Advertisement

ಅರಣ್ಯೀಕರಣದಿಂದ ಪರಿಸರ ಸಮತೋಲನ

08:29 AM Jun 07, 2019 | Suhan S |

ತುಮಕೂರು: ಪರಿಸರದ ಅಸಮತೋಲನದಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ನಾವೆಲ್ಲರೂ ಕಾರಣರಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅರಣ್ಯೀಕರಣ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್‌ ತಿಳಿಸಿದರು.

Advertisement

ನಗರದ ಸಿರಾಗೇಟ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ ಎರಡರಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾ ಚರಣೆ ಅಂಗವಾಗಿ ಘಟಕದ ಆವರಣದಲ್ಲಿ ನೇರಳೆ, ಹೊಂಗೆ, ಬೇವು ಹಾಗೂ ಮಾವಿನ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಘಟಕದಲ್ಲಿ ಉತ್ಪತಿಯಾಗುವ ತ್ಯಾಜ್ಯ ವಸ್ತು ಗಳನ್ನು ಪ್ರತ್ಯೇಕಿಸುವುದರಿಂದ ಪರಿಸರ ಮಾಲಿನ್ಯ ತಡೆಯಬಹುದಾಗಿದೆ.

ಘಟಕದಲ್ಲಿ ಉತ್ಪತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯ, ವೇಸ್ಟ್‌ ಆಯಿಲ್ ಮನಬಂದಂತೆ ಎಸೆಯದೆ ಒಂದೆಡೆ ಹಾಕಿ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಿಗಾವಹಿಸ ಬೇಕಾಗಿದೆ ಎಂದು ಹೇಳಿದರು.

ಘಟಕದ ಹಿರಿಯ ಅಧಿಕಾರಿ ಮಂಜುನಾಥ್‌ ಮಾತನಾಡಿ, ಮನುಷ್ಯನ ದುರಾಸೆ ಫ‌ಲವಾಗಿ ಉಂಟಾ ಗಿರುವ ಪರಿಸರ ಮಾಲಿನ್ಯದಿಂದ ಭೂಮಿ ಮೇಲೆ ನೀರಿದ್ದರೂ ಬಾಟಲಿ ನೀರು ಕುಡಿಯುವ ಸ್ಥಿತಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಗಾಳಿಯನ್ನು ಸಿಲಿಂಡರ್‌ ಮೂಲಕ ಬಳಸುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

ಘಟಕದ ವ್ಯವಸ್ಥಾಪಕ ಎಸ್‌.ಆರ್‌.ಸಂತೋಷ್‌ ಮಾತನಾಡಿ, ವಿಶ್ವಸಂಸ್ಥೆಯು ಪ್ರತಿ ವರ್ಷ ಹೊಸ ಘೋಷವಾಕ್ಯದೊಂದಿಗೆ ಪರಿಸರ ರಕ್ಷಣೆಗೆ ಪ್ರೇರೇಪಿ ಸುತ್ತಿದೆ. ಈ ವರ್ಷ ಮಾಲಿನ್ಯಮುಕ್ತ ವಾಯು ಎಂಬ ಘೋಷವಾಕ್ಯವಿದ್ದು, ಇದರಲ್ಲಿ ಸಾರಿಗೆ ಸಂಸ್ಥೆಯ ಜವಾಬ್ದಾರಿ ಹೆಚ್ಚಿದೆ. ನಮ್ಮ ಬಸ್‌ಗಳು ಹೆಚ್ಚಿನ ಹೊಗೆ ಉಗುಳದಂತೆ ಸುಸ್ಥಿತಿಯಲ್ಲಿ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

