ಉಡುಪಿ: ನಮ್ಮ ಪರಿಸರವನ್ನು ಸ್ವತ್ಛ, ಸುಂದರ ಮತ್ತು ಸಂರಕ್ಷಣೆಯ ಭಾರ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಕೇವಲ ಹಕ್ಕು ಸ್ಥಾಪಿಸುವುದು ಮಾತ್ರವಲ್ಲ, ಕರ್ತವ್ಯಗಳ ಪಾಲನೆಯೂ ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕ ಅವರು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ ಇವರ ಸಹಯೋಗದಲ್ಲಿ ಮಂಗಳವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮಾಲಿನ್ಯ ಅಧಿಕವಾಗುತ್ತಿದೆ. ನಮ್ಮ ಸುತ್ತಲಿನ ಪರಿಸರದ ಸರಿಯಾದ ನಿರ್ವಹಣೆ, ನೈರ್ಮಲ್ಯ ಕಾಪಾಡಿ ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಸಂವಿಧಾನದಲ್ಲಿ ಸಹ ಈ ಕುರಿತು ತಿಳಿಸಲಾಗಿದೆ. ನಾಡಿನ ನೈಸರ್ಗಿಕ ಪರಿಸರ, ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಪರಿಸರ ಸಂರಕ್ಷಣೆಯ ಸಲುವಾಗಿಯೇ ಸರಕಾರ ಸ್ವತ್ಛ ಭಾರತ ಅಭಿಯಾನ ಪ್ರಾರಂಭಿಸಿದೆ. ಸ್ವತ್ಛತೆಯಿದ್ದಲ್ಲಿ ಶಿಸ್ತು ಮತ್ತು ಆರೋಗ್ಯ ಇರುತ್ತದೆ. ಇದರಿಂದ ಆರೋಗ್ಯಯುತ ಸಮಾಜ, ದೇಶ ನಿರ್ಮಾಣ ಸಾಧ್ಯ. ಶಾಲಾ ಹಂತದಲ್ಲಿಯೇ ಪರಿಸರ ಸಂರಕ್ಷಣೆಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ನ್ಯಾಯಾಧೀಶರು ತಿಳಿಸಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ., ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಡಿಡಿಪಿಐ ಎಚ್. ದಿವಾಕರ ಶೆಟ್ಟಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿಯ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ| ಎಚ್. ಲಕ್ಷ್ಮೀಕಾಂತ್ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಮೂಲಭೂತ ಕರ್ತವ್ಯಗಳು ಮತ್ತು ಪರಿಸರದ ಕುರಿತು ನ್ಯಾಯವಾದಿ ಹಮ್ಜತ್ ಎಚ್.ಕೆ. ಅವರು ಉಪನ್ಯಾಸ ನೀಡಿದರು.