ದುಬಾೖ: ಕೋವಿಡ್ ಸೋಂಕಿನಿಂದಾಗಿ ಜಗತ್ತು ನಾನಾ ವಿಧದ ಸಮಸ್ಯೆಗಳಿಂದ ಬಳಲುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಪರಿಸರ ಸಮಸ್ಯೆಯ ಭೀತಿ ಎದುರಾಗಿದೆ. ವಿಶೇಷವಾಗಿ ಸುರಕ್ಷತೆ ದೃಷ್ಟಿಯಿಂದ ಬಳಸಿ ಎಸೆಯುವ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಅವುಗಳೇ ಮಾರಕವಾಗುವ ಭೀತಿ ಕಾಡಿದೆ. ಕೈಗವಸುಗಳು, ಒಂದು ಬಾರಿ ಬಳಸುವ ನೀರಿನ ಬಾಟಲಿಗಳು, ಪ್ಯಾಕಿಂಗ್ ಸಲಕರಣೆಗಳು, ಮುಖಗವಸುಗಳು, ವೈದ್ಯಕೀಯ ಪರಿಕರಗಳನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಇತ್ಯಾದಿಗಳನ್ನು ಒಂದು ಬಾರಿ ಬಳಕೆ ಬಳಿಕ ಎಸೆಯುವುದರಿಂದ ಪ್ಲಾಸ್ಟಿಕ್ ರಾಶಿ ಸೃಷ್ಟಿಯಾಗುವ ಅಪಾಯವಿದೆ. ಎಲ್ಲ ದೇಶಗಳಲ್ಲಿ ಇದೇ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದ್ದರೂ, ಪ್ಲಾಸ್ಟಿಕ್ ನಿರ್ವಹಣೆಯಲ್ಲಿ ಹಿಂದಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಸಮಸ್ಯೆ ಬಿಗಡಾಯಿಸಲಿದೆ ಎನ್ನಲಾಗಿದೆ.
ಪ್ಲಾಸ್ಟಿಕ್ ಸಮಸ್ಯೆ ಅವ್ಯಾಹತವಾಗಿ ಬೆಳೆಯುತ್ತಿರುವುದರಿಂದ ಮುಂದುವರಿದ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಒಮಾನ್‌ಗಳಲ್ಲಿ ಸ್ಥಳೀಯಾಡಳಿತಗಳು ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಿದ್ದವು. ರೆಸ್ಟೋರೆಂಟ್‌ಗಳಲ್ಲಾಗಲಿ, ಸೂಪರ್ ಮಾರ್ಕೆಟ್‌ಗಳಲ್ಲಾಗಲಿ ಇದನ್ನು ಬಳಸುವಂತೆ ಇರಲಿಲ್ಲ. ಆದರೆ ಕೋವಿಡ್ ಪರಿಣಾಮ ಈ ನಿಷೇಧವೆಲ್ಲವೂ ಉಲ್ಟಾ ಪಲ್ಟಾ ಆಗಿದೆ. ಏಕಾಏಕಿ ಒಂದೇ ಬಾರಿ ಬಳಕೆಯ ಪ್ಲಾಸ್ಟಿಕ್‌ಗಳ ಉಪಯೋಗ ಸಾವಿರ ಪಟ್ಟು ಹೆಚ್ಚಾಗಿದೆ. ಕೋವಿಡ್ ಸುರಕ್ಷತೆಗಾಗಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಬಳಸುವುದಕ್ಕಿಂತ ಇತರ ಪ್ಲಾಸ್ಟಿಕ್‌ಗಳನ್ನು ಸರಿಯಾಗಿ ಸ್ಯಾನಿಟೈಸ್ ಮಾಡಿ ಬಳಸಬಹುದು ಎಂದು ಪರಿಣತರು ಹೇಳುತ್ತಾರೆ. ಕೆಲವೊಂದು ವೈದ್ಯಕೀಯ ಬಳಕೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಆದರೆ ಅದಕ್ಕೂ ಪ್ರಯತ್ನಿಸಬೇಕಿದೆ ಎಂದು ಹೇಳುತ್ತಾರೆ.
