Advertisement

ವಾಣಿಜ್ಯೋದ್ಯಮಿ ಮದನ ದೇಸಾಯಿ ಇನ್ನಿಲ್ಲ

03:24 PM May 15, 2017 | Team Udayavani |

ಹುಬ್ಬಳ್ಳಿ: ನಗರದ ಖ್ಯಾತ ಉದ್ಯಮಿ, ದೇಸಾಯಿ ಆ್ಯಂಡ್‌ ಕಂಪನಿ ಸಮೂಹ ಸಂಸ್ಥೆಗಳ ಪಾಲುದಾರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಮದನ ಬಿಂದೂರಾವ್‌ ದೇಸಾಯಿ (70) ಶನಿವಾರ ಮಧ್ಯರಾತ್ರಿ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಕೌಟುಂಬಿಕ ಸಮಾರಂಭವೊಂದಕ್ಕೆ ಕೊಯಮತ್ತೂರಿಗೆ ತೆರಳಿದ್ದ ಮದನ ದೇಸಾಯಿ ಅವರು ಅಲ್ಲಿಯೇ ಅಸ್ವಸ್ಥರಾಗಿ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಸಹೋದರರು, ಅಪಾರ ಬಂಧು-ಬಳಗವಿದ್ದಾರೆ. 1947ರ ಅಕ್ಟೋಬರ್‌ 18ರಂದು ಜನಿಸಿದ್ದ ಮದನ ದೇಸಾಯಿ ಅವರು, ದೇಸಾಯಿ ಗ್ರುಪ್‌ ಕನ್ಸರ್ನ್ಸ್ದ ಮಸ್ಸೇ ಫರ್ಗುಸನ್‌ ಟ್ರಾಕ್ಟರ್ಸ್‌,

-ಬಜಾಜ್‌ ಟೆಂಪೊ ಮತ್ತು ಭಾರತ ಗ್ಯಾಸ್‌ನಲ್ಲಿ ಹಾಗೂ ಡೊವ್‌ ಗ್ಲೋಬಲ್‌ ಕಾರ್ಪೋರೇಶನ್‌, ಇಂಪೋರ್ಟ್‌ ಎಕ್ಸಪೋರ್ಟ್‌ ಲೆಸನ್ಸ್‌ ಪಾಲುದಾರರಾಗಿದ್ದರಲ್ಲದೆ, ವಿವಿಧ ಬ್ಯಾಂಕ್‌ ಹಾಗೂ ಹಣಕಾಸು ಕಂಪೆನಿಗಳಿಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಕೌಸಾಳಿ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಲಯನ್ಸ್‌ ಜಿಲ್ಲಾ ಗವರ್ನರ್‌ ಆಗಿಯೂ ಕಾರ್ಯ ನಿರ್ವಹಿಸಿದ್ದರು.

ಅಂತ್ಯಕ್ರಿಯೆ: ಮದನ ದೇಸಾಯಿ ಅವರ ಪಾರ್ಥಿವ ಶರೀರವನ್ನು ಕೊಯಿಮತ್ತೂರಿನಿಂದ ರವಿವಾರ ಸಂಜೆ 4:00 ಗಂಟೆ ಸುಮಾರಿಗೆ ಅವರ ಇಲ್ಲಿನ ದೇಸಾಯಿ ವೃತ್ತದಲ್ಲಿರುವ ನಿವಾಸಕ್ಕೆ ತರಲಾಯಿತು. ಕೇಂದ್ರ ಸಚಿವ ಎಚ್‌. ಅನಂತಕುಮಾರ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ,

-ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ವಿಧಾನಸಭೆ ಸದಸ್ಯ ಪ್ರಸಾದ ಅಬ್ಬಯ್ಯ, ಮಹಾಪೌರ ಡಿ.ಕೆ. ಚವ್ಹಾಣ, ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರು ಸೇರಿದಂತೆ ಆರ್‌ಎಸ್‌ಎಸ್‌, ಬಿಜೆಪಿ ಮುಖಂಡರು ಅಂತಿಮ ದರ್ಶನ ಪಡೆದರು. ಅನಂತರ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

Advertisement

ಸಂತಾಪ: ಮದನ ದೇಸಾಯಿ ಅವರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಸಚಿವ ಎಚ್‌.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ಕಾಂಗ್ರೆಸ್‌ ಮುಖಂಡ ಎ.ಎಂ.ಹಿಂಡಸಗೇರಿ ಸಂತಾಪ ಸೂಚಿಸಿದ್ದಾರೆ.  

ಶ್ರದ್ಧಾಂಜಲಿ ಸಭೆ: ಮದನ ದೇಸಾಯಿ ಅವರ ನಿಧನಕ್ಕೆ ಲ್ಯಾಮಿಂಗ್ಟನ್‌ ಶಾಲಾ ಸುಧಾರಣಾ ಸಮಿತಿ ಶ್ರದ್ಧಾಂಜಲಿ ಸಲ್ಲಿಸಿತು. ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಮದನ ದೇಸಾಯಿ ಅವರ ಅಗಲಿಕೆಯಿಂದ ಸಮಾಜಕ್ಕೆ ಹಾನಿಯಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು. 

ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಎಂ. ಪೈಕೋಟಿ, ಕಾರ್ಯದರ್ಶಿ ಡಾ| ಬಿ.ಎಲ್‌. ಪಾಟೀಲ, ಖಜಾಂಚಿ ದಿನೇಶ ಶೆಟ್ಟಿ, ಆಡಳಿತಾಧಿಕಾರಿ ಎಂ.ಬಿ. ನಾತು, ಮುರಳಿ ಕರ್ಜಗಿ, ವಾಸುದೇವ ಪಾಟೀಲ, ಶಶಿ ಸಾಲಿ ಮೊದಲಾದವರು ಸಂತಾಪ ಸೂಚಿಸಿ, ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಪ್ರಾರ್ಥಿಸಿ ಮೌನ ಆಚರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next