Advertisement

ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಸಾಹಿತಿ ವಿ.ಡಿ.ಹನುಮಂತರಾಯಪ್ಪ ಮಾತನಾಡಿ, ಕಾಡಿ ನಲ್ಲಿರಬೇಕಾದ ಜೀವ ಸಂಕುಲಗಳು ಆಹಾರ ನೀರು ಅರಸಿ ನಾಡಿಗೆ ಬರುವಂತಾಗಿದೆ. ಇದೇ ರೀತಿಯ ದೌರ್ಜನ್ಯ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಅಧಿಕಾರಿಗಳಾದ ನಾಗರಾಜು, ಬಸವರಾಜು, ಮಹೇಶ್‌, ಲಕ್ಷ್ಮೀಪತಿ, ಹಂಸವೀಣಾ, ಕನ್ನಡ ಕ್ರಿಯಾ ಸಮಿತಿ ಉಪಾಧ್ಯಕ್ಷ ರಾಜಶೇಖರ್‌ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

ಅಭಿವೃದ್ಧಿ ಹೆಸರಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮರಗಳ ಮಾರಣ ಹೋಮ ನಿಂತು, ಪ್ರತಿಯೊಬ್ಬರಲ್ಲೂ ಗಿಡಮರ ಬೆಳೆಸುವ ಮನೋಭಾವ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಆಗಲಿದೆ ಎಂದು ಕೆಂಕೆರೆ ಗ್ರಾಪಂ ಅಧ್ಯಕ್ಷ ಆಶಾಉಮೇಶ್‌ ಅಭಿಪ್ರಾಯಪಟ್ಟರು.

ಕೆಂಕೆರೆ ಗ್ರಾಮ ಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕೆಂಕೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್‌ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಕೀಲರಾದ ಕೆ.ಆರ್‌.ಚನ್ನಬಸವಯ್ಯ ಮಾತನಾಡಿ, ವಾತಾವರಣದ ಸಮತೋಲನ ಕಾಪಾಡುವಲ್ಲಿ ಗಿಡ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಎಲ್ಲರೂ ಗಿಡ ಮರ ರಕ್ಷಣೆಗೆ ಯತ್ನಿಸಬೇಕು. ಸರ್ಕಾರ ಹಸಿರು ಹೊನ್ನು ಮತ್ತು ಕೃಷಿ ಅರಣ್ಯ ಯೋಜನೆಯಡಿ ಗಿಡಗಳನ್ನು ನೀಡುತ್ತಿದ್ದು, ಕೃಷಿಕರು ಸಸಿ ಪಡೆದು ಕೃಷಿ ಭೂಮಿಯ ಅಂಚಿನಲ್ಲಿ ಬೆಳೆಸಿ, ಲಾಭಗಳಿಸುವ ಜತೆಗೆ ಪರಿಸರ ಸಂರಕ್ಷಣೆಯ ಕೊಡುಗೆ ನೀಡಬೇಕು ಎಂದರು. ವಕೀಲರಾದ ಕೆ.ಸಿ.ವಿಶ್ವನಾಥ್‌ ಮಾತನಾಡಿ, ಗಿಡ ಮರ ಬೆಳೆಸುವ, ಪರಿಸರ ಉಳಿಸುವ,ವನ್ಯಪ್ರಾಣಿಗಳ ಸಂರಕ್ಷಿಸುವ ನಿಟ್ಟಿನಲ್ಲಿ ಜೀವನವಿಡಿ ಹೋರಾಟ ನಡೆಸಿರುವ ಮೇಧಾ ಪಾಟ್ಕರ್‌, ಪಾಂಡುರಂಗ ಹೆಗಡೆ, ಸಾಲುಮರದ ತಿಮ್ಮಕ್ಕ ಅವರ ಸಾಧನೆ ನಮಗೆ ಆದರ್ಶವಾಗಿದ್ದು, ಅವರ ದಾರಿಯಲ್ಲಿ ನಡೆದು ಪರಿಸರ ಉಳಿಸುವ ಕೆಲಸ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಗ್ರಾಪಂ ಪಿಡಿಒ ತೇಜಸ್ವಿ, ಶಿಕ್ಷಕರಾದ ಕಾಂತರಾಜು, ಜಯಣ್ಣ, ತಮ್ಮಯ್ಯ, ಕುಮಾರ್‌, ಸೇರಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next