ರೆಸ್ಟೋರೆಂಟ್‌ಗಳಲ್ಲಿ ಕೋವಿಡ್ ಹೆದರಿಕೆಯಿಂದ ಟೇಬಲ್‌ಗಳಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಹಾಕಿ, ಅವುಗಳನ್ನು ಎಸೆ ಯುವ ಬದಲು ಬಿಸಿನೀರು ಮತ್ತು ಡಿಟರ್ಜೆಂಟ್ ಬಳಸಿ ಒರೆಸಿದರೆ ಪ್ಲಾಸ್ಟಿಕ್ ಸಮಸ್ಯೆ ಇಲ್ಲವಾಗುತ್ತದೆ ಎಂದು ಯುಎಇ ಮೂಲದ ಪರಿಸರ ಚಿಂತಕರೊಬ್ಬರು ಹೇಳುತ್ತಾರೆ. ಅಲ್ಲದೇ ಔಷಧ ಇತ್ಯಾದಿಗಳ ನಿರ್ವಹಣೆ ವೇಳೆ ಜೈವಿಕ ಪ್ಲಾಸ್ಟಿಕ್ ಬಳಕೆ ಹೆಚ್ಚಿಸ ಬಹುದು. ಪ್ಲಾಸ್ಟಿಕ್ ಎಸೆಯುವ ವೇಳೆ ಜಾಗರೂಕರಾಗಿರಬೇಕಾದ್ದು ಅಗತ್ಯ ಎಂದು ಹೇಳುತ್ತಾರೆ. ಹಲವು ವರ್ಷಗಳ ಕಾಲ ಮಧ್ಯಪ್ರಾಚ್ಯದ ದೇಶಗಳು ಪ್ಲಾಸ್ಟಿಕ್‌ಗಳ ವಿರುದ್ಧ ಹೋರಾಡಿವೆ. ಆದರೆ ಕೋವಿಡ್ ಕಾರಣಕ್ಕೆ ಈಗ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಳಸುವುದು, ಹೋರಾಟದ ಆಶಯ ಮಣ್ಣುಪಾಲು ಮಾಡುತ್ತದೆ ಎಂದು ಮತ್ತೂಬ್ಬ ಚಿಂತಕರು ಹೇಳುತ್ತಾರೆ. ಮಾರುಕಟ್ಟೆಗಳಲ್ಲಿ, ಆಸ್ಪತ್ರೆಗಳಲ್ಲಿ ಈ ಬಗ್ಗೆ ಜಾಗರೂಕವಾಗಿ ವ್ಯವಹರಿಸಿದಾಗ ಪ್ಲಾಸ್ಟಿಕ್‌ನಿಂದಾಗಿ ಭೂಮಿ ಮಲಿನಗೊಳ್ಳುವುದು ತಪ್ಪುತ್ತದೆ. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಬಳಸುವ ಗ್ಲೌಸ್, ಮಾಸ್ಕ್ಗಳ ವಿಲೇವಾರಿ ಬಗ್ಗೆ ಸುಸ್ಥಿರವಾದ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ. ಕೋವಿಡ್‌ನಂತಹ ಸಂದರ್ಭದಲ್ಲಿ ಜನರು ಸುಲಭ ವಾದ ವಿಚಾರ ಗಳನ್ನು ಬೇಗನೆ ಬಳಸುತ್ತಾರೆ.
ಪ್ಲಾಸ್ಟಿಕ್ ವಿಚಾರದಲ್ಲಿ ಹೀಗೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಇದರ ಗಂಭೀರ ಪರಿಣಾಮ ಎದರಿಸಬೇಕಾಗುತ್ತದೆ ಎಂದು ಗ್ಲೋಬಲ್ ಪ್ಲಾಸ್ಟಿಕ್ ಆ್ಯಕ್ಷನ್ ಪಾರ್ಟ್‌ನರ್ ಶಿಪ್‌ನ ಕ್ರಿಸ್ಟಿನ್ ಹಗ್ಸ್ ಹೇಳಿದ್ದಾರೆ.