Advertisement

ಶಿರಸಿಯಲ್ಲಿ ಪಶ್ಚಿಮಘಟ್ಟ ಉಳಿಸಿ ಪರಿಸರ ಸಮಾವೇಶ ನಾಳೆ 

05:39 PM Jul 18, 2018 | Team Udayavani |

ಶಿರಸಿ: ಪಶ್ಚಿಮಘಟ್ಟ ಉಳಿಸಿ ಸಮಾವೇಶ ಹಿನ್ನಲೆಯಲ್ಲಿ ನಗರದ ಲಯನ್ಸ ಸಭಾಂಗಣದಲ್ಲಿ ಜು. 19 ರಂದು ಬೆಳಗ್ಗೆ 10:30ಕ್ಕೆ ಜರುಗಲಿರುವ ಸಮಾವೇಶದಲ್ಲಿ ಪರಿಸರ ಕಾರ್ಯಕರ್ತರ ವಿಶೇಷ ಸಮ್ಮಿಲನವಾಗಲಿದೆ. ಪಶ್ಚಿಮಘಟ್ಟದ ವಿವಿಧ ಜಿಲ್ಲೆಗಳ ಸಂಘ ಸಂಸ್ಥೆಗಳು, ಆಸಕ್ತ ರೈತರು, ಮಹಿಳೆಯರು, ತಜ್ಞರು, ಅಧ್ಯಯನಕಾರರು, ಜನಪ್ರತಿನಿಧಿ ಗಳು, ವನವಾಸಿ ಮುಖಂಡರನ್ನು, ಆಹ್ವಾನಿಸಲಾಗಿದೆ ಎಂದು ಸಂಘಟನೆಯ ಪ್ರಮುಖ ಅನಂತ ಅಶೀಸರ ತಿಳಿಸಿದ್ದಾರೆ.

Advertisement

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಹಿರಿಯ ಪ್ರಾಧ್ಯಾಪಕ, ಪರಿಸರ ಕಾನೂನು ತಜ್ಞ ಡಾ| ಎಂ.ಕೆ ರಮೇಶ ಸಮಾವೇಶ ಉದ್ಘಾಟಿಸಲಿದ್ದಾರೆ. ಪರಿಸರ ತಜ್ಞ ಪ್ರೊ| ಬಿ.ಎಂ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಅನಂತ ಹೆಗಡೆ ಅಶೀಸರ ಸಮಾವೇಶದ ಆಶಯ ಮಂಡಿಸಲಿದ್ದಾರೆ.

ನದಿ ತಿರುವು ಹಾಗೂ ಬೃಹತ್‌ ಯೋಜನೆಗಳ ಕುರಿತ ಮೊದಲ ಗೋಷ್ಠಿಯಲ್ಲಿ ಖ್ಯಾತ ಬರಹಗಾರ ನಾಗೇಶ ಹೆಗಡೆ, ಸುರೇಶ ಹೆಬ್ಳಿಕರ್‌, ಬಾಲಚಂದ್ರ ಸಾಯಿಮನೆ, ಡಾ| ಭರತ್‌, ಡಾ| ಶಂಕರ ಶರ್ಮಾ ಪಾಲ್ಗೊಳ್ಳಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ ಡೀಮ್ಡ ಅರಣ್ಯ ಕಾನು ಬೆಟ್ಟಗಳು, ರಾಂಪತ್ರೆ ಜಡ್ಡಿ ಉಳಿವು ಕುರಿತ ಚರ್ಚೆಯಲ್ಲಿ ಡಾ| ಕೇಶವ ಕೊರ್ಸೆ, ಡಾ| ಶ್ರೀಕಾಂತ್‌ ಗುನಗಾ, ರವಿ ಹನಿಯ, ಎಂ.ಆರ್‌. ಪಾಟೀಲ್‌, ಸುಬ್ರಹ್ಮಣ್ಯ, ನರೇಂದ್ರ ಹೊಂಡಗಾಶಿ, ನರಸಿಂಹ ವಾನಳ್ಳಿ ಇತರರು ಭಾಗಿ ಆಗಲಿದ್ದಾರೆ. ಮೂರನೇ ಗೋಷ್ಠಿಯಲ್ಲಿ ಕರಾವಳಿ ಪರಿಸರ ಪರಿಸ್ಥಿತಿ, ಕೈಗಾ 5-6ನೇ ಘಟಕ ದುಷ್ಪರಿಣಾಮ ಕುರಿತ ಗೋಷ್ಠಿಯಲ್ಲಿ ಡಾ| ವಿ.ಎನ್‌. ನಾಯಕ್‌, ಡಾ| ಮಹಾಬಲೇಶ್ವರ, ಕೆ.ಟಿ. ತಾಂಡೇಲ, ರವೀಂದ್ರ ಪವಾರ್‌, ಎಂ.ಆರ್‌. ಹೆಗಡೆ ಹೊಲನಗದ್ದೆ, ರವಿ ಭಟ್‌, ಶೈಲಜಾ, ಬಿ.ಜಿ ಹೆಗಡೆ ಇತರರು ಪಾಲ್ಗೊಳ್ಳಲಿದ್ದಾರೆ.

