ಮಾನವನ ದುರಾಸೆಯ ಫಲವಾಗಿ ಭೂಮಿ ಬಂಜರಾಗಿದೆ. ಹಸುರು ಭೂಮಿ ಕಣ್ಮರೆಯಾಗಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಉಸಿರಾಡಲು ಶುದ್ಧ ಗಾಳಿಯಿಲ್ಲದೆ ಮನುಷ್ಯನಿಗೆ ನಾನಾ ಕಾಯಿಲೆಗಳು ವಕ್ಕರಿಸುತ್ತಿವೆ. ಪರಿಸರದ ನಾಶವಿಂದು ಅವನ ವಿನಾಶಕ್ಕೆ ನಾಂದಿ ಹಾಡಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಇಡೀ ವಿಶ್ವವೇ ಮುಂದೆ ಇನ್ನೊಂದು ಅನಾಹುತಕ್ಕೆ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಾದರೂ ಕೂಡ ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು.
ಜೂನ್ 5ರಂದು ಮಾತ್ರ ಪರಿಸರದ ಸಂರಕ್ಷಣೆ ನಮ್ಮ ಮಾನದಂಡವಾಗಿರಬಾರದು. ಅದು ವರ್ಷವಿಡೀ ಆಗಿರಬೇಕು .ನಾಗರಿಕ ಸಮಾಜದಲ್ಲಿ ಬದುಕುವ ನಾವು ನಮ್ಮದೇ ಆದ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಬಾಯಿ ಮಾತಿಗೆ ಸೀಮಿತವಾಗಿರದೆ ನಿಜವಾದ ಅರ್ಥ ಪಡೆದುಕೊಳ್ಳಬೇಕು.ಒಂದು ವೇಳೆ ಆ ರೀತಿ ಆಗದೆ ಇದ್ದಲ್ಲಿ ಮುಂದೆ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಶುದ್ಧವಾದ ಗಾಳಿಗೆ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ವೈರಸ್ ಕಾಟದಿಂದ ಜನ ತತ್ತರಿಸಿ ಹೋಗಿದ್ದಾರೆ. ಜನ ಜಾಗೃತರಾಗದೆ ಪರಿಸರ ನಾಶ ಮಾಡುತ್ತಾ ಹೋದರೆ ವೈರಸ್ ಗೆ ಮಿಗಿಲಾದ ದೊಡ್ಡ ಮಹಾಮಾರಿ ಬಂದು ವಕ್ಕರಿಸಬಹುದು. ಆಧುನಿಕತೆಯ ಹೆಸರಿನಲ್ಲಿ ಮರಕಡಿಯುತ್ತಾ ಹೋದಂತೆ ಮಳೆ ಬೀಳುವ ಪ್ರಮಾಣ ಕಡಿಮೆ ಆಗಲಿದೆ. ಅಂತರ್ಜಾಲ ಮಟ್ಟ ಕೂಡ ಬಹುಮಟ್ಟಿಗೆ ಕಡಿಮೆಯಾಗಲಿದೆ. ಈ ಮೂಲಕ ಮುಂದೊಂದು ದಿನ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಬಹುದು. ಹಣ ಗಳಿಸುವ ದೃಷ್ಟಿಯಿಂದ ಪ್ರಕೃತಿಯ ಸೊಬಗಿಗೆ ಕೊಳ್ಳಿ ಇಟ್ಟು ಕಾರ್ಖಾನೆ ಕಟ್ಟಿದರು. ಸಾಲದು ಎನ್ನುವಂತೆ ಅಲ್ಲಿನ ವಿಷ ಗಾಳಿಯನ್ನು ವಾತಾವರಣಕ್ಕೆ ಸೇರುವಂತೆ ಮಾಡಿದರು. ಹೀಗೆ ಮುಂದುವರಿದರೆ ಪಾಪದ ಪ್ರಾಯಶ್ಚಿತವೆನ್ನುವಂತೆ ಅದೇ ವಿಷ ಗಾಳಿಯನ್ನು ಮಾನವ ಸೇವಿಸುವ ಕಾಲ ಹೆಚ್ಚು ದೂರವಿಲ್ಲ ಎನ್ನಬಹುದು.
ಹೀಗೆ ಸಾಕಷ್ಟು ಸವಾಲುಗಳು, ಹೊಣೆ, ಜವಾಬ್ದಾರಿ ನಮ್ಮ ಮೇಲಿದೆ. ಪರಿಸರ ಸಂರಕ್ಷಣೆ ಕೇವಲ ಮಾತಾಗಿರದೆ ಕಾರ್ಯ ರೂಪಕ್ಕೆ ಬರಬೇಕಿದೆ. ಮಾತಿಗಿಂತ ಕೃತಿ ಲೇಸು ಎನ್ನುವಂತೆ, ಪರಿಸರ ಸಂರಕ್ಷಣೆ ಭಾಷಣ ಕಮ್ಮಿಯಾಗಿ ಕಾರ್ಯಗಳು ಜಾಸ್ತಿಯಾಗಬೇಕು. ಸರಕಾರ ಕೂಡ ಆ ನಿಟ್ಟಿನಲ್ಲಿ ಹೊಸ ಕಾನೂನು ಕಾಯ್ದೆ ಜಾರಿಗೊಳಿಸಬೇಕು. ಸರಕಾರ ಮಾಡುತ್ತೆ ಅಂತ ಜನ ಸುಮ್ಮನೆ ಕೂರಬಾರದು. ನಮ್ಮಿಂದ ಆದಷ್ಟು ಕೆಲಸ ಮಾಡಬೇಕು. ಎಲ್ಲವನ್ನೂ ಒಬ್ಬರಿಂದ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಒಬ್ಬೊಬ್ಬರೇ ಬದಲಾದರೆ. ಆವಾಗ ಎಲ್ಲವು ಬದಲಾಗುತ್ತದೆ. ಅರ್ಥ ಕಳೆದುಕೊಳ್ಳುತ್ತಿರುವ ಪರಿಸರ ಮತ್ತೆ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ.
ನವ್ಯಶ್ರೀ ಶೆಟ್ಟಿ
ಪ್ರಥಮ ಬಿ.ಎ ಪತ್ರಿಕೋದ್ಯಮ ವಿಭಾಗ ಎಂಜಿಎಂ ಕಾಲೇಜು ಉಡುಪಿ