ಮೂಡುಬಿದಿರೆ: ಮಾನವನ ದುರಾಸೆ, ವಿವೇಚನ ರಹಿತ ಯೋಜನೆಗಳಿಂದ ಪರಿಸರವು ಇಂದು ವಿನಾಶದ ಅಂಚನ್ನು ತಲುಪಿದೆ. ಹಿತಮಿತವಾಗಿ ಪರಿಸರವನ್ನು ಬಳಸಿಕೊಂಡಾಗ ಮಾತ್ರ ಪರಿಸರದ ಉಳಿವು ಸಾಧ್ಯ ಎಂದು ಮೂಡುಬಿದಿರೆ ಪುರಸಭೆಯ ಪರಿಸರ ಎಂಜಿನಿಯರ್ ಶಿಲ್ಪಾ ಎಸ್. ಹೇಳಿದರು.
ಪರಿಸರ ದಿನಾಚರಣೆಯ ಅಂಗವಾಗಿ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜರಗಿದ “ಪರಿಸರ ಉಳಿಸಿ, ಬೆಳೆಸಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿಮಾತನಾಡಿದರು.
ಆಹಾರ ಬಳಕೆ, ವಿದ್ಯುತ್‌ನ ಬಳಕೆ, ನೀರಿನ ಬಳಕೆ, ಇಂಧನದ ಬಳಕೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ; ಶಾಲಾ ಜೀವನದಿಂದಲೇ ವಿದ್ಯಾರ್ಥಿಗಳು ಪರಿಸರದ ಉಳಿವಿಗೆ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಪರಿಸರದ ರಕ್ಷಣೆ, ಅಭಿವೃದ್ಧಿ ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಸಾಂದರ್ಭಿಕವಾಗಿ ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು.
ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಪರಿಸರದ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿದರು. ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ವೀಡಿಯೋ ಪ್ರದರ್ಶನ ಹಾಗೂ ಹಾಡುಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.