Advertisement

ನಗರದಲ್ಲೊಬ್ಬರು ಪರಿಸರ ಪ್ರೇಮಿ; ಇವರಲ್ಲಿದೆ ವೆರೈಟಿ ಹಣ್ಣಿನ ಗಿಡ

09:50 AM Aug 05, 2018 | |

ಮಹಾನಗರ: ಸಿಟಿಯಲ್ಲೊಬ್ಬರು ಪರಿಸರ ಪ್ರೇಮಿ. ನಗರದ ಅನೇಕ ಕಡೆಗಳಲ್ಲಿ ಗಿಡ ನೆಟ್ಟು ತಾವೇ ಪೋಷಣೆ ಮಾಡುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ತನ್ನ ಮನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಸಿ ಕಟ್ಟಿದ ಹಣ್ಣಿನ ಗಿಡಗಳನ್ನು ಪೋಷಿಸುತ್ತಿದ್ದಾರೆ. ಪರಿಸರ ರಕ್ಷಣೆ ಮಾಡುವ ಮಂದಿಗೆ ಉಚಿತ ಗಿಡಗಳನ್ನೂ ನೀಡಿ ಮಾದರಿ ಎನಿಸಿಕೊಂಡಿರುವ ಇವರು ಅಶೋಕ ನಗರದ ನಿವಾಸಿ ಬಿ. ಸರ್ವೇಶ್‌ ರಾವ್‌. ಮನೆಯಿಂದಲೇ ಪರಿಸರ ಸಂರಕ್ಷಣೆ ಪ್ರಾರಂಭಿಸಿ ವನಸಿರಿಗೆ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ತಮ್ಮ ಮನೆಯಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪುಟ್ಟ ಸಸ್ಯಧಾಮ ನಿರ್ಮಿಸಿದ್ದಾರೆ. 

Advertisement

ಜತೆಗೆ ಅವರು ಕಸಿ ಕಟ್ಟುವ ಕಾರ್ಯವು ನಡೆಸುವ ಅವರು ಗಿಡಗಳನ್ನು ಸ್ವಂತ ಮಕ್ಕಳಂತೆ ಪೋಷಿಸುತ್ತಾರೆ. ಅವರು ನಗರದಲ್ಲಿ ಎಲೆಕ್ಟ್ರಿಕಲ್‌ ರಿವೈಂಡಿಂಗ್‌ ಅಂಗಡಿ ನಡೆಸುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಒಂದಿಷ್ಟು ಸಮಯವನ್ನು ಸಸಿಗಳ ಪೋಷಣೆಗಾಗಿ ಮೀಸಲಿಡುತ್ತಾರೆ. ಅವರು ಈ ಹವ್ಯಾಸ ಆರಂಭಿ ಸಿದ್ದು ಸುಮಾರು 4 ವರ್ಷಗಳ ಹಿಂದೆ. ಮೊದಲು ಮನೆಯಲ್ಲಿ ವಿವಿಧ ತಳಿಯ ದಾಸವಾಳ ಸಸಿಗಳನ್ನು ಪೋಷಣೆ ಮಾಡಲು ಪ್ರಾರಂಭಿಸಿದರು.

