Advertisement

ರಾಜಕಾರಣಕ್ಕೆ ಮತ್ತೂಬ್ಬ ಜಾರಕಿಹೊಳಿ ಎಂಟ್ರಿ

03:45 AM Mar 05, 2017 | |

ಬೆಳಗಾವಿ: “ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ, ಆಡಳಿತ ಪಕ್ಷದಲ್ಲಿ ನಮ್ಮ ಮನೆಯ ಒಬ್ಬರು ಶಾಸಕರು ಇರಲೇಬೇಕು. ಜಿಲ್ಲಾ ರಾಜಕಾರಣ ನಮ್ಮ ಹಿಡಿತಕ್ಕೆ ಬರಬೇಕು. ಹೊರಗಡೆ ನಮ್ಮಲ್ಲಿ ಭಿನ್ನಮತವಿದೆ ಎಂದು ಜನರಿಗೆ ಕಂಡು ಬಂದರೂ ರಾಜಕಾರಣ ಹಾಗೂ ಅಧಿಕಾರದ ಪ್ರಶ್ನೆ ಬಂದಾಗ ನಾವು ಒಂದಾಗಿರಬೇಕು’. ಇದು ಗೋಕಾಕದ ಜಾರಕಿಹೊಳಿ ಕುಟುಂಬದ ರಾಜಕಾರಣ.

Advertisement

ಬೆಳಗಾವಿ ಜಿಲ್ಲೆಯ ರಾಜಕಾರಣದ ಮಾತು ಬಂದಾಗ ಮೊದಲು ಪ್ರಸ್ತಾಪವಾಗುವುದು ಜಾರಕಿಹೊಳಿ ಹೆಸರು. ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಿಗಿ ಹಿಡಿತ ಸಾಧಿಸಿರುವ ಈ ಸಹೋದರರು ಅಧಿಕಾರ ಹಾಗೂ ಸಚಿವ ಸ್ಥಾನ ಸತತವಾಗಿ ತಮ್ಮ ಕುಟುಂಬದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ತಮ್ಮ ಚಾಣಾಕ್ಷ ರಾಜಕೀಯ ತಂತ್ರಗಳಿಂದಾಗಿ ಇಡೀ ಗೋಕಾಕ ತಾಲೂಕಿನ ಮೇಲೆ ಹಿಡಿತ ಸಾಧಿಸಿದ್ದ ಈ ಪರಿವಾರ ಇಡೀ ಜಿಲ್ಲೆಗೂ ಇದನ್ನು ವಿಸ್ತರಿಸಿ ರಾಜ್ಯದ ಗಮನ ತಮ್ಮೆಡೆ ಕೇಂದ್ರೀಕೃತವಾಗುವಂತೆ ಮಾಡಿದ್ದಾರೆ.

ಪ್ರಭಾವಿ ಕುಟುಂಬ:
ಗೋಕಾಕ ತಾಲೂಕಿನಲ್ಲಿ ಈ ಕುಟುಂಬದ ಪ್ರಾಬಲ್ಯ ಎಷ್ಟು ಜೋರಾಗಿದೆ ಎಂದರೆ ಪ್ರಮುಖ ರಾಜಕೀಯ ಪಕ್ಷಗಳೂ ಇಲ್ಲಿ ಈ ಕುಟುಂಬದ ಮೂಲಕವೇ ಗುರುತಿಸಿಕೊಳ್ಳುತ್ತವೆ. ಕಾಂಗ್ರೆಸ್‌ನ ಭದ್ರಕೋಟೆ ಭೇದಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಬಾಲಚಂದ್ರ ಜಾರಕಿಹೊಳಿ, ನಂತರ ರಾಜ್ಯದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರ ಕುಟುಂಬದ ಪ್ರಭಾವಕ್ಕೆ ಸಾಕ್ಷಿ.

ನಿಗೂಢತೆ ಇರಲೇಬೇಕು:
ಜಾರಕಿಹೊಳಿ ಸಹೋದರರ ರಾಜಕಾರಣ ಎಂದರೆ ಅಲ್ಲಿ ನಿಗೂಢತೆ ಇರಲೇಬೇಕು. ಮೇಲ್ನೋಟಕ್ಕೆ ಕಾಣುವುದು ಯಾವುದೂ ಸತ್ಯವಲ್ಲ ಎನಿಸಬೇಕು. ರಮೇಶ, ಸತೀಶ ಹಾಗೂ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿ ಪ್ರಭಾವಿಗಳಾಗಿದ್ದರೆ, ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿ ವರ್ಚಸ್ಸು ಹೊಂದಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ಡಮ್ಮಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭೀಮಸಿ ಜಾರಕಿಹೊಳಿ ಈಗ ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ. ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ.

ಚಾಣಾಕ್ಷ ನಡೆ:
ಜಾರಕಿಹೊಳಿ ಕುಟುಂಬದ ರಾಜಕಾರಣ ಎಲ್ಲರ ನಿರೀಕ್ಷೆ ಹುಸಿ ಮಾಡುತ್ತಲೇ ಬಂದಿದೆ. ಬೇರೆ ಬೇರೆ ಪಕ್ಷದಲ್ಲಿದ್ದರೂ ತಮ್ಮಲ್ಲಿ ಭಿನ್ನಮತವಿದೆ ಎಂದು ತೋರಿಸಿಕೊಂಡವರಲ್ಲ. ಹೊರಗಡೆ ಭಿನ್ನಮತ ಕಾಣುವಂತೆ ಮಾಡಿ ಆಯಾ ರಾಜಕೀಯ ನಾಯಕರ ಹಾಗೂ ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದು ಇವರ ರಾಜಕೀಯ ತಂತ್ರಗಾರಿಕೆ.

