ರಾಣಿಬೆನ್ನೂರು: ಪರಿಸರ ಕಲುಷಿತವಾದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪರಿಸರ ರಕ್ಷಣೆ ಜಾಗೃತಿಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಜೊತೆಗೆ ಸುತ್ತಲಿರುವ ವಾತಾವರಣ ಶುಚಿತ್ವ ಕಾಯ್ದುಕೊಳ್ಳಲು ಪರಿಸರ ಜಾಗೃತಿ ಜಾಥಾ ನಡೆಯಬೇಕಾದ ಅಗತ್ಯವಿದೆ ಎಂದು ಪಿಎಸ್‌ಐ ಕೆ.ಸಿ. ಕೋಮಲಾಚಾರ್ ಹೇಳಿದರು.
ಪಿಬಿ ರಸ್ತೆಯ ಖಂಡೇಬಾಗೂರು ಸಭಾಂಗಣದಲ್ಲಿ ಫರ್ನ್ ಕೈಂಡ್ ಲೈಫ್ ಆಯೋಜಿಸಿದ್ದ ಪರಿಸರ ಜಾಗೃತಿಗೆ ಸೈಕಲ್ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಸಲ್ಲದು. ದೇಶದ ಸಂಸ್ಕೃತಿ ಮತ್ತು ಸಂಸ್ಕಾರ, ಪರಂಪರೆ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಸದಾಕಾಲ ಶಾಂತಿ, ನೆಮ್ಮದಿ ಮತ್ತು ಇತರರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯ ಎಂದರು.
ಇದನ್ನೂ ಓದಿ:ಮಹಾ ಗಡಿ ಪುಸ್ತಕ ದಹಿಸಿ ಕರವೇ ಪ್ರತಿಭಟನೆ
ಫರ್ನ್ ಸಂಸ್ಥೆ ಅಧ್ಯಕ್ಷ ಪ್ರಸನ್ನಕುಮಾರ ವಿಜಾಪುರ ಮಾತನಾಡಿ, ಸಮಾಜದಲ್ಲಿ ಇಂದು ಪರಿಸರ ಕಲುಷಿತವಾಗುತ್ತಿದೆ. ಇದರಿಂದ ಶಬ್ದ, ಪರಿಸರ, ವಾಯು ಮಾಲಿನ್ಯ ಹೆಚ್ಚಾಗಿದೆ. ಇದರ ಜಾಗೃತಿ ಕಾರ್ಯದ ಜೊತೆಗೆ ಅನಾಥರು, ಅಂಧರು, ಬಡವರು, ಕಡು ಬಡವರು, ನಿರ್ಗತಿಕರು, ಅಸಾಯಕರಿಗೆ ಸಹಾಯ ನೀಡುವ ಉದ್ದೇಶದಿಂದಲೇ ಸಂಸ್ಥೆ ಪ್ರಾರಂಭಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು, ಎಲ್ಲರೂ ಸೇರಿ ಸಮಾಜಮುಖೀ ಕಾರ್ಯ ಮಾಡುವ ದೂರದೃಷ್ಟಿ ಇಟ್ಟುಕೊಂಡಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಜಾಥಾದಲ್ಲಿ ಸಂಚಾರಿ ಠಾಣಾ ಪಿಎಸ್‌ಐ ವಿ.ಆರ್. ಮುಂದಿನಮನಿ, ಅಭಿಷೇಕ, ನಿನಾದ, ತನುಷಾ, ಅನುಶ್ರೀ, ಮೋನಿಷಾ ಇತರರಿದ್ದರು.