ಗಂಗಾವತಿ: ಶಾಲಾ ಕಾರ್ಯಕ್ರಮವೊಂದರಲ್ಲಿ ಅಂದಿನ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಮಾತಿನಿಂದ ಪ್ರಭಾವಿತಳಾಗಿ ತಂದೆ ಸಹಕಾರದಿಂದ ಆನೆಗೊಂದಿ, ಅಂಜನಾದ್ರಿಯಲ್ಲಿ ವಿಶೇಷ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುತ್ತಿರುವ ಚಿಕ್ಕರಾಂಪುರ ಗ್ರಾಮದ ವಿದ್ಯಾರ್ಥಿ ಸಿಂಧೂ ದೇವೇಂದ್ರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಗಂಗಾವತಿಯ ಕೇಂದ್ರೀಯ ವಿದ್ಯಾಲಯದಲ್ಲಿ 6ನೇ ತರಗತಿ ಓದುತ್ತಿರುವ ಸಿಂಧೂ ಶಾಲೆ ಕಾರ್ಯಕ್ರಮದಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪಿ. ಸುನೀಲ್ ಕುಮಾರ, ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು. ಅದೇ ತರಹ ನೀರನ್ನು ಸದಾ ಉಳಿಸುವ ಕಾರ್ಯ ಮಾಡುವಂತೆ ಕರೆ ನೀಡಿದ್ದರು.
ಇದನ್ನು ಅಕ್ಷರ ಸಹ ಪಾಲಿಸುತ್ತಿರುವ ಸಿಂಧೂ ಆನೆಗೊಂದಿ ಸುತ್ತಲಿನ ಗ್ರಾಮಗಳಲ್ಲಿ ಮತ್ತು ಕಿಷ್ಕಿಂದಾ ಪಾರ್ಕಿಂಗ್ ಜಾಗದ ಸುತ್ತ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾಳೆ. ವಿಶೇಷವಾಗಿ ಆನೆಗೊಂದಿ ಉತ್ಸವ ಮೈದಾನದ ಸುತ್ತ, ಆನೆಗೊಂದಿ, ಚಿಕ್ಕರಾಂಪುರ, ಹರ್ಲಾಪುರ ಗ್ರಾಮಗಳ ಸ್ಮಶಾನದಲ್ಲಿ ಸಸಿಗಳನ್ನು ಖರೀದಿಸಿ ನೆಟ್ಟಿದ್ದಾಳೆ.
ಸಿಂಧೂ ಅವರ ತಂದೆ ದೇವೇಂದ್ರ ನಿತ್ಯವೂ ಮಗಳ ಕಾರ್ಯದಲ್ಲಿ ಪಾಲ್ಗೊಂಡು ಬಹುತೇಕ ಸಸಿಗಳಿಗೆ ನೀರುಣಿಸುವ ಕಾಯಕ ಮಾಡುತ್ತಿದ್ದಾರೆ. ಇಡೀ ಕುಟುಂಬದವರು ಕಿಷ್ಕಿಂದಾ ಫೌಂಡೇಶನ್ ಎನ್ನುವ ಸಂಸ್ಥೆ ಮೂಲಕ ಪರಿಸರ ಸಂರಕ್ಷಣೆ ಜನಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಚಿಕ್ಕಂದಿನಲ್ಲೇ ಪರಿಸರದ ಕಾಳಜಿ ಹೊಂದಿರುವ ಸಿಂಧೂಗಳನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.
ಪರಿಸರವಿದ್ದರೆ ನಾವೆಲ್ಲ ಬದುಕಲು ಸಾಧ್ಯ: ಅರಣ್ಯ, ಪ್ರಾಣಿ, ಪಕ್ಷಿಗಳಿದ್ದರೆ ಮಾತ್ರ ಮನುಷ್ಯರು ಬದುಕಲು ಸಾಧ್ಯ. ನಮ್ಮ ಶಾಲೆಗೆ ಆಗಮಿಸಿದ್ದ ಡಿಸಿ ಪಿ. ಸುನೀಲ್ ಕುಮಾರ ಅವರು ಪ್ರತಿ ಮಗು ಸಸಿ ನೆಟ್ಟು ಬೆಳೆಸಬೇಕು. ಗಿಡಗಳನ್ನು ಫ್ರೆಂಡ್ ಮಾಡಿಕೊಂಡು ನೀರು ಹಾಕಿ ಕಾಪಾಡುವಂತೆ ತಿಳಿಸಿದ್ದಾರೆ. ನಾನು ಹಾಗೂ ನನ್ನ ಗೆಳೆಯರು ಸಸಿ ನೆಟ್ಟು ಬೆಳೆಸುತ್ತಿದ್ದೇವೆ. ಪ್ರತಿಯೊಬ್ಬರೂ ಸಸಿ ನೆಟ್ಟು ಗಿಡವಾಗಿಸಿ ತಮ್ಮ ಮಕ್ಕಳಂತೆ ಪ್ರೀತಿ ಮಾಡಿ ಪರಿಸರ ಸಂರಕ್ಷಣೆ ಮಾಡುವಂತೆ ಸಿಂಧೂ ಉದಯವಾಣಿ ಜತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆ. ನಿಂಗಜ್ಜ