Advertisement

ಗೋಕಾಕ ಕ್ಷೇತ್ರದಲ್ಲಿ ಪೈಪೋಟಿಯೇ ಇಲ್ಲದಂತೆ ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದಿರುವ ರಮೇಶ ಜಾರಕಿಹೊಳಿ ಈಗ ಇಡೀ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ. ಅವರಿಗೆ ಬಾಲಚಂದ್ರ ಹಾಗೂ ಲಖನ್‌ ಕೈಜೋಡಿಸಿದ್ದರೆ, ಜಾರಕಿಹೊಳಿ ಕುಟುಂಬದ ಸದಸ್ಯರಿಗೆ ರಾಜಕೀಯ ಗುರುವಿನಂತಿರುವ ಸತೀಶ ಜಾರಕಿಹೊಳಿ ಬೇರೆ ಜಿಲ್ಲೆಗಳಲ್ಲೂ ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಮೇಲಿಂದ ಮೇಲೆ ರಾಯಚೂರು ಜಿಲ್ಲೆಗೆ ಭೇಟಿ ನೀಡುತ್ತ ಅಚ್ಚರಿಯನ್ನೂ ಹುಟ್ಟಿಸಿದ್ದಾರೆ.

ಇನ್ನೊಬ್ಬ ಸೋದರ ಎಂಟ್ರಿ:
ಇದಕ್ಕೆ ಪುಷ್ಟಿ ನೀಡುವಂತೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಸಹೋದರ ಸತೀಶ ಯಮಕನಮರಡಿ ಬದಲು ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದು, ಇನ್ನೊಬ್ಬ ಸಹೋದರ ಲಖನ್‌ ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದಾರೆ.

ಸೋದರರಿಗಾಗಿ ಕೆಲಸ:
“ನಾನು ಈ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡುವುದು ನಿಶ್ಚಿತ. ಎಲ್ಲವೂ ನಿರ್ಧಾರವಾಗಿದೆ. ಬಹುತೇಕ ಯಮಕನಮರಡಿ ಅಂತಿಮವಾಗಿದೆ. ಕಳೆದ ಬಾರಿಯೇ ಸ್ಪರ್ಧೆ ಮಾಡಬೇಕಿತ್ತು. ಆಗ ಸಹೋದರ ಸತೀಶಗೆ ಯಮಕನಮರಡಿ ಬಿಟ್ಟುಕೊಡಲಾಗಿತ್ತು. ಆದರೆ ಈ ಬಾರಿ ಸ್ಪರ್ಧೆ ಮಾಡುತ್ತೇನೆ. ಎಲ್ಲೇ ಮಾಡಿದರೂ ಅದು ಕಾಂಗ್ರೆಸ್‌ನಿಂದ’ ಎಂದು ಲಖನ್‌ ಉದಯವಾಣಿಗೆ ತಿಳಿಸಿದರು.

ರಾಯಚೂರ ಗ್ರಾಮೀಣಕ್ಕೆ ಸತೀಶ, ಯಮಕನಮರಡಿಗೆ ಲಖನ್‌ ಜಾರಕಿಹೊಳಿ ಅಭ್ಯರ್ಥಿ
ಬೆಳಗಾವಿ:
ಸಹೋದರ ಲಖನ್‌ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಿಂದ ಹಾಗೂ ಶಾಸಕ ಸತೀಶ ಜಾರಕಿಹೊಳಿ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದು ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಹೇಳಿ ಕುತೂಹಲ ಮೂಡಿಸಿದ್ದಾರೆ.

ನಗರದಲ್ಲಿ ಶನಿವಾರ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಲವು ಬದಲಾವಣೆ ಆಗಲಿವೆ. ರಾಜ್ಯ ರಾಜಕಾರಣಕ್ಕೆ ಸಹೋದರ ಲಖನ್‌ ಧುಮುಕಲಿದ್ದಾರೆ ಎಂದರು.

ಬಹುಮತ ಇಲ್ಲದ ಕಾರಣ ಪಾಲಿಕೆಯಲ್ಲಿ ಕನ್ನಡದವರಿಗೆ ಮೇಯರ್‌ ಹುದ್ದೆ ಸಿಗಲಿಲ್ಲ. ಸಹೋದರ ಸತೀಶ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ತಂತ್ರಗಾರಿಕೆ ಹೆಣೆದು ಕನ್ನಡ ಮೇಯರ್‌ ಮಾಡುವ ಉದ್ದೇಶ ಹೊಂದಲಾಗಿತ್ತು. ಅದು ವಿಫ‌ಲವಾಯಿತು. ಸಂಖ್ಯಾಬಲದ ಕೊರತೆಯಿಂದ ನಮಗೆ ಮೇಯರ್‌ ಹುದ್ದೆ ಕೈತಪ್ಪಿತು ಎಂದು ತಿಳಿಸಿದರು.

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next