ಮೈಸೂರು: ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ ಶುಕ್ರವಾರದಿಂದ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದು, ಸೋಮವಾರ ಸಂಜೆ ಅರಮನೆ ಪ್ರವೇಶ ಮಾಡಲಿವೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ನಾಡಹಬ್ಬ ಮೈಸೂರು ದಸರಾ -2023ರ ಅಂಗವಾಗಿ ಗಜಪಡೆಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಸೋಮವಾರ ಮಧ್ಯಾಹ್ನ 12.01ರಿಂದ 12.51ರ ಶುಭ ಸಮಯವಾದ ಅಭಿಜಿನ್ ಲಗ್ನದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಸ್ವಾಗತಿಸಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಈ ಮುನ್ನ ಬೆಳಗ್ಗೆ 10ಕ್ಕೆ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯಿಂದ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ. ಬಳಿಕ ಮೆರವಣಿಗೆಯಲ್ಲಿ ಅರಣ್ಯ ಭವನ, ಅಶೋಕ ವೃತ್ತ, ಆರ್‌ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ ಹಾದು ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶಿಸಲಿವೆ.
ವೀರನಹೊಸಹಳ್ಳಿಯಲ್ಲಿ ಶುಕ್ರವಾರ ಗಜಪಯಣ ಮೂಲಕ ಮೈಸೂರಿನ ಅರಣ್ಯ ಭವನಕ್ಕೆ ಬಂದಿಳಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆ ತಂಡ ಹಸಿಹುಲ್ಲು, ಒಣಹುಲ್ಲು, ಕಬ್ಬು, ಬೆಲ್ಲ, ಭತ್ತ, ತೆಂಗಿನಕಾಯಿ, ಆಲದ ಸೊಪ್ಪು ತಿಂದು ವಿಶ್ರಾಂತಿಯಲ್ಲಿವೆ.