Advertisement

ಪರಿಸರ ರಕ್ಷಣೆಗೆ ಪಣತೊಡಲು ಇದು ಸಕಾಲ

03:15 PM Jun 05, 2021 | Team Udayavani |

ನಾವು ವಾಸಿಸುವ ಪ್ರದೇಶದ ಸುತ್ತ ಮುತ್ತಲಿನ ವಾತಾವರಣವೇ ಪರಿಸರ. ಅದು ನಮ್ಮ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆ ಹಾಗೂ ಪ್ರಸಿದ್ಧಿ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಹಾಗಾಗಿ ಅದರ ರಕ್ಷಣೆ ನಮ್ಮ ಹೊಣೆಗಳಲ್ಲೊಂದು.

Advertisement

ಯಾವುದೇ ದೇಶದ ಅಭಿವೃದ್ಧಿಯಲ್ಲಿ ಅಲ್ಲಿನ ಪರಿಸರ ಮಹತ್ವದ ಪಾತ್ರ ವಹಿಸುತ್ತದೆ. ಒಂದು ದೇಶ ದೊಡ್ಡ ದೊಡ್ಡ ಕಾರ್ಖಾನೆಗಳು, ಕಟ್ಟಡಗಳು ಹಾಗೂ ರಸ್ತೆಗಳನ್ನು ಹೊಂದಿದ ಮಾತ್ರಕ್ಕೆ ಅದನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನಲು ಸಾಧ್ಯವಿಲ್ಲ. ಜತೆಗೆ ಆರೋಗ್ಯಕರ ವಾತಾವರಣವನ್ನು ಹೊಂದಿರುವುದು ಅಷ್ಟೇ ಮುಖ್ಯವಾಗಿರುತ್ತದೆ. ಇದಕ್ಕೆ ಅಲ್ಲಿನ ಪರಿಸರ ಸಂರಕ್ಷಿಸಲ್ಪಟ್ಟು, ಸಂಪದ್ಭರಿತವಾಗಿರಬೇಕು. ಆದರೆ ಅಭಿವೃದ್ಧಿ ನೆಪದಲ್ಲಿ ಪರಿಸರದ ನಾಶಕ್ಕೆ ಮನುಷ್ಯನೇ ಕಾರಣನಾಗುತ್ತಿದ್ದಾನೆ. ಇದನ್ನರಿತು ಯುವಜನತೆ  ಎಚ್ಚೆತ್ತುಕೊಳ್ಳುವುದು ಅನಿವಾರ್ಯ.

ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅಗತ್ಯವೇನಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ.

ಯುವಜನತೆ ನೈಸರ್ಗಿಕ ಪರಿಸರದ ರಕ್ಷಣೆಗೆ ಅಗತ್ಯವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಇದಕ್ಕೆ ಪೂರಕ. ನೀರಿನ ಬಳಕೆ ವೇಳೆ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಂಡು ಪೋಲಾಗದಂತೆ ನೋಡಿಕೊಳ್ಳುವುದು, ನೀರಿಂಗಿಸುವಿಕೆ, ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯಗಳ ರಕ್ಷಣೆ, ಇತರರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವುದು, ತ್ಯಾಜ್ಯ ವಿಲೇವಾರಿ ವ್ಯವಸ್ಥಿತವಾಗಿ ನಡೆಸುವುದು, ನವೀಕರಿಸಬಹುದಾದ ಇಂಧನಗಳ ಬಳಕೆಗೆ ಪ್ರೋತ್ಸಾಹ ನೀಡುವುದು, ಪರಿಸರಕ್ಕೆ ಮಾರಕವಾದ ರಾಸಾಯನಿಕಗಳ ಬಳಕೆ ವಿರುದ್ಧ ಜಾಗೃತಿ, ಪ್ಲಾಸ್ಟಿಕ್‌ನಂತಹ ಮಣ್ಣಿನಲ್ಲಿ ಕರಗದ ವಸ್ತುಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಇತ್ಯಾದಿ ಚಟುವಟಿಕೆಗಳಲ್ಲಿ ಯುವಜನರಾದ ನಾವು ಸ್ವಯಂ ಸ್ಫೂರ್ತಿಯಿಂದ ತೊಡಗಿಸಿಕೊಂಡು ಮಾದರಿಯಾಗಬೇಕಿದೆ. ಅಭಿವೃದ್ಧಿಯೇ ಮೂಲವಂತ್ರವಾಗಿರುವ ಇಂದು ಅದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳ ಬಳಕೆ ಸಂದರ್ಭ ಪರಿಸರ ರಕ್ಷಣೆಗೆ ಹೊಂದಿಕೊಳ್ಳುವಂತೆ ನೋಡಿಕೊಳ್ಳುವುದು ಯುವಜನತೆಯ ಕರ್ತವ್ಯವಾಗಿರಬೇಕು.