ನಾಲ್ಕನೇ ಗೋಷ್ಠಿಯಲ್ಲಿ ಕೆರೆ ಪುನಶ್ಚೇತನ, ಬದಲೀ ಇಂಧನ, ಕಾಡಿನ ಜೀನು ಉಳಿಸಿ, ಹಸಿರು ಆರೋಗ್ಯ, ವನ ನಿರ್ಮಾಣ ಕುರಿತು ಅನುಭವ ಮಂಡನೆ ಇದೆ. ಗೋಷ್ಠಿಯಲ್ಲಿ ಶಿವಾನಂದ ಕಳವೆ, ಶ್ರೀನಿವಾಸ ಹೆಬ್ಟಾರ್‌, ಚಂದ್ರು ದೇವಾಡಿಗ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3:30ಗಂಟೆಗೆ ಸಮಾರೋಪ ಸಮಾರಂಭದಲ್ಲಿ ನಿರ್ಣಯ ಮಂಡನೆ ನಡೆಯಲಿದ್ದು, ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರಿಗೆ ವೃಕ್ಷಲಕ್ಷ ಪರಿಸರ ಸಮ್ಮಾನವಿದೆ. ಬೇಡ್ತಿ, ಅಘನಾಶಿನಿಕೊಳ್ಳಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಲಿದ್ದಾರೆ.

ಕಳೆದ ಮೂರ್‍ನಾಲ್ಕು ದಶಕಗಳ ಪರಿಸರ ಹೋರಾಟ, ರಚನಾತ್ಮಕ ಕಾರ್ಯಗಳ ಫಲಶೃತಿ ಏನು ಎಂಬುದನ್ನು ತಿಳಿದುಕೊಳ್ಳಲು, ಮುಂದಿರುವ ಪರಿಸರ ಸವಾಲುಗಳೇನು ಎಂಬ ಮಾಹಿತಿ ಪಡೆಯಲು ಸಮಾವೇಶ ಪ್ರಯತ್ನಿಸಲಿದೆ. 2018 ರ ಮಧ್ಯಭಾಗದಲ್ಲಿ ಪಶ್ಚಿಮಘಟ್ಟ ಉಳಿಸಿ ಆಂದೋಲನದ ಮುಂದೆ ಹಲವು ಪ್ರಕರಣಗಳಿವೆ. ಅದು ನದೀ ತಿರುವು, ಅಣೆಕಟ್ಟೆ ನಿರ್ಮಾಣ, ಗಣಿ, ಅರಣ್ಯ ಅತಿಕ್ರಮಣ, ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ಕೈಗೊಳ್ಳಲಿರುವ ತಿದ್ದುಪಡಿ, ಘಟ್ಟದ ರಸ್ತೆ ಅಗಲೀಕರಣ, ಕರಾವಳಿ ಪರಿಸರ ಮಾಲಿನ್ಯ, ಕೆರೆಗಳ ಒತ್ತುವರಿ, ಹೀಗೆ ಹಲವು ಸಂಗತಿಗಳು ಇವೆ. ಘಟ್ಟದಲ್ಲಿ ಜನಜಾಗೃತಿ, ಸಂಘಟನೆ, ಒತ್ತಡ ನಿರ್ಮಾಣ ನ್ಯಾಯಾಲಯಗಳ ಬೆಂಬಲ, ಹೀಗೆ ಹತ್ತು ಮುಖಗಳಲ್ಲಿ ಕ್ರಿಯಾಶೀಲರಾಗಬೇಕಿದೆ. ಯುವಜನತೆಯನ್ನು ತೊಡಗಿಸಲು ಹೊಸ ಪರಿಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಿಂತನೆ, ಸಮಾಲೋಚನೆ, ಸಂವಾದ, ಸಮಾವೇಶದಲ್ಲಿ ನಡೆಯಲಿದೆ.

