Advertisement

ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ: ರಮೇಶ್‌

05:40 PM Jun 10, 2018 | |

ಶಿವಮೊಗ್ಗ: ಮಕ್ಕಳಲ್ಲಿ ಪರಿಸರ ಕುರಿತು ತಿಳುವಳಿಕೆ ಮೂಡಿಸಿದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಪರಿಸರ
ಕಾಪಾಡಲು ಸಾಧ್ಯ ಎಂದು ಜಿಲ್ಲಾ ಸ್ಕೌಟ್‌ ಮತ್ತು ಗೈಡ್ಸ್‌ ಆಯುಕ್ತ ಎಚ್‌.ಡಿ. ರಮೇಶ್‌ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸ್ಕೌಟ್‌ ಭವನದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಆವರಣದಲ್ಲಿ ಗಿಡ ನೆಟ್ಟು, ಮಕ್ಕಳಿಗೆ ಸಸಿ ವಿತರಿಸಿ ಅವರು ಮಾತನಾಡಿದರು. ಪರಿಸರದ ಮಹತ್ವ ಗೊತ್ತಿದ್ದವರು ಅದರ ನಾಶ ಮಾಡಲಾರರು. ಇಂದು ಪರಿಸರ ತೀವ್ರ ಪ್ರಮಾಣದಲ್ಲಿ ನಾಶವಾಗುತ್ತಿರುವುದರಿಂದ ವಿವಿಧ ರೀತಿಯ ದುಷ್ಪರಿಣಾಮಗಳನ್ನು ನಾವು ಎದುರಿಸುವಂತಾಗಿದೆ.
ಇದರಿಂದಾಗಿ ಪರಿಸರದ ಮಹತ್ವ ಏನು ಎನ್ನುವುದು ಈಗ ಅರಿವಾಗತೊಡಗಿದೆ ಎಂದರು.

ಎಲ್ಲಿಯವರೆಗೆ ಮಕ್ಕಳಲ್ಲಿ ನಾವು ಪರಿಸರ, ಆರೋಗ್ಯ, ಪ್ರಕೃತಿ, ಕಾಡಿನ ಬಗ್ಗೆ ವಿಚಾರವನ್ನು ತುಂಬುವುದಿಲ್ಲವೋ
ಅಲ್ಲಿಯವರೆಗೆ ಅದರ ಮಹತ್ವ ಅವರಿಗೆ ಗೊತ್ತಾಗುವುದಿಲ್ಲ. ಪಠ್ಯ ಕ್ರಮದಲ್ಲಿ ಈ ಸಂಬಂಧ ವಿಚಾರಗಳಿದ್ದಲ್ಲಿ ಅದು ಮಕ್ಕಳ ಮನಸ್ಸನ್ನು ಸೆಳೆಯಲು ಯಶಸ್ವಿಯಾಗುತ್ತದೆ. ಈ ದೃಷ್ಟಿಯಿಂದ ಪರಿಸರ ಕುರಿತು ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದರು.

ಜಿಲ್ಲಾ ಸ್ಕೌಟ್‌ ಆಯುಕ್ತೆ ಶಕುಂತಲಾ ಚಂದ್ರಶೇಖರ್‌ ಮಾತನಾಡಿ, ನೆಲ, ಜಲ, ಕಾಡು ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಗೊತ್ತಿದ್ದರೂ ಸಹ ಅದನ್ನು ನಾಶ ಮಾಡುವುದಕ್ಕೆ ಹೆಚ್ಚಿನ ಅದ್ಯತೆ ಕೊಟ್ಟಿರುವ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಬಳುವಳಿಯಾಗಿ ಬಂದ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯ ಎಂದರು. 

ಸ್ಕೌಟ್‌ ಆಯುಕ್ತ ಉಮೇಶ್‌ ಶಾಸ್ತ್ರಿ ಮಾತನಾಡಿ, ಪ್ರಕೃತಿದತ್ತವಾದ ಪರಿಸರ ಉಳಿಸುವ ಬಗ್ಗೆ ಮಕ್ಕಳಲ್ಲಿ
ಅರಿವು ಮೂಡಿಸಬೇಕು. ಪರಿಸರ ಸ್ವತ್ಛತೆ ಸಹಾ ಇಂದಿನ ದಿನದಲ್ಲಿ ಮಹತ್ವವಾಗಿದೆ. ಪ್ರತೀ ಮಕ್ಕಳು ತಮ್ಮ ಮನೆಯ
ಅಂಗಳದಲ್ಲಿ ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಎಂದರು. ನಗರ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ
ಏರ್ಪಡಿಸಿದ್ದ ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಕೌಟ್‌- ಗೈಡ್ಸ್‌ ತರಬೇತುದಾರ ರಾಜೇಶ್‌ ಇದ್ದರು. ಸಹಾಯಕ  ಆಯುಕ್ತೆ ಭಾರತಿ ಡಯಾಸ್‌ ಉಸ್ತುವಾರಿ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next