ಬೆಳ್ತಂಗಡಿ: ಗ್ರಾಮ ಚಾವಡಿಗೆಂದು ಮೀಸಲಿರಿಸಿದ್ದ ಸ್ಥಳದಲ್ಲಿ ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ 94ಸಿಯಡಿ ಜಾಗ ಮಂಜೂರುಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾ.ಪಂ.ನಲ್ಲಿ ನಡೆದಿದೆ.
ಕಡಿರುದ್ಯಾವರ ಗ್ರಾಮದ ಗ್ರಾಮಚಾವಡಿಗೆಂದು ಈ ಹಿಂದೆಯೇ ಸರ್ವೇ ನಂಬರ್ 101/1ರಲ್ಲಿ 1.37 ಎಕರೆ ಜಮೀನನ್ನು ಮೀಸಲಿರಿಸಲಾಗಿತ್ತು. ಕಳೆದ ವರ್ಷ ಇದೇ ಸ್ಥಳದಲ್ಲಿ ನೂತನ ಗ್ರಾ.ಪಂ. ಕಟ್ಟಡ ಶಿಲಾನ್ಯಾಸಗೊಂಡು ನಿರ್ಮಾಣ ಹಂತದಲ್ಲಿದೆ. ಇತ್ತೀಚೆಗೆ ಎನ್.ಆರ್.ಜಿ.ಯಡಿ ಸೋಕ್ ಪಿಟ್ ನಿರ್ಮಾಣಕ್ಕೆಂದು ಗ್ರಾ.ಪಂ. ವತಿಯಿಂದ ಆರ್.ಟಿ.ಸಿ. (ಪಹಣಿ) ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಂದಾಯ ಇಲಾಖೆಯ ಬೇಜವಾಬ್ದಾರಿ
ಸರ್ವೇ ನಂಬರ್ 101/1 ರಲ್ಲಿದ್ದ 1.37 ಎಕರೆ ಜಾಗದಲ್ಲಿ ಗ್ರಾ.ಪಂ.ಗೆ ಒಳಪಟ್ಟ ಕಾನರ್ಪ ಸಮೀಪದ ಸೀತು ಕೋಂ ದಿ| ಮಂಜಪ್ಪ ಗೌಡ ಅವರ ಹೆಸರಿಗೆ ಕಂದಾಯ ಇಲಾಖೆಯು 0.4ಸೆಂಟ್ಸ್ ಜಾಗವನ್ನು 94ಸಿ 25-11-2015ರ ನಿಯಮದಂತೆ 2018-19ರಲ್ಲಿ ಮಂಜೂರು ಮಾಡಿದೆ. ಇವರ ಹೆಸರು ಪಹಣಿಯಲ್ಲೂ ಉಲ್ಲೇಖವಾಗಿದೆ. ಆದರೆ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. 94ಸಿಯಡಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಸೀತು ಅವರು ಪ್ರಸಕ್ತ ಕಡಿರುದ್ಯಾವರ ಗ್ರಾಮದ ಕಲ್ಲಗುಡ್ಡೆಯಲ್ಲಿ ಐದು ಸೆಂಟ್ಸ್ನಲ್ಲಿ ವಾಸವಾಗಿದ್ದಾರೆ. ವಾಸವಿರುವ ಸ್ಥಳಕ್ಕೂ ಗ್ರಾ.ಪಂ. ಕಟ್ಟಡಕ್ಕೂ ಸುಮಾರು ನಾಲ್ಕು ಕಿ.ಮೀ. ಅಂತರವಿದೆ. ಪಂಚಾಯತ್ ಸ್ಥಳ ದಲ್ಲಿ 94ಸಿಯಡಿ ಸ್ಥಳ ಮಂಜೂರು ಆಗಿರು ವುದು ಇಲಾಖೆ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ.
