ಧಾರವಾಡ: ಜಗತ್ತಿನಾದ್ಯಂತ ಜಾಗತೀಕರಣದಿಂದ ಪ್ರಭಾವಿತಗೊಂಡು ಅಭಿವೃದ್ಧಿಯ ತಪ್ಪು ನೀತಿಗಳಿಂದಾಗಿ ಇಂದು ಪರಿಸರ ಸಂಕಷ್ಟ ಎದುರಿಸಬೇಕಾಗಿದೆ ಎಂದು ಪರಿಸರ ತಜ್ಞ ಸುರೇಶ ಹೆಬ್ಳಿಕರ ಹೇಳಿದರು.
ನಗರದ ಹೊರವಲಯದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ನಿಸರ್ಗದ ಅಮೂಲ್ಯ ಸಂಪತ್ತುಗಳಾದ ಅರಣ್ಯ, ಖನಿಜ, ಜಲ ಮುಂತಾದವುಗಳ ನಿರಂತರ ಶೋಷಣೆಯಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಜಗತ್ತಿನ ಅನೇಕ ಅರ್ಥ ವ್ಯವಸ್ಥೆಗಳಿಗೆ ಧಕ್ಕೆಯಾಗುತ್ತಿದೆ. ಅರಣ್ಯ ನಾಶದಿಂದ ಜಲ ಸಂಕಷ್ಟ ಉಂಟಾಗಿ ಕೃಷಿ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಃಸ್ಥಿತಿಯನ್ನು ನಮ್ಮ ಸಮಾಜ ಎದುರಿಸುತ್ತಿದೆ. ನಾವು ಇಂದು ಜೀವ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ ಕುಮಾರ ಮಾತನಾಡಿ, ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ನಮ್ಮ ದೇಶ ಭೌಗೋಳಿಕ ಕ್ಷೇತ್ರದ ಕನಿಷ್ಠ 33 ಪ್ರತಿಶತ ಅರಣ್ಯ ಪ್ರದೇಶ ಹೊಂದಿರಬೇಕಾಗಿರುತ್ತದೆ. ಆದರೆ, ಕರ್ನಾಟಕ ರಾಜ್ಯ 21 ಪ್ರತಿಶತ ಹಾಗೂ ಧಾರವಾಡ ಜಿಲ್ಲೆ 9 ಪ್ರತಿಶತಅರಣ್ಯ ಮಾತ್ರ ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ಜಲ ಆಯವ್ಯಯ ಮತ್ತು ಜಲ ಸಂರಕ್ಷಣೆ ಕುರಿತು ವಿಶಿಷ್ಟ ಕಾರ್ಯ ಚಟುವಟಿಕೆಗಾಗಿ ಮುಗದ ಗ್ರಾಮವನ್ನು ವಾಲ್ಮಿ ಸಂಸ್ಥೆ ದತ್ತು ಪಡೆಯುವುದಾಗಿ ತಿಳಿಸಿದರು.
ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ಪಿ. ಶೇಷು, ಪರಿಸರ ತಜ್ಞ ಪಿ.ವಿ. ಹಿರೇಮಠ ಉಪನ್ಯಾಸ ನೀಡಿದರು. ಆರ್.ಎಂ. ಭಟ್ ಸ್ವಾಗತಿಸಿದರು.
ಮಹದೇವಗೌಡ ಹುತ್ತನಗೌಡರ ನಿರೂಪಿಸಿದರು. ಇಂ. ಕೃಷ್ಣಾಜಿರಾವ್ ವಂದಿಸಿದರು.