Advertisement
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಜಿಲ್ಲೆಯ ಅತಿ ಹಿಂದುಳಿದ ಹಾಗೂ ಚಿಕ್ಕ ತಾಲೂಕಾಗಿರುವ ಗುಡಿಬಂಡೆಯಲ್ಲಿ ಹುಟ್ಟಿ ಬೆಳೆದಿರುವ ಗುಂಪುಮರದ ಆನಂದ್, ಪರಿಸರ ಜಾಗೃತಿ ವಿಚಾರದಲ್ಲಿ ಸದಾ ಮುಂದು.
Related Articles
Advertisement
ಪುರಸ್ಕಾರಕ್ಕೆ ಲೆಕ್ಕವಿಲ್ಲ : ಗುಂಪುಮರದ ಆನಂದ್ ಪರಿಸರ ಕಾಳಜಿಗೆ ಅನೇಕ ಸಂಘಟನೆಗಳು, ಸಂಸ್ಥೆಗಳು, ಸರ್ಕಾರ ಅವರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಿದೆ. 2014-15ನೇ ಸಾಲಿನಲ್ಲಿ ಇವರ ಪರಿಸರ ಕಾಳಜಿಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಜಿಲ್ಲಾ ಪರಿಸರ ಪ್ರಿಯ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ, ಬಿರುದುಗಳು ಇವರನ್ನು ಹುಡುಕಿ ಬಂದಿವೆ.
ಗಿಡ ನೆಡಿಸಿ ಪ್ರೇರಣೆ : ಸರ್ಕಾರಿ ನೌಕರಿ ಸಿಕ್ಕರೆ ಸಾಕು ಬಹಳಷ್ಟು ಮಂದಿ ತಾವಾಯ್ತ ತಮ್ಮ ಕುಟುಂಬ ಆಯ್ತು ಎನ್ನುವಷ್ಟರ ಮಟ್ಟಿಗೆ ಸಮಾಜದಿಂದ ಅಂತರ ಕಾಯ್ದುಕೊಳ್ಳುವರೇ ಹೆಚ್ಚು. ಆದರೆ, ಗುಂಪುಮರದ ಆನಂದ್ ನಿತ್ಯ ಪರಿಸರ ರಕ್ಷಣೆಗಾಗಿ ಧ್ಯಾನಿಸುವ ವ್ಯಕ್ತಿ. ಯಾರೇ ಹುಟ್ಟು ಹಬ್ಬ ಆಚರಣೆಗೆ ಆಹ್ವಾನಿಸಿದರೂ ಅವರ ಹೆಸರಲ್ಲಿ ಒಂದೆರೆಡು ಗಿಡಗಳನ್ನು ನೆಡಿಸಿ ಪೋಷಣೆ ಮಾಡುವಂತೆ ಪ್ರೇರೆಪಿಸುತ್ತಾರೆ.
ವ್ಯನ್ಯಜೀವಿಗಳ, ಕಾಡು ಪ್ರಾಣಿಗಳ ಮೇಲೆ ಕಾಳಜಿ : ಗುಂಪುಮರದ ಆನಂದ್ ಬರೀ ಪರಿಸರ ಪ್ರೇಮಿ ಯಷ್ಟೇ ಅಲ್ಲ. ವ್ಯನ್ಯ ಜೀವಿಗಳ ಪ್ರೇಮಿ ಕೂಡ ಆಗಿದ್ದಾರೆ. ವಿಶೇಷವಾಗಿ ಪಕ್ಷಿ ಸಂಕುಲದ ಬಗ್ಗೆ ವಿಶೇಷ ಆಸಕ್ತಿ ಇದ್ದು ಗುಡಿಬಂಡೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರಗಳಲ್ಲಿ ವನ್ಯಜೀವಿಗಳು ಅಪಾಯದಲ್ಲಿದ್ದರೆ ಮೊದಲು ಗುಂಪುಮರದ ಆನಂದ್‌ಗೆ ಸಾರ್ವಜನಿ ಕರು ಫೋನ್ ಮಾಡಿ ತಿಳಿಸುತ್ತಾರೆ. ತಕ್ಷಣ ಆನಂದ್ ಅಕ್ಕರೆಯಿಂದ ಅವುಗಳನ್ನು ಆರೈಕೆ ಮಾಡಿ ಅರಣ್ಯ ಇಲಾಖೆ ಗಮನಕ್ಕೆ ತಂದು ಅವುಗಳ ರಕ್ಷಣೆಗೆ ಕಾಳಜಿ ತೋರಿ ಕೆಲಸ ಮಾಡುವುದ್ದನ್ನು ರೂಢಿಸಿಕೊಂಡಿದ್ದಾರೆ.
ಲಕ್ಷಕ್ಕೂ ಅಧಿಕ ಸಸಿಗಳ ವಿತರಣೆ, ಪೋಷಣೆ : ಗುಂಪುಮರದ ಆನಂದ್, ಸಾಲು ಮರದ ತಿಮ್ಮಕ್ಕರವರ ಪ್ರೇರಣೆಯಿಂದ ಸರಿ ಸುಮಾರು ಒಂದೂವರೆ ಲಕ್ಷದಷ್ಟು ಸಸಿಗಳನ್ನು ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ನೆಟ್ಟು ಪೋಷಣೆ ಮಾಡಿದ್ದಾರೆ. ಒಂದು ಕಾಲಕ್ಕೆ ಬರಪೀಡಿತ ಜಿಲ್ಲೆಯಾಗಿದ್ದ ಜಿಲ್ಲೆಯಲ್ಲಿ ಸಾಕಷ್ಟು ಗಿಡ, ಮರಗಳನ್ನು ಅವರು ಮುಂದಾಳತ್ವದಲ್ಲಿ ನೆಟ್ಟು ಬೆಳೆಸಿದ್ದಾರೆ. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಆನಂದ್, ಆನಂದ ಮರ ಎಂಬ ಕಿರು ಹೊತ್ತಿಗೆ ಮೂಲಕ ಪರಿಸರ ಸಂರಕ್ಷಣೆ ಮಹತ್ವ ಸಾರುವ ಗೀತೆ, ಕವಿತೆಗಳನ್ನು ರಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಳದಿಂದ ಮನುಷ್ಯನ ಬದುಕಿನ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಜನರು ಬದುಕನ್ನು ಸಾರ್ಥಕತೆಪಡಿಸಿಕೊಳ್ಳಲು ಗಿಡಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಮನೆ ಹತ್ತಿರ, ಆಟದ ಮೈದಾನ, ಸ್ಮಶಾನಗಳಲ್ಲಿ ಗಿಡ, ಮರಗಳನ್ನು ಬೆಳೆಸಿದಷ್ಟು ಪರಿಸರದಿಂದ ಮಾನವ ಕುಲಕ್ಕೆ ಒಳಿಯಾಗುತ್ತದೆ. -ಗುಂಪುಮರದ ಆನಂದ್, ಪರಿಸರ ಪ್ರೇಮಿ
-ಕಾಗತಿ ನಾಗರಾಜಪ್ಪ