ಕಾಲಾನುಕ್ರಮೇಣ ಈ ಗಿಡಗಳಿಗೆ ರೋಗ ಉಲ್ಬಣಗೊಂಡಿತು. ಇದಾದ ಬಳಿಕ ಮನೆಯ ಪಕ್ಕದಲ್ಲಿರುವ ಸುಮಾರು 8.50 ಸೆಂಟ್ಸ್‌ ಜಾಗದಲ್ಲಿ ಹಣ್ಣಿನ ಗಿಡಗಳ ನರ್ಸರಿ ಪ್ರಾರಂಭಿಸಿದರು. ಮಣ್ಣಗುಡ್ಡ ಶಾಲೆ ಪರಿಸರ, ಮಾರಿಗುಡಿ ದೇವಸ್ಥಾನ ಅಕ್ಕಪಕ್ಕ ಸೇರಿದಂತೆ ನಗರದ ವಿವಿಧೆಡೆ ಸರ್ವೇಶ್‌ ಅವರು ಗಿಡಗಳನ್ನು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ, ಬೇಸ ಗೆಯಲ್ಲಿ ಸಂಜೆ ಆಯಾ ಪ್ರದೇಶಗಳಿಗೆ ತೆರಳಿ ಗಿಡಗಳಿಗೆ ನೀರು ಹಾಯಿಸುತ್ತಾರೆ. ಮಂಗಳಾ ಮೈದಾನದ ವಾಕಿಂಗ್‌ ಟ್ರಾಕ್‌ ಬಳಿ ಇವರು ನೆಟ್ಟ ಗಿಡಗಳಿಗೆ ಪರಿಸರ ಪ್ರೇಮಿ ವಿಜಯ್‌ ಅವರು 4 ವರ್ಷಗಳಿಂದ ನೀರು ಹಾಯಿಸುತ್ತಿದ್ದಾರೆ.

ಕಣ್ಣೆದುರೇ ಗಿಡ ಸತ್ತಾಗ ಆಗುವ ನೋವು ಅಷ್ಟಿಷ್ಟಲ್ಲ
ನಗರದ ಪತ್ರಿಕಾಭವನ ಎದುರು ಹಿಂದೆ ಹೈಬ್ರಿàಡ್‌ ನೇರಳೆ ಗಿಡ ನೆಟ್ಟಿದ್ದೆ. ಪ್ರತೀ ದಿನ ಗಿಡಕ್ಕೆ ನೀರು ಹಾಕಿ ಪೋಷಿಸುತ್ತಿದ್ದೆ. ಆದರೆ ಪಾಲಿಕೆ ಯಂತ್ರದ ಮೂಲಕ ಸುತ್ತಲೂ ಹುಲ್ಲು ತೆಗೆಯುವ ಸಂದರ್ಭ ಆ ಗಿಡಕ್ಕೆ ಪೆಟ್ಟಾಗಿದೆ. ಇದಾದ ಕೆಲವು ದಿನಗಳಲ್ಲೇ ಅದು ಸತ್ತು ಹೋಯಿತು. ಇಂದಿಗೂ ಸತ್ತ ಗಿಡ ಅಲ್ಲೇ ಇದ್ದು, ಪ್ರತೀ ದಿನ ಆ ಮಾರ್ಗದಲ್ಲಿ ತೆರಳುವಾಗ ನನಗಾಗುವ ನೋವು ಅಷ್ಟಿಷ್ಟಲ್ಲ ಎನ್ನುತ್ತಾರೆ ಸರ್ವೇಶ್‌ ರಾವ್‌.

ಏನೆಲ್ಲ ಗಿಡಗಳಿವೆ
ತನ್ನ ನರ್ಸರಿಯಲ್ಲಿ ಲಿಲ್ಲಿ, ಕೆಂಟ್‌, ಮಾಯ, ಆಸ್ಟಿನ್‌, ಬ್ಲಾಕ್‌ ಮ್ಯಾಂಗೋ ಸೇರಿದಂತೆ ಹತ್ತಕ್ಕೂ ಹೆಚ್ಚು ವಿದೇಶಿ ಮಾವು, ಮುಂಡಪ್ಪ, ಮಲ್ಲಿಕಾ, ಬಳಂಜ ಮಿಡಿ, ಮಣಪುರಂ, ಬಂಗನ್‌ಪಳ್ಳಿ, ತೋತಾಪುರಿ, ರಸಪುರಿ ಸೇರಿದಂತೆ 30 ಜಾತಿಯ ದೇಸಿ ಮಾವಿನ ತಳಿ, ಸಿಂಗಾಪುರ ವಡ, ಪತ್ತಂ ಮಟಂ, ಅನನ್ಯ, ತೇವ್‌ ವರಿಕಾ, ಜೆ-33 ಮಲೇಷ್ಯಾ, ಸಿಂಧೂರ ಸೇರಿದಂತೆ 15 ಜಾತಿಯ ಹಲಸು, ಗೋವಾ, ಕೃಷ್ಣಗಿರಿ, ಅಲಹಾಬಾದ್‌ ತಳಿಯ ಪೇರಳೆ, ತೈಲ್ಯಾಂಡ್‌ ದೇಶದ ಚಿಕ್ಕು, ನಾಲ್ಕು ಜಾತಿಯ ನೇರಳೆ, ಪುನರ್‌ಪುಳಿ, ಲಿಂಬೆ, ಮೆಣಸು, ಮಿರಾಕಲ್‌ ಫ್ರೂಟ್‌, ಕಡ್ಲೆ -ಬಟರ್‌ಫ್ರೂಟ್‌, ಕಿತ್ತಳೆ ಸೇರಿದಂತೆ ಹತ್ತಾರು ಜಾತಿಯ ಹಣ್ಣಿನ ಗಿಡಗಳಿವೆ. ನೀರು ಹಾಯಿಸುಲು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ.