ಸುಂದರ ಲಾಲ್‌ ಬಹುಗುಣ, ಸಾಲುಮರದ ತಿಮ್ಮಕ್ಕ, ಶಿವರಾಮ ಕಾರಂತ ಹೀಗೆ ಹಲವಾರು ಮಂದಿ ಸ್ವತ್ಛ ಪರಿಸರಕ್ಕಾಗಿ ಜೀವಮಾನವನ್ನೇ ಮೀಸಲಿಟ್ಟಿದ್ದರು. ಅದಕ್ಕಾಗಿ ಅವರು ಬೇರೆ ಬೆರೆ ಚಳವಳಿ ನಡೆಸಿ ಪರಿಸರ ಎಂದರೆ ಏನು? ಅದರ ರಕ್ಷಣೆ ಏಕೆ ಎಂದು ತೋರಿಸಿದ್ದಾರೆ. ಇದು ಭಾರತದಲ್ಲಿ ವ್ಯಕ್ತಿಗತ ನಡೆಗಳಾದರೆ ಇದಕ್ಕೆ ಹೊರತಾಗಿ ಪರಿಸರ ರಕ್ಷಣೆ, ಜಾಗೃತಿಗಾಗಿ ದೇಶದಲ್ಲಿ ಎನ್ವಿರಾನ್‌ಮೆಂಟ್‌ ಇಂಪ್ರೂವ್‌ಮೆಂಟ್‌ ಟ್ರಸ್ಟ್‌ ಸಹಿತ ಹಲವಾರು ಸಂಸ್ಥೆಗಳು, ಎನ್‌ಜಿಒಗಳು ಕಾರ್ಯಾಚರಿಸುತ್ತಿವೆ. ಇವೆಲ್ಲವುಗಳ ಪರಿಸರ ಕಾಳಜಿ ಯುವ ಜನರಿಗೆ ಪ್ರೇರಣೆಯಾಗಿ ಆ ದಾರಿಯಲ್ಲಿ ನಡೆದರೆ ಉತ್ತಮ ಪರಿಸರ ನಿರ್ಮಾಣ ಆಗುವುದು ನಿಸ್ಸಂಶಯ.

Advertisement

ಎಲ್ಲ ಜೀವರಾಶಿಗಳ ಅಳಿವು ಉಳಿವಿನ ಮೇಲೆ ನೇರ ಪರಿಣಾಮ ಬೀರುವ ಪರಿಸರ ಹಾಗೂ ಪ್ರಕೃತಿಯನ್ನು ಉಳಿಸಿ, ಬೆಳೆಸಿ ಜತನದಿಂದ ಕಾಪಾಡುವ ಹೊಣೆ ಕೇವಲ ಓರ್ವ ವ್ಯಕ್ತಿ, ಸಮಾಜ, ಸಮುದಾಯ, ಪಕ್ಷಕ್ಕೆ ಸೀಮಿತವಾಗದೆ ಸಮಸ್ತ ವಲಯದ ಜವಾಬ್ದಾರಿಯಾಗಿದೆ. ಅಂಥ ಜವಾಬ್ದಾರಿಯೊಂದಿಗೆ ಮುಂದಡಿಯಿಡಲು  ಪಣತೊಡಲು ಪರಿಸರ ದಿನವಾದ ಇಂದೇ ಸಕಾಲ.

-ಸಂ

Advertisement

Udayavani is now on Telegram. Click here to join our channel and stay updated with the latest news.

Next