Advertisement

ಪೇಜಾವರ ಶ್ರೀಗಳಿಗೆ ಪ್ರಶಸ್ತಿ ಶಿರಸಿ: ನಿರಂತರ ಪರಿಸರ ರಕ್ಷಣಾ ಹೋರಾಟದಲ್ಲಿ ತೊಡಗಿಸಿಕೊಂಡ ಉಡುಪಿ ಅಷ್ಠಮಠಗಳಲ್ಲಿ ಒಂದಾದ ಉಡುಪಿಯ ಪೇಜಾರ ಮಠದ ವಿಶ್ವೇಶತೀರ್ಥ ಶ್ರೀಪಾದರಿಗೆ ಇಲ್ಲಿನ ವೃಕ್ಷಲಕ್ಷ ಆಂದೋಲನ, ಭೈರುಂಬೆ ಶಾರದಾಂಬಾ ಶಿಕ್ಷಣ ಸಂಸ್ಥೆ ನೀಡುವ ಪ್ರತಿಷ್ಠಿತ ವೃಕ್ಷಲಕ್ಷ ಪ್ರಶಸ್ತಿ ಪ್ರಕಟಿಸಲಾಗಿದೆ. ಜು.19 ರಂದು ಶಿರಸಿಯಲ್ಲಿ ನಡೆಯಲಿರುವ ಪಶ್ಚಿಮ ಘಟ್ಟ ಉಳಿಸಿ ಪರಿಸರ ಸಮಾವೇಶದಲ್ಲಿ ಪ್ರಶಸ್ತಿಯನ್ನು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡಲಿದ್ದಾರೆ. ಪೇಜಾವರ ಸ್ವಾಮೀಜಿ ಅವರು ಕೈಗಾ ಸತ್ಯಾಗ್ರಹದಲ್ಲಿ 1987ರಲ್ಲಿ ಪಾಲ್ಗೊಂಡವರು. ಶರಾವತಿ ಕಣಿವೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಿದವರು. ಕುಮಾರಧಾರಾ ಕಣಿವೆ ಸಂರಕ್ಷಣಾ ಆಂದೋಲನದಲ್ಲಿ 1994ರಲ್ಲೇ ಭಾಗವಹಿಸಿದ್ದರು. ತದಡಿ ಉಷ್ಣ ಸ್ಥಾವರ ವಿರುದ್ಧದ ಹೋರಾಟ, ಪಡುಬಿದ್ರಿ ಪರಿಸರ, ಮಂಗಳೂರು ವಿಶೇಷ ಆರ್ಥಿಕವಲಯ, ನೇತ್ರಾವತಿ ತಿರುವು ಮುಂತಾದ ಹೋರಾಟಗಳಲ್ಲಿ ಭಾಗಿ ಆದವರು. ಅನಾರೋಗ್ಯದಲ್ಲೂ ಸತತ ಪ್ರವಾಸ ನಡೆಸಿರುವ ಪೇಜಾವರರು ಗಂಗಾನದಿ ಸುರಕ್ಷಾ ಅಭಿಯಾನದಲ್ಲಿ ಸಕ್ರಿಯರು ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next