ಶಹಾಪುರ: ಬರಿ ಸಸಿ ನೆಟ್ಟರೆ ಸಾಲದು. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ಕೃಷಿ ಕರಳುಬಳ್ಳಿ ಸಂಬಂಧ ಹೊಂದಿದೆ. ಕೃಷಿ ಕಾಯಕ ಜತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಭಾಮಿನಿ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಯಾಲಯದ ಆವರಣದಲ್ಲಿ ವಕೀಲರು ಸುಮಾರು 120ಕ್ಕೂ ಹೆಚ್ಚು ಮರ ಬೆಳೆಸಿದ್ದಾರೆ. ಇದರಂತೆ ಇನ್ನುಳಿದ ಇಲಾಖೆಗಳ ಸಿಬ್ಬಂದಿ ಸಹ ಮರ ಬೆಳೆಸುವ ಕಾರ್ಯದಲ್ಲಿ ಮಗ್ನವಾಗಲಿ ಎಂದು ಕರೆ ನೀಡಿದರು.
ಉಪ ವಲಯ ಅರಣ್ಯ ಅಧಿಕಾರಿ ಐ.ಬಿ. ಹೂಗಾರ ಮಾತನಾಡಿ, ಪ್ರಸಕ್ತ ವರ್ಷ ನಗರ ಹಸಿರೀಕರಣ ಯೋಜನೆ ಅಡಿ ಮೂರು ಹೆಕ್ಷೇರ್‌ನಲ್ಲಿ 900 ಸಸಿ ನೆಡುವ ಗುರಿ ಹೊಂದಲಾಗಿದೆ. ಅಲ್ಲದೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ರೈತರಿಗೆ ಶ್ರೀಗಂಧ, ಹೆಬ್ಬೇವು, ನೆರಳೆ, ಲಿಂಬು ಸಸಿ ವಿತರಿಸಲಾಗುವುದು. ರೈತರು ಹೆಸರು ನೋಂದಾಯಿಸಿಕೊಂಡು ಸಸಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ಸರ್ಕಾರಿ ಅಭಿಯೋಜಕಿ ದಿವ್ಯಾರಾಣಿ ನಾಯಕ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ರಾಂಪುರೆ, ಕಾರ್ಯದರ್ಶಿ ಸಂದೀಪ ದೇಸಾಯಿ, ಹಿರಿಯ ವಕೀಲರಾದ ಭಾಸ್ಕರರಾವ ಮುಡಬೂಳ, ಎಸ್. ಶೇಖರ, ಚಂದ್ರಶೇಖರ ದೇಸಾಯಿ, ಸಯ್ಯದ ಇಬ್ರಾಹಿಂಸಾಬ್ ಜಮಾದಾರ, ಆರ್.ಎಂ. ಹೊನ್ನಾರಡ್ಡಿ, ಸಾಲೋಮನ್ ಆಲ್‌ಫ್ರೇಡ್, ಯೂಸೂಫ್ ಸಿದ್ದಕಿ, ರಮೇಶ ಸೇಡಂಕರ್, ಲಕ್ಷ್ಮೀನಾರಾಯಣ ಕುಲಕರ್ಣಿ, ಗುರುರಾಜ ದೇಶಪಾಂಡೆ, ಶ್ರೀಮಂತ ಕಂಚಿ, ಹಯ್ನಾಳಪ್ಪ ಹೊಸ್ಮನಿ, ದೇವರಾಜ ಚೆಟ್ಟಿ, ದೇವಿಂದ್ರಪ್ಪ ಟಣಕೆದಾರ, ಸಿದ್ದು ಪಸ್ಪೂಲ ಇದ್ದರು.