ಬೆಂಗಳೂರು: ಈ ಮೆಟ್ರೋ ಪ್ರವೇಶ ದ್ವಾರಗಳು ಲೆಕ್ಕಕ್ಕುಂಟು; ಆದರೆ, ಪ್ರಯಾಣಿಕರ ಸೇವೆಗಲ್ಲ!
ಕುಷ್ಟರೋಗ ಆಸ್ಪತ್ರೆ ಎದುರು ಇರುವ ಸಿಟಿ ರೈಲು ನಿಲ್ದಾಣಕ್ಕೆ ಒಟ್ಟಾರೆ ನಾಲ್ಕು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ರಸ್ತೆ ಒಂದು ಬದಿಯಲ್ಲಿ ಎರಡು ಹಾಗೂ ಇದೇ ಮಾದರಿಯಲ್ಲಿ ಮತ್ತೂಂದು ಬದಿ ಇನ್ನೆರಡು ದ್ವಾರಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕೇವಲ ಒಂದು ಸೇವೆಗೆ ಮುಕ್ತಗೊಂಡಿದೆ. ಉಳಿದ ಮೂರು ದ್ವಾರಗಳು ಉದ್ಘಾಟನೆ ದಿನದಿಂದಲೂ ಮುಚ್ಚಿದ ಸ್ಥಿತಿಯಲ್ಲೇ ಇವೆ. ವಿಶಾಲ ಜಾಗದಲ್ಲಿ ಕೋಟ್ಯಂತರ ರೂ. ಸುರಿದು ನಿರ್ಮಿಸಿದ ದ್ವಾರಗಳು ಈಗ ಇದ್ದೂ ಇಲ್ಲದಂತಾಗಿವೆ. ಇದಕ್ಕೆ ಕಾರಣ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕ ದಟ್ಟಣೆ ಇಲ್ಲ ಎಂದು ಹೇಳಲಾಗುತ್ತಿದೆ.
ಕ್ರಾಂತಿವೀರ ಮೆಟ್ರೋ ನಿಲ್ದಾಣದಿಂದ ಗೋಪಾಲಪುರ ಕಡೆ ಹೋಗಲು 60 ಮೀಟರ್ ಉದ್ದ ಹಾಗೂ 4.5 ಮೀಟರ್ ಅಗಲ ವಿಸ್ತೀರ್ಣದ ಸುರಂಗ ಮಾರ್ಗವನ್ನು ಸುಮಾರು ನಾಲ್ಕೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, 2018 ಫೆ. 20ರಂದು ಲೋಕಾರ್ಪಣೆಗೊಂಡಿತ್ತು. ಗೋಪಾಲಪುರ, ಮಾಗಡಿ ಮುಖ್ಯರಸ್ತೆಯ 1 ಮತ್ತು 2ನೇ ಕ್ರಾಸ್‌ನ ಸ್ಥಳೀಯರು ಸೇರಿದಂತೆ ಸುತ್ತಲಿನ ಜನರಿಗೆ ಅನುಕೂಲವಾಗಲೆಂದು ಈ ಸುರಂಗ ಮಾರ್ಗಕ್ಕೆ ಮೂರು ದ್ವಾರ ನಿರ್ಮಿಸಲಾಯಿತು. ನಿಲ್ದಾಣಕ್ಕೆ ಹೊಂದಿಕೊಂಡಂತೆಯೇ ಸಿಗ್ನಲ್ ಇದ್ದು, ಯಾವಾಗಲೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ‘ಪೀಕ್ ಅವರ್’ನಲ್ಲಿ ಜನ ಕೈಯಲ್ಲಿ ಜೀವ ಹಿಡಿದುಕೊಂಡು ರಸ್ತೆ ದಾಟುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಿಗ್ನಲ್ ಇದ್ದರೂ, ಪೆಲಿಕಾನ್ ಕ್ರಾಸಿಂಗ್ ಅವಧಿ ಅತ್ಯಲ್ಪವಾಗಿರುತ್ತದೆ. ಅಷ್ಟರಲ್ಲಿ ವೃದ್ಧರು, ಮಹಿಳೆಯರು ದಾಟುವುದು ಕಿರಿಕಿರಿಯಾಗಿ ಪರಿಣಮಿಸಿದೆ.
