ಬೆಂಗಳೂರು: ರಾಜ್ಯದಲ್ಲಿ ಹೊಸ ಖಾಸಗಿ ಅಥವಾ ಸ್ವಾಯತ್ತ ವಿಶ್ವವಿದ್ಯಾಲಯಗಳು ತಲೆ ಎತ್ತುತಿದ್ದಂತೆ ವೃತ್ತಿಪರ ಕೋರ್ಸ್ ಪಡೆಯುವ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ತಲೆನೋವಾಗಿ ಪರಿಣಮಿಸಿದೆ.ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಅನುದಾನಿತ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತದೆ.
ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರಾಧಿಕಾರ ನಡೆಸುವ ಸಿಇಟಿಯಲ್ಲಿ ಭಾಗವಹಿಸುತ್ತಾರೆ ಮತ್ತುಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಪ್ರಾಧಿಕಾರದ ಮೂಲಕವೇ ಸೀಟು ಪಡೆಯುತ್ತಾರೆ. ಹಾಗೆಯೇ ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ(ಕಾಮೆಡ್-ಕೆ)ವು ತನ್ನ ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳ ಸೀಟು ಹಂಚಿಕೆಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತದೆ. ಕಾಮೆಡ್-ಕೆ ಪರೀಕ್ಷೆಯಲ್ಲೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದರ ಜತೆಗೆ ಕೆಲವು ಖಾಸಗಿ ಅಥವಾ ಸ್ವಾಯತ್ತ ವಿಶ್ವವಿದ್ಯಾಲಯಗಳು ತಮ್ಮಲ್ಲಿನ ಎಂಜಿನಿಯರಿಂಗ್ ಸೀಟು ಹಂಚಿಕೆಗಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆಗಳು ನಡೆಸಲು ಸಜ್ಜಾಗಿವೆ.
ಶಿಕ್ಷಣ ಸಂಸ್ಥೆಗಳು ಖಾಸಗಿ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯುತ್ತಿದ್ದಂತೆ ಪ್ರತ್ಯೇಕ ಪ್ರವೇಶ ಪರೀಕೆ Ò ನಡೆಸಿದರೆ ಎಂಜಿನಿಯರಿಂಗ್ ಪದವಿ ಪಡೆಯಲಿರುವ ವಿದ್ಯಾರ್ಥಿಗಳಿಗೆ ಅನಾನುಕೂಲ ಹೆಚ್ಚಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಂತೂ ಬರೆಯಲೇ ಬೇಕಾಗುತ್ತದೆ. ಆನಂತರ ಕಾಮೆಡ್-ಕೆ ಪ್ರವೇಶ ಪರೀಕ್ಷೆ, ಜತೆಗೆ ಖಾಸಗಿ ವಿಶ್ವ ವಿದ್ಯಾಲಯಗಳ ಪ್ರವೇಶ ಪರೀಕ್ಷೆಯನ್ನು ಪ್ರತ್ಯೇಕ ವಾಗಿ ಬರೆಯಬೇಕಾಗುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಒಂದುಸೀಟಿಗಾಗಿ ಐದಾರು ಪ್ರವೇಶ ಪರೀಕ್ಷೆ ಬರೆಯ ಬೇಕಾಗುತ್ತದೆ. ಇದರ ಜತೆಗೆ ಐಐಎಸ್ಸಿ, ಐಐಟಿ, ಐಐಎಂ ಮೊದಲಾದ ರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿಯೂ ಪ್ರತ್ಯೇಕ ಪರೀಕ್ಷೆ ಬರೆಯಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಮೇಲೆ ಪ್ರವೇಶ ಪರೀಕ್ಷೆಯ ಹೊರೆ ಅಧಿಕವಾಗಲಿದೆ ಮತ್ತುಒತ್ತಡವೂ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
ಏಕರೂಪ ಪ್ರವೇಶ ಪರೀಕ್ಷೆ ಅಗತ್ಯವಿದೆ: ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಸಂಬಂಧ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ಮಾದರಿಯಲ್ಲೇ ಎಂಜಿನಿಯರಿಂಗ್ ಕೋರ್ಸ್‌ಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆಗಳು ನಡೆದಿವೆ. ಆದರೆ, ಈ ಬಗ್ಗೆ ನಿರ್ಧಾರವನ್ನು ಕೇಂದ್ರ ಸರ್ಕಾರ ಅಥವಾ ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ತೆಗೆದುಕೊಳ್ಳಬೇಕಾಗುತ್ತದೆ.
ಎಂಜಿನಿಯರಿಂಗ್ ಕೋರ್ಸ್‌ಗೆ ಏಕರೂಪ ಪ್ರವೇಶಪರೀಕ್ಷೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ರಾಜ್ಯದ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲೂ ಕೆಲವೊಂದುನಿಯಮ ರೂಪಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾ ಲಯದ ಕುಲಪತಿಯೊಬ್ಬರು ಮಾಹಿತಿ ನೀಡಿದರು.
ಹೊಸ ವಿಶ್ವವಿದ್ಯಾಲಯಗಳು :
ರಾಜ್ಯದಲ್ಲಿ ಸದ್ಯ 19 ಖಾಸಗಿ ವಿಶ್ವವಿದ್ಯಾಲಯ, 11 ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಇತ್ತೀಚೆಗೆ ಜನವರಿ ಕೊನೆಯವಾರ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ನಡೆದ ವಿಧಾನ ಮಂಡಳ ಉಭಯ ಸದನಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ನಾಲ್ಕು ಶಿಕ್ಷಣ ಸಂಸ್ಥೆಗಳು ಖಾಸಗಿ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಲು ತಂದಿದ್ದ ವಿಧೇಯಕಕ್ಕೆ ಅನುಮೋದನೆ ನೀಡಿದೆ. ಈ ಅನುಮೋದನೆಯಿಂದ ರಾಜ್ಯದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ, ವಿದ್ಯಾಶಿಲ್ಪ್ ವಿಶ್ವವಿದ್ಯಾಲಯ, ಏಟ್ರೀಯ ವಿಶ್ವವಿದ್ಯಾಲಯ ಹಾಗೂ ನ್ಯೂ ಹೊರೈಜನ್ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರಲಿದೆ. ಹಾಗೆಯೇ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯವೂ ಅಸ್ತಿತ್ವಕ್ಕೆ ಬರಲಿದೆ. ಈ ಸಂಬಂಧ ಮಂಡಿಸಿರುವ ವಿಧೇಯಕ ತಾಂತ್ರಿಕ ಸಮಸ್ಯೆಯಿಂದ ಅಂಗೀಕರವಾಗಿರಲಿಲ್ಲ.
– ರಾಜು ಖಾರ್ವಿ ಕೊಡೇರಿ