Related Articles
ಸರ್ವೇ ನಂಬರ್ ಅದಲು ಬದಲು
94ಸಿ ಹಾಗೂ 94ಸಿಸಿಯಡಿ ಸಾಕಷ್ಟು ಅಕ್ರಮ ನಡೆದಿರುವುದು ಈ ಹಿಂದೆಯೇ ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿವೆ. ನಿಯಮಾನುಸಾರ ಸರಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ವಾಸವಿರುವವರು ಅರ್ಜಿ ಸಲ್ಲಿಸಿದಲ್ಲಿ ಕಂದಾಯ ಇಲಾಖೆಯು 94 ಸಿಸಿ ಅಥವಾ 94ಸಿ ಹಕ್ಕುಪತ್ರ ನೀಡ ಬೇಕು. ಆದರೆ ಯಾವುದೇ ಮನೆ ನಿರ್ಮಾಣವಾಗದೆ ಇದ್ದರೂ ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ಹಕ್ಕುಪತ್ರ ನೀಡಿರುವ ಆರೋಪಗಳಿವೆ. ಇದಕ್ಕೆ ಸಾಕೀÒಕರಿಸುವಂತೆ ಈ ಘಟನೆ ನಡೆದಿದೆ. ಅರ್ಜಿದಾರೆ ಸೀತು ಅವರು ತಾವು ವಾಸವಿರುವ ಕಲ್ಲಗುಡ್ಡೆ ಸರ್ವೇ ನಂಬರ್ 201ರಲ್ಲಿ 94ಸಿಯಡಿ 5 ಸೆಂಟ್ಸ್ ನೀಡುವಂತೆ ಕೋರಿದ್ದರು. ಆದರೆ ಕಂದಾಯ ಇಲಾಖೆ ಕಡಿರುದ್ಯಾವರ ಗ್ರಾಮ ಚಾವಡಿಗೆಂದು ಮೀಸಲಿರಿಸಿದ್ದ ಸರ್ವೇ ನಂಬರ್ 101/1 ನಮೂದಿಸಿ ಈ ಎಡವಟ್ಟು ಮಾಡಿರುವುದು ಸ್ಪಷ್ಟವಾಗಿದೆ. ಅರ್ಜಿದಾರೆ ಸೀತು ಅವರ ಅರ್ಜಿಯನ್ನು ಪರಿಶೀಲಿಸಿದಾಗ ಇದು ಸ್ಪಷ್ಟವಾಗಿ ಕಂಡುಬಂದಿದೆ.
ತಹಶೀಲ್ದಾರ್ಗೆ ಪತ್ರ
ಕಡಿರುದ್ಯಾವರ ಗ್ರಾ.ಪಂ.ನಲ್ಲಿ ಗ್ರಾಮ ಚಾವಡಿಗೆ ಈಗಾಗಲೇ 101/1ರಲ್ಲಿದ್ದ 1.37 ಎಕರೆ ಸ್ಥಳವು ನಿಗದಿಯಾಗಿದ್ದು, ಸೀತು ಅವರಿಗೆ 0.4 ಸೆಂಟ್ಸ್ ಸ್ಥಳವನ್ನು 94ಸಿ ಅಡಿಯಲ್ಲಿ ಹಕ್ಕು ಪತ್ರ ಮಂಜೂರು ಮಾಡಿಸಿದ್ದನ್ನು ರದ್ದುಪಡಿಸಿ 1.37 ಎಕರೆ ಯನ್ನು ಗ್ರಾಮ ಚಾವಡಿಗೆ ನೀಡಬೇಕು ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೂಲಕ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ.
ತಹಶೀಲ್ದಾರ್ಗೆ ಪತ್ರ: ಗ್ರಾ.ಪಂ.ಗೆ ಸೇರಿದ ಸ್ಥಳದಲ್ಲಿ ವಾಸವಿರದ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಇದು ಪಹಣಿಯಲ್ಲಿ ನಮೂದಾಗಿದೆ. ಇದು ಈ ಹಿಂದಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿರುವುದು ಸ್ಪಷ್ಟವಾಗಿದೆ. ತತ್ಕ್ಷಣ ಹಕ್ಕುಪತ್ರ ರದ್ದುಪಡಿಸಿ ಗ್ರಾ.ಪಂ.ಗೆ ಸಂಬಂಧಿಸಿದ ಸ್ಥಳವನ್ನು ಕಾಯ್ದಿರಿಸುವಂತೆ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ. – ಅಶೋಕ್ ಕುಮಾರ್, ಅಧ್ಯಕ್ಷರು, ಕಡಿರುದ್ಯಾವರ ಗ್ರಾ.ಪಂ.
ಕಡಿರುದ್ಯಾವರ ಗ್ರಾ.ಪಂ.ಗೆ ಒಳಪಟ್ಟ ಸ್ಥಳದಲ್ಲಿ ಹಕ್ಕುಪತ್ರ ಮಂಜೂರು ಆಗಿರುವುದು ಗಮನಕ್ಕೆ ಬಂದಿದೆ. ತತ್ಕ್ಷಣ ಕ್ರಮ ಕೈಗೊಂಡು ಫಲಾನುಭವಿಗಳಿಗೆ ಹಾಗೂ ಗ್ರಾ.ಪಂ.ಗೆ ತೊಂದರೆ ಯಾಗದಂತೆ ಕ್ರಮ ವಹಿಸ ಲಾಗು ವುದು. – ಪೃಥ್ವಿ ಸಾನಿಕಮ್, ತಹಶೀಲ್ದಾರ್, ಬೆಳ್ತಂಗಡಿ
ಚೈತ್ರೇಶ್ ಇಳಂತಿಲ