Advertisement

Environment Day; ವೃಕ್ಷ ಸಂರಕ್ಷಣಾ ಕಾಯಿದೆ 1976 ತಿದ್ದುಪಡಿಗೆ ಚಿಂತನೆ: ಈಶ್ವರ ಖಂಡ್ರೆ

03:37 PM Jun 05, 2024 | Team Udayavani |

ಬೀದರ್ : ರಾಜ್ಯದ ಅರಣ್ಯ, ಗೋಮಾಳ, ಸರ್ಕಾರಿ ಭೂಮಿ ಹಾಗೂ ಪಟ್ಟಾ ಭೂಮಿಯಲ್ಲಿ ಬೃಹತ್ ಮರಗಳ ಅಕ್ರಮ ಕಡಿತಲೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮರ-ಗಿಡಗಳನ್ನು ಉಳಿಸಲು ವೃಕ್ಷ ಸಂರಕ್ಷಣಾ ಕಾಯಿದೆ 1976ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Advertisement

ಭಾಲ್ಕಿಯಲ್ಲಿಂದು ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳನ್ನು ನೆಟ್ಟ ಬಳಿಕ ಮಾತನಾಡಿದ ಅವರು, ಹಾಸನ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ನೂರಾರು ಮರ ಕಡಿತಲೆ ಮಾಡಿದ ದೂರುಗಳು ಬಂದಿದ್ದು ಪ್ರಾಣವಾಯು ನೀಡುವ, ತಾಪಮಾನ ಹೆಚ್ಚಾಗದಂತೆ ತಡೆಯುವ ಹಾಗೂ ಭೂಫಲವತ್ತತೆ ಕಾಪಾಡುವ ವೃಕ್ಷಗಳ ಸಂರಕ್ಷಣೆಯ ಅಗತ್ಯವಿದೆ ಎಂದರು.

ಈ ನಿಟ್ಟಿನಲ್ಲಿ ಬೆಲೆ ಬಾಳುವ ಮರಗಳ ಸಂರಕ್ಷಣೆಗಾಗಿ ಪಟ್ಟಾ ಭೂಮಿ, ಗೋಮಾಳ ಮತ್ತು ಸರ್ಕಾರಿ ಭೂಮಿಯಲ್ಲಿರುವ ಬೀಟೆ, ಶ್ರೀಗಂಧ, ತೇಗ ಮೊದಲಾದ ಬೆಲೆಬಾಳುವ ಮರಗಳ ಜಿಯೋ ಟ್ಯಾಗ್ ಮಾಡಲು ಸೂಚಿಸಲಾಗಿದ್ದು, ಇದು ಅಕ್ರಮವಾಗಿ ಮರ ಕಡಿಯುವುದಕ್ಕೆ ಕಡಿವಾಣ ಹಾಕುತ್ತದೆ ಎಂದು ತಿಳಿಸಿದರು.

ಅನುಮತಿ ಇಲ್ಲದೆ ಯಾರೇ ನಿಯಮ ಬಾಹಿರ ಮತ್ತು ಅಕ್ರಮವಾಗಿ ಮರ ಕಡಿದರೆ ಮರದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.

ಹೊಸ ಯೋಜನೆ- ಪರಿಸರ ಹಾನಿಯ ಅಧ್ಯಯನ

Advertisement

ರಸ್ತೆ, ರೈಲು ಮಾರ್ಗ, ವಿದ್ಯುತ್ ಪ್ರಸರಣ ಮಾರ್ಗ, ಕೊಳವೆ ಮಾರ್ಗ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಯೋಜನೆ ಇರಲೀ ಅಥವಾ ಗಣಿಗಾರಿಕೆ, ಜಲಾಶಯ, ಬಡಾವಣೆ ನಿರ್ಮಾಣ, ಕೈಗಾರಿಕೆ ಸ್ಥಾಪನೆಯಂತಹ ಯಾವುದೇ ಯೋಜನೆ ಇರಲಿ, ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮದ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ ಎಂಬುದನ್ನು ಇಲಾಖೆ ಮನಗಂಡಿದೆ. ಯಾವುದೇ ಹೊಸ ಯೋಜನೆಗೆ ಬಿಡಿ ಬಿಡಿಯಾಗಿ (ಇಷ್ಟು ಕಿ.ಮೀ.ನಿಂದ ಇಂತಿಷ್ಟು ಕಿ.ಮೀ.ವರೆಗೆ) ಮರ ಕಡಿಯಲು ಅನುಮತಿ ನೀಡುವುದಕ್ಕೆ ಕಡಿವಾಣ ಹಾಕಿ, ಒಂದು ಯೋಜನೆಗೆ ಒಟ್ಟಾರೆ ಒಂದೇ ಬಾರಿ ಅನುಮತಿ ನೀಡಿ, ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲೂ ಚಿಂತಿಸಲಾಗುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ವನಮಹೋತ್ಸವದ ವೇಳೆ ಗಿಡಗಳು ಆಳವಾಗಿ ಭೂಮಿಯಲ್ಲಿ ಬೇರು ಬಿಡುವಂತೆ ವೈಜ್ಞಾನಿಕವಾಗಿ ಸಸಿ ನೆಡುವಂತೆ ಸೂಚಿಸಲಾಗುವುದು. ಇದರಿಂದ ಬದುಕಿ ಉಳಿಯುವ ಸಸಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದರು.

ನೂತನ‌ ಸಂಸದ ಸಾಗರ್ ಖಂಡ್ರೆ, ಡಾ. ಬಸವಲಿಂಗ ಪಟ್ಟದ್ದೇವರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next