Advertisement

ವಾಟ್ಸಾಫ್‌ ಗ್ರೂಪ್‌ ಮೂಲಕ ಪರಿಹಾರ
ಗಿಡಕ್ಕೆ ರೋಗ ತಗುಲಿದರೆ, ಇಳುವರಿಗೆ ಕಡಿಮೆಯಾಗುವುದು ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ‘ಹೊಸ ಫಲ’ ಎಂಬ ವಾಟ್ಸಾಫ್‌ ಗ್ರೂಪ್‌ ಮೂಲಕ ಚರ್ಚೆ ನಡೆಸುತ್ತಾರೆ. ಗಿಡಗಳ ಪೋಷಣೆಯ ಬಗ್ಗೆ ಏನೇ ಸಮಸ್ಯೆಗಳಿದ್ದರೂ ಈ ಗ್ರೂಪ್‌ ನಲ್ಲಿರುವ ತಜ್ಞರು ಸೂಕ್ತ ಸಲಹೆ ನೀಡುತ್ತಾರೆ. ಅಲ್ಲದೆ, ಕಸಿ ಕಟ್ಟುವಿಕೆಯ ಬಗ್ಗೆ ಕಸಿ ತಜ್ಞ ಗುರುರಾಜ್‌ ಬಾಳ್ತಿಲ್ಲಾಯ ಮಾಹಿತಿ ನೀಡಿದ್ದಾರೆ. ಮಾಧವ ಉಳ್ಳಾಲ ಮತ್ತಿತರರು ಸಹಕಾರ ನೀಡುತ್ತಿದ್ದಾರಂತೆ.

ಪ್ರಕೃತಿ ವಿಕೋಪಕ್ಕೆ ನಾವೇ ಕಾರಣ
ಸಮಾಜದಲ್ಲಾಗುವ ಪ್ರಕೃತಿ ವಿಕೋಪಗಳಿಗೆ ಮನುಷ್ಯನೇ ನೇರ ಹೊಣೆ. ಗಿಡಗಳನ್ನು ನೆಟ್ಟು ಪರಿಸರಕ್ಕೆ ಕಿಂಚಿತ್ತು ಸೇವೆ ಮಾಡಿದರೆ ಅದೇ ಸಾರ್ಥಕ. ಅದರಲ್ಲಿಯೂ ಮನೆಯಲ್ಲೇ ಕಸಿಕಟ್ಟಿ ಗಿಡಗಳನ್ನು ನೆಟ್ಟರೆ ನಮ್ಮ ಜೀವಿತಾವಧಿಯಲ್ಲಿಯೇ ಫಲ ಸಿಗುತ್ತದೆ.
– ಬಿ. ಸರ್ವೇಶ್‌ ರಾವ್‌,
ಪರಿಸರ ಪ್ರೇಮಿ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next