Advertisement
ಇಂದು ನಾನು ಹೇಳ ಹೊರಟಿರುವ ಗೀತೆ ಯಾವು ದೆಂದರೆ ನಾಗತಿಹಳ್ಳಿ ಚಂದ್ರಶೇಖರ್‌ಅವರ ಸಾಹಿತ್ಯ, ವಿಜಯ ಭಾಸ್ಕರ್ ಅವರ ಸಂಗೀತ ಸಂಯೋಜನೆಗೆ ಬಿ. ಆರ್. ಛಾಯಾ ಅವರ ಸುಶ್ರಾವ್ಯ ಧ್ವನಿಯಲ್ಲಿರುವ ಹಾಡು “ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರೆಂಟು ನನ್ನ ನಲ್ಲ, ಬರಿಯ ನೋವುಗಳಲ್ಲ, ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲ’ ಈ ಹಾಡಿಗೆ ಕುಂಚದ ಕಲೆ ಕೊಟ್ಟಿರುವವರು ಬಿ. ಕೆ.ಎಸ್. ವರ್ಮಾ ಅವರು. ಈ ಹಾಡಿನ ಸಾಹಿತ್ಯದ ವಿಶೇಷ ಎಂದರೆ ಹಾಡಿನುದ್ದಕ್ಕೂ ಅರಣ್ಯದಲ್ಲಿ ಅಕ್ಕ-ಪಕ್ಕ ಬೆಳೆದು ನಿಂತಿರುವ ಬೃಹತ್ ಮರಗಳನ್ನು ನಲ್ಲ ನಲ್ಲೆ ಎಂದು ಪ್ರತಿಬಿಂಬಿಸಿ, ಆ ಎರಡು ಮರಗಳು ತಮ್ಮ ನೋವನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಹೋಗುವ ರೀತಿಯನ್ನು ಕವಿಗಳು ತಮ್ಮ ಕವಿತೆಯ ಸಾಲುಗಳಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.
Related Articles
Advertisement
ನೀಲಿ ಮಾಸಿತು ನನ್ನ ನಲ್ಲೆ ——
ನೀಲಾಕಾಶದಲ್ಲಿ ನೀಲಿಯೇ ಇಲ್ಲದೆ, ಮಲಿನದ ಮುಸುಕೇಕೆ? ಎಂದಾಗ ಕಾರ್ಖಾನೆಗಳಿಂದ ಬರುವ ಕಪ್ಪಾದ ಮಲಿನ ನೀಲಿಯ ಬಾನನ್ನು ಮಾಸಿದಂತೆ ಮಾಡಿದೆ ಎಂಬ ಉತ್ತರ ಎಷ್ಟು ಸೊಗಸಾಗಿದೆ. ಆಗ ಕವಿಗೆ ಈಗಿನ ವಾಹನಗಳಿಂದ ಹೊರಬರುವ ಮಲಿನದ ಮುನ್ಸೂಚನೆ ಇಲ್ಲದಿರಬಹುದು.
ವಾಯುಮಂಡಲದಲ್ಲಿ ಆಮ್ಲಜನಕವು ಎಲ್ಲಿ?
ಜೀವ ಕುಲಕೆ ಯಾಕೆ ಬವಣೆ
ಸಸ್ಯಶ್ಯಾಮಲೆಯನ್ನು ಕೊಚ್ಚಿಕೊಂದರು ನಲ್ಲೆ
ಎಲ್ಲಿ ಬಂದಿತು ಸ್ವತ್ಛ ಗಾಳಿ ——
ಈ ಚರಣ ಭಾಗವಂತೂ ಈಗಿರುವ ಪರಿಸ್ಥಿತಿಗೆ ಹೇಳಿ ಬರೆಸಿರುವ ಹಾಗಿದೆ. ನಲ್ಲೆಯ ಪ್ರಶ್ನೆ “ಜೀವಕುಲಕ್ಕೆ ಆಮ್ಲಜನಕವಿಲ್ಲದೆ ಯಾಕೆ ಈ ರೀತಿಯಾದ ಕಷ್ಟ?’ ಎನ್ನುವುದಕ್ಕೆ ನಲ್ಲನ ಉತ್ತರ, ಗಿಡಮರಗಳನ್ನು ಕಡಿದುದೇ ಈ ಸಮಸ್ಯೆಗೆ ಮೂಲ ಕಾರಣವಾಯ್ತು. ಎಲ್ಲಿ ಬಂದೀತು ಸ್ವತ್ಛ ಗಾಳಿ? ಎಂದು.
ಆನೆ ಸಿಂಹಗಳೆಲ್ಲ ಎಲ್ಲಿ ಹೋದವು ನಲ್ಲ
ಯಾಕೆ ಕೋಗಿಲೆಗೆ ಮೂಕ ನೋವು
ನೆಟ್ಟ ಕಾಡುಗಳೆಲ್ಲಾ ಕೆಟ್ಟ ಕೈಗಳ ಬಲೆಗೆ
ಚಿವುಟಿ ಹೋಯಿತು ನನ್ನ ನಲ್ಲೆ ——
ಅರಣ್ಯಗಳಲ್ಲಿ ನಶಿಸಿ ಹೋಗುತ್ತಿರುವ ವನ್ಯಜೀವಿಗಳನ್ನು ಕುರಿತು ಕೇಳುತ್ತಾ ಕೋಗಿಲೆಯ ಕೂಗು ಸಹ ಮೂಕವಾಗುತ್ತಿದೆಯಲ್ಲ ಎಂದಾಗ ಕಾಡುಗಳು ಕ್ರೂರರ ಕೈಗೆ ಸಿಲುಕಿ ನಾಶವಾಗುತ್ತಾ ಹೋದಂತೆಲ್ಲ ವನ್ಯ ಮೃಗಗಳಿಗೂ ಆಸರೆ ಸಿಗದೆ ಅಳಿವಿನಂಚಿಗೆ ಬರುತ್ತಿದೆ ಎಂಬುದಾಗಿದೆ.
– ಶ್ರೀಲಕ್ಷ್ಮೀ
ಬೆಂಗಳೂರು