ದೇವನಹಳ್ಳಿ: ಪರಿಸರ ಸಂರಕ್ಷಣೆ ಕಾರ್ಯವನ್ನು ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ಸ್ವತ್ಛ, ಸುಂದರ ವಾತಾವರಣ ನಿರ್ಮಾಣವಾಗುತ್ತದೆ. ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಹಸಿರಿನಿಂದ ಕಂಗೊಳಿಸುವ ಪರಿಸರ ನಮ್ಮೆಲ್ಲರದಾಗುತ್ತದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ. ರವಿಕುಮಾರ್ ತಿಳಿಸಿದರು.
ತಾಲೂಕಿನ ಕೊಯಿರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ, ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಟ, ಆವತಿ ಮಹಾಶಕ್ತಿ ಕೇಂದ್ರದಿಂದ ನಡೆದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರದಲ್ಲಿನ ಗಿಡಮರಗಳು ಮನುಷ್ಯನ ಬದುಕನ್ನು ಶ್ರೀಮಂತಗೊಳಿಸುತ್ತಿದೆ. ಪರಿಸರ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತದ ಹೆಮ್ಮೆಯ ಪ್ರಧಾನಿ ಮೋದಿ ಹುಟ್ಟುಹಬ್ಬದಿಂದ ಗಾಂಧಿ ಜಯಂತಿಯವರೆಗೆ ಸೇವಾ ಪಾಕ್ಷಿಕ ಆಚರಿಸಲಾಗುತ್ತಿದೆ ಎಂದರು.
ಅ.2ರವರೆಗೆ ಕಾರ್ಯಕ್ರಮ: ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಟ ಸಂಚಾಲಕ ನೀಲೇರಿ ಅಂಬರೀಶ್ ಗೌಡ ಮಾತನಾಡಿ, ಹಸಿರೇ ಉಸಿರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಆ ಹಸಿರಿನ ಪರಿಸರ ಉಳಿಯದೇ ಹೋದರೆ ಮನುಷ್ಯನ ಉಸಿರು ಉಳಿಯಲು ಸಾಧ್ಯವಿಲ್ಲ. ಪ್ರಕೃತಿಗೆ ಪೂರಕವಾಗಿ ಮನುಷ್ಯ ಸ್ವಾರ್ಥರಹಿತ ಜೀವನ ನಡೆಸುವ ಮೂಲಕ ಸಾರ್ಥಕತೆ ಪಡೆದುಕೊಳ್ಳಬಹುದಾಗಿದೆ. ಕಳೆದ ಹತ್ತು ದಿನಗಳಿಂದ ಬಿಜೆಪಿ ಸೇವಾ ಪಾಕ್ಷಿಕವನ್ನು
ಆಚರಿಸಿಕೊಂಡು ಬರುತ್ತಿದ್ದೇವೆ. ಅ.2ರವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಪರಿಸರವನ್ನು ಉಳಿಸಿದರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಭೂಮಿ ಮೇಲಿನ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೆ ಪರಿಸರ ಬೇಕಾಗಿದೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ತಾಪಂ ಮಾಜಿ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಎನ್.ರಮೇಶ್‌ಬಾಬು, ತಾಲೂಕು ಬಿಜೆಪಿ ಉಪಾಧ್ಯಕ್ಷ ಸಾವಕನಹಳ್ಳಿ ನಾಗೇಶ್, ಗ್ರಾಪಂ ಮಾಜಿ ಸದಸ್ಯ ಬೂದಿಗೆರೆ ಪ್ರಭಾಕರ್, ಗ್ರಾಪಂ ಸದಸ್ಯರಾದ ಮುನೀಂದ್ರ, ನಯನ, ತಾಲೂಕು ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಅಮರನಾರಾಯಣ್, ಕಾರ್ಯದರ್ಶಿ ಚಂದ್ರಪ್ಪ, ಬಿಜೆಪಿ ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ರೂಪೇಶ್, ಸೈನಿಕ ಪ್ರಕೋಷ್ಟದ ಸಂಚಾಲಕ ವೆಂಕಟೇಶ್, ಮುಖಂಡರಾದ ಕೆ.ಸಿ.ಮುನಿರಾಜು, ಎನ್.ಹರೀಶ್, ಹರ್ಷವರ್ಧನ್, ವೆಂಕಟೇಗೌಡ, ಚಂದ್ರಸಾಗರ್, ಮುನಿರಾಜು ಕೆಂಪಣ್ಣ ಹಾಜರಿದ್ದರು.