಾಲಿನ್ಯ, ಅರಣ್ಯ ನಾಶ ಹೀಗೆ ಒಂದೇ, ಎರಡೇ ಪರಿಸರದಲ್ಲಿ ಇಂದು ಉಂಟಾಗಿರುವ ಏರುಪೇರುಗಳು. ಈ ಏರುಪೇರುಗಳಿಗೆ ಕಾರಣ, ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯದ ಫಲವಾಗಿದ್ದು, ಅದರ ಪರಿಣಾಮವಾಗಿ ಹೃದಯ ಸಂಬಂಧಿ, ಉಸಿರಾಟ ಸಂಬಂಧಿ, ಅಪೌಷ್ಟಿಕತೆಯಂತಹ ಅನೇಕ ದುಷ್ಪರಿಣಾಮ ನಾವು ಎದುರಿಸುತ್ತಿದ್ದೇವೆ.
ಕೇವಲ ವರ್ಷಕ್ಕೆ ಒಂದು ದಿನದ ಪರಿಸರ ರಕ್ಷಣೆ ಎಂಬುದು ಸೀಮಿತವಾಗಬಾರದು. ಪ್ರತಿ ದಿನವು ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪರಿಸರವಿಲ್ಲದೆ ಮಾನವ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ನಾವೆಲ್ಲರೂ ಸಾಗಬೇಕು ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ.
ಪರಿಸರ ಎಂಬ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ರೂಪದಲ್ಲಿ ಅಂದರೆ ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವಿಸುತ್ತ ಇರುತ್ತಿದೆವೆ. ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ ಬೆಸೆದು, ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನು ನಿಕಟಗೊಳಿಸಿ ಜೀವಜಾಲವನ್ನಾಗಿಸಿದೆ.
ಆದರ್ಶ ಪ್ರೇಮಿಗಳಾದ ಸಾಲುಮರದ ತಿಮ್ಮಕ್ಕ ಅವರು 248 ಸಸಿಗಳನ್ನು ನೆಟ್ಟು ಇಂದಿಗೆ ಅವುಗಳ ಮೌಲ್ಯವು ಸುಮಾರು 15 ಲಕ್ಷ ರೂ.ಗಳೆಂದು ಅಂದಾಜು ಮಾಡಲಾಗಿದೆ. ಈ ಮರಗಳ ನಿರ್ವಹಣೆಯನ್ನು ಸರಕಾರ ವಹಿಸಿಕೊಂಡಿದ್ದ. ಇನ್ನೂ ತುಳಸಿಗೌಡ ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಇಲ್ಲದೆ ಇಳಿ ವಯಸ್ಸಿನಲ್ಲೂ ಲಕ್ಷಾಂತರ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಪ್ರೀತಿಯನ್ನು ತೋರುತ್ತಿದ್ದಾರೆ. ಇವರೂ ಅರಣ್ಯ ವಿಶ್ವಕೋಶ ಎಂದೆ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಇವರಿಗೆ 72 ವರ್ಷವಾದರೂ ಈಗಲೂ ಪರಿಸರ ಕಾಳಜಿಯನ್ನು ತೋರುತ್ತೀರುವ ಇವರೂ ಯಾವ ಸಮಯಕ್ಕೆ ಯಾವ ಸಸಿಯನ್ನು ನೆಡಬೇಕು, ಯಾವ ಸಂದರ್ಭದಲ್ಲಿ ಹೂ, ಮತ್ತು ಹಣ್ಣು ಬಿಡುತ್ತವೆ ಎಂಬುದು ಇವರ ಜ್ಞಾನ ಭಂಡಾರದಲ್ಲಿದೆ ಎಂದು ಹೇಳಬಹುದು.
ಮಾನವ ಜೀವಿಯೂ ಪ್ರಕೃತಿಯ ನಿಯಮಗಳನ್ನು ಪಾಲಿಸಿದ್ದರೆ ಬಹುಷ್ಯ ಇಂದು ಯಾವುದೇ ಸಮಸ್ಯೆಗಳು ಬರುತ್ತಿರಲಿಲ್ಲ. ಒಂದು ಹನಿ ನೀರಿಗಾಗಿ ಇಂದು ಪರದಾಡುವಂತಾಗಿದೆ ಎಂದರೆ ಅದಕ್ಕೆ ಹೊಣೆ ಯಾರು? ನಾವೆ ಅಲ್ಲವೇ! ಈ ಬಗ್ಗೆ ನಾವು ಚಿಂತಿಸಿ ಸೂಕ್ತ ಕ್ರಮವನ್ನು ಕೈಗೊಂಡಾಗ ಮಾತ್ರ ಪರಿಸರ ಸಂರಕ್ಷಣೆ ಮಾಡುವುದಕ್ಕೆ ಸಾಧ್ಯ.
ನಿಸರ್ಗ ಸಿ.ಎ., ಚೀರನಹಳ್ಳಿ