ಮೂರು ದ್ವಾರಗಳಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಸಂಚಾರ ನಿಷೇಧಿಸಲಾಗಿದೆ ಎಂದು ನಿಲ್ದಾಣದೊಳಗೆ ಫಲಕ ಹಾಕಲಾಗಿದೆ. ಮಾಗಡಿ ಮೆಟ್ರೋ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣ ಒಂದುವರೆ ಕಿ.ಮೀ ಅಂತರದಲ್ಲಿದ್ದು, ಈ ಎರಡು ನಿಲ್ದಾಣಗಳ ಮಧ್ಯೆ ನಮ್ಮ ಮನೆ ಇದೆ. ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಿಂದ ಜಲಮಂಡಳಿ ವಾಟರ್ ಟ್ಯಾಂಕ್‌ವರೆಗೆ ಸುರಂಗ ಮಾರ್ಗವಿದ್ದು, ಇಲ್ಲಿ ನಿರ್ಮಿಸಿರುವ ಎರಡು ದ್ವಾರದ ಗೇಟ್‌ಗಳನ್ನು ಮುಚ್ಚಿದ್ದಾರೆ. ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ದ್ವಾರದಿಂದ ಬರಬೇಕಾಗಿದೆ. ಮನೆಗೆ ಹೋಗಬೇಕಾದರೆ ಸಿಗ್ನಲ್ ದಾಟಬೇಕಾಗಿದೆ ಎಂದು ಸ್ಥಳಿಯ ನಿವಾಸಿ ಶಿವಕುಮಾರ್ ಅಲವತ್ತುಕೊಳ್ಳುತ್ತಾರೆ.
Advertisement
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇಳಿಯುವ ಮತ್ತು ಮೆಟ್ರೋ ಏರುವ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ವರ್ಷಗಳ ಹಿಂದೆಯೇ ನಾಲ್ಕು ಪ್ರವೇಶ-ನಿರ್ಗಮನ ದ್ವಾರಗಳನ್ನು ನಿರ್ಮಿಸಿದೆ. ಒಂದೂವರೆ ವರ್ಷದ ಹಿಂದೆಯೇ ಉದ್ಘಾಟನೆಗೊಂಡಿವೆ. ಆದರೆ, ವಾರದ ಅಂತರದಲ್ಲಿ ಆ ಪೈಕಿ ಮೂರು ದ್ವಾರಗಳ ಶೆಟ್ರರ್ಸ್ ಎಳೆಯಲಾಗಿದ್ದು, ಇದುವರೆಗೆ ಅವುಗಳನ್ನು ತೆರೆದಿಲ್ಲ. ಇದರಿಂದ ರಸ್ತೆ ದಾಟಲು ಪ್ರಯಾಣಿಕರು ಪರದಾಡುವಂತಾಗಿದೆ.
Related Articles
Advertisement
ಸಂಚಾರದ ಪ್ರಮಾಣ ಕಡಿಮೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 500 ಮಂದಿ ಟಿಕೆಟ್ ಪಡೆದು ಪ್ರಯಾಣಿಸುತ್ತಾರೆ. 200 ಜನರು ಸ್ಮಾರ್ಟ್‌ಕಾರ್ಡ್ ಬಳಸುತ್ತಾರೆ. ಒಟ್ಟಾರೆ 700ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಮೆಜೆಸ್ಟಿಕ್, ಡಾ.ಅಂಬೇಡ್ಕರ್ ನಿಲ್ದಾಣಕ್ಕೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ. ಪೀಕ್ ಅವರ್ ಹೊರತುಪಡಿಸಿದರೆ, ಉಳಿದ ಅವಧಿಯಲ್ಲಿ ನಿಲ್ದಾಣ ಖಾಲಿ ಇರುತ್ತದೆ. ಆದ್ದರಿಂದ ಪ್ರಸ್ತುತ ಒಂದೇ ದ್ವಾರವನ್ನು ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಇನ್ನುಳಿದ ದ್ವಾರಗಳನ್ನು ಸಂಪರ್ಕಿಸುವ ಸುರಂಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದ ಸಿಬ್ಬಂದಿಯೊಬ್ಬರು ತಿಳಿಸಿದರು.
ಅನಗತ್ಯ ಖರ್ಚು ಯಾಕೆಂಬ ಲೆಕ್ಕಾಚಾರ?:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದಲ್ಲಿ ಮುಚ್ಚಿರುವ ಮೂರು ದ್ವಾರಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿದರೆ, ಬ್ಯಾಗ್‌ಗಳನ್ನು ಪರಿಶೀಲಿಸುವ ಯಂತ್ರ, ಕಂಪ್ಯೂಟರ್, ಸಿಸಿ ಕ್ಯಾಮೆರಾ ಅಳವಡಿಕೆ, ಲೋಹಶೋಧಕ ಯಂತ್ರ ಸೇರಿ ಕನಿಷ್ಠ ಹತ್ತಕ್ಕೂ ಅಧಿಕ ಸಿಬ್ಬಂದಿ ಬೇಕಾಗುತ್ತದೆ. ಈ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಇದ್ದು, ಅಗತ್ಯ ವಸ್ತುಗಳು ಮತ್ತು ಸಿಬ್ಬಂದಿ ನೇಮಿಸುವುದು ಅನಗತ್ಯ ಖರ್ಚು ಎಂಬ ಲೆಕ್ಕಾಚಾರ ಇದರ ಹಿಂದೆ ಎಂದೂ ಸ್ವತಃ ನಿಗಮದ ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದರು.
-ಮಂಜುನಾಥ ಗಂಗಾವತಿ