Advertisement

26/11: ದೃಢೀಕರಣ ಬೇಕಿಲ್ಲ: ಜ. ರಾವತ್‌

08:55 AM Dec 10, 2018 | Karthik A |

ಹೊಸದಿಲ್ಲಿ: 26/11ರ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಭಯೋತ್ಪಾದಕರ ಪಾತ್ರವಿತ್ತು ಎಂಬುದು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೇ ಗೊತ್ತಿದೆ. ಅದನ್ನು ಈಗ ಯಾರೂ ದೃಢಪಡಿಸಬೇಕಾದ ಅಗತ್ಯವಿಲ್ಲ ಎಂದು ಭೂಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಹೇಳಿದ್ದಾರೆ. ‘ಮುಂಬೈ ದಾಳಿಯು ಭಯೋತ್ಪಾದಕರ ಕೃತ್ಯವಾಗಿದ್ದು, ಪಾಕಿಸ್ಥಾನದ ಹಿತಾಸಕ್ತಿಯಿಂದ ಈ ಕೇಸನ್ನು ಇತ್ಯರ್ಥಪಡಿಸುವುದು ನನ್ನ ಧ್ಯೇಯವಾಗಿದೆ’ ಎಂಬ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಗೆ ಪ್ರತಿಯಾಗಿ ಜ. ರಾವತ್‌ ಈ ರೀತಿ ಹೇಳಿದ್ದಾರೆ.

Advertisement

ಭಾನುವಾರ ಈ ಕುರಿತು ಪ್ರತಿಕ್ರಿಯಿಸಿದ ಜ.ರಾವತ್‌, ದಾಳಿ ನಡೆಸಿದ್ದು ಯಾರೆಂದು ಇಡೀ ವಿಶ್ವಕ್ಕೇ ಗೊತ್ತಿದೆ. ಅವರಿಗಿಂತಲೂ ಮೊದಲು, ಅದು ನಮಗೆ ಗೊತ್ತಿತ್ತು. ಈ ವಿಚಾರದಲ್ಲಿ ಯಾರ ಹೇಳಿಕೆಯೂ ನಮಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಜತೆಗೆ, 26/11ರ ದಾಳಿಯನ್ನು ಪಾಕಿಸ್ಥಾನ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದೂ ತಿಳಿಸಿದ್ದಾರೆ. ಇತ್ತೀಚೆಗೆ ವಾಷಿಂಗ್ಟನ್‌ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್‌ ಖಾನ್‌ ಅವರು, 26/11ರ ದಾಳಿಗೆ ಲಷ್ಕರ್‌ ಉಗ್ರರೇ ಕಾರಣ. ಈ ಪ್ರಕರಣದ ಸ್ಥಿತಿಗತಿ ಅರಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದೊಂದು ಭಯೋತ್ಪಾದಕ ಕೃತ್ಯವಾಗಿರುವ ಕಾರಣ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವುದು ನಮ್ಮ ಉದ್ದೇಶ ಎಂದು ಹೇಳಿದ್ದರು. ಈ ಮೂಲಕ ಮುಂಬಯಿ ದಾಳಿ ನಡೆಸಿದ್ದು ಪಾಕಿಸ್ಥಾನದ ಉಗ್ರ ಸಂಘಟನೆಗಳು ಎಂಬುದನ್ನು ಅವರು ಒಪ್ಪಿಕೊಂಡಿದ್ದರು.

ಮತ್ತೂಂದು ದಾಳಿಗೆ ಹಿಂಜರಿಯಲ್ಲ: ಏತನ್ಮಧ್ಯೆ, ಡೆಹ್ರಾಡೂನ್‌ನಲ್ಲಿ ರವಿವಾರ ಮಾತನಾಡಿದ ವೈಸ್‌ ಚೀಫ್ ಆಫ್ ಆರ್ಮಿ ಸ್ಟಾಫ್ ಲೆ.ಜ. ದೇವರಾಜ್‌ ಅನ್ಬು, ನಮ್ಮ ಸೇನೆಯು ಅಗತ್ಯಬಿದ್ದರೆ ಇನ್ನೊಂದು ಸರ್ಜಿಕಲ್‌ ದಾಳಿ ನಡೆಸಲೂ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next