Advertisement

ಪರಿಸರ ರಕ್ಷಣೆಗೆ ಅಭಿವೃದ್ಧಿ ತ್ಯಾಗ ಅಗತ್ಯ

11:36 AM Sep 26, 2018 | Team Udayavani |

ಮೈಸೂರು: ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಅಭಿವೃದ್ಧಿಯನ್ನು ತ್ಯಾಗ ಮಾಡಬೇಕಿದ್ದು, ಈ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸ್ವದೇಶಿ ಜಾಗರಣ್‌ ಮಂಚ್‌ ರಾಷ್ಟ್ರೀಯ ಸಹ ಸಂಯೋಜಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು. 

Advertisement

ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಜನಚೇತನ ಟ್ರಸ್ಟ್‌ ಮತ್ತು ಸ್ವದೇಶಿ ಜಾಗರಣ ಮಂಚ್‌ ಕರ್ನಾಟಕ ಆಯೋಜಿಸಿದ್ದ ಪಶ್ಚಿಮಘಟ್ಟ ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ “ಮಾಧವ ಗಾಡ್ಗಿಳ್‌ ಮತ್ತು ಕಸ್ತೂರಿ ರಂಗನ್‌ ವರದಿ’ ಕುರಿತು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಎಂಬುದು ಫ್ಯಾಷನ್‌ ಆಗಿದೆ. ನದಿಗಳ ಜೋಡಣೆ, ತಿರುವಿನಂತಹ ಹುಚ್ಚು ಯೋಜನೆಗಳು ಹೆಚ್ಚಾಗಿದ್ದು, ಇವುಗಳ ಹಿಂದೆ ಹಣದ ಸೂಟ್‌ಕೇಸ್‌ಗಳಿವೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಈ ಹಿಂದೆಯೇ ಗಾಡ್ಗಿàಳ್‌ ಅಥವಾ ಕಸ್ತೂರಿ ರಂಗನ್‌ ವರದಿ ಜಾರಿಯಾಗಿದ್ದರೆ ಕೊಡಗಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು. 

ಹೆಚ್ಚಿನ ಮಹತ್ವ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಗಾಡ್ಗಿàಳ್‌ ನೀಡಿದ ವರದಿ ಕೆನೆಭರಿತ ಗಟ್ಟಿ ಹಾಲಾದರೆ, ಕಸ್ತೂರಿ ರಂಗ್‌ನರ ವರದಿ ನೀರು ಮಿಶ್ರಿತ ತಿಳಿಯಾದ ಹಾಲಾಗಿದೆ. ಗಾಡ್ಗಿಳ್‌ ಬುದ್ಧಿ ಮತ್ತು ಹೃದಯ ಪೂರ್ವಕವಾಗಿ ವರದಿ ಸಿದ್ದಪಡಿಸಿದ್ದರೆ, ಕಸ್ತೂರಿ ರಂಗನ್‌ ಕೇವಲ ಬುದ್ದಿಯಿಂದ ಮಾತ್ರ ವರದಿ ಮಾಡಿದ್ದಾರೆ.

ಎರಡೂ ವರದಿಗಳು ಪಶ್ಚಿಮಘಟ್ಟದ ಸಂರಕ್ಷಣೆಯ ಬಗ್ಗೆ ಶಿಫಾರಸು ಮಾಡಿದ್ದರೂ, ಕಟ್ಟುನಿಟ್ಟಿನ ಶಿಫಾರಸು ಮಾಡಿದ್ದ ಗಾಡ್ಗಿàಳ್‌ ವರದಿಯಲ್ಲಿ ಪಶ್ಚಿಮಘಟ್ಟದ ಸಂರಕ್ಷಣೆಗೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

Advertisement

ಸರ್ಕಾರಗಳ ತಾರತಮ್ಯ: ಖ್ಯಾತ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆ ವಿಚಾರದಲ್ಲಿ ಸರ್ಕಾರಕ್ಕೆ ತಲೆ ಮತ್ತು ಹೃದಯ ಎರಡೂ ಇಲ್ಲದಂತಾಗಿದೆ. ಎರಡನ್ನೂ ಮಾರಿಕೊಂಡಿರುವ ಸರ್ಕಾರ ಪರಿಸರ ಸಂರಕ್ಷಣೆ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.

ಸರ್ಕಾರಗಳ ಇಂತಹ ತಾರತಮ್ಯ ಧೋರಣೆ ಹಾಗೂ ತಮಗೆ ಸಂಬಂಧವಿಲ್ಲದಂತೆ ಇರುವ ಮನಸ್ಥಿತಿ ದೇಶವನ್ನೇ ಹಾಳು ಮಾಡಲಿದೆ. ಇತ್ತೀಚೆಗೆ ಕೊಡಗಿನಲ್ಲಿ ಮಳೆಯಿಂದ ಭಾರೀ ಅನಾಹುತ ಸಂಭವಿಸಿದ್ದು, ಈ ವೇಳೆ ಎಲ್ಲರೂ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡಿದರೆ ಹೊರತು, ಸಮಸ್ಯೆಗೆ ಕಾರಣ ಯಾರು? ಎಂಬ ಬಗ್ಗೆ ಯಾರೊಬ್ಬರೂ ಚರ್ಚಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ಪರಿಸರವಾದಿ ನಿರ್ಮಲಾಗೌಡ ಡಾ.ಯಲ್ಲಪ್ಪರೆಡ್ಡಿ ವರದಿ ಕುರಿತು ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಜನಚೇತನ ಟ್ರಸ್ಟ್‌ನ ಅಧ್ಯಕ್ಷ ಪ್ರಸನ್ನ ಎನ್‌.ಗೌಡ, ಸ್ವದೇಶಿ ಮಂಚ್‌ ರಾಜ್ಯ ಸಂಯೋಜಕ ಎನ್‌.ಆರ್‌. ಮಂಜುನಾಥ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next