Advertisement

ಪಠ್ಯ ಪುಸ್ತಕಗಳಲ್ಲಿ ಕಂಬಳದ ಮಾಹಿತಿ ದಾಖಲಿಸಿ

12:43 AM Jan 19, 2020 | Team Udayavani |

ಪುತ್ತೂರು: ಕಂಬಳದ ಕುರಿತು ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಲ್ಲಿ ಸಮಗ್ರ ಮಾಹಿತಿ ದಾಖಲಿಸಬೇಕು. ತುಳುನಾಡಿನ ಜಾನಪದ ಕಲೆಯಾದ ಕಂಬಳಕ್ಕೆ ಯಾವುದೇ ಅಡ್ಡಿ ಉಂಟು ಮಾಡದೆ, ಕೃಷಿಕರ ಕ್ರೀಡೆಯಾದ ಕಂಬಳವನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹೇಳಿದರು. ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ದೇವಮಾರು ಗದ್ದೆಯಲ್ಲಿ ಶನಿವಾರ ಆರಂಭವಾದ 27ನೇ ವರ್ಷದ ಕೋಟಿ – ಚೆನ್ನಯ ಜೋಡುಕರೆ ಕಂಬಳ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಅಧ್ಯಯನ ಪೀಠದ ಅಗತ್ಯ
ಸಮಾರಂಭ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ ಮಾತನಾಡಿ, ತುಳುನಾಡಿನ ಪುರಾತನ ಕ್ರೀಡೆ ಕಂಬಳದ ಕುರಿತಂತೆ ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಪೀಠವನ್ನು ಆರಂಭಿಸುವ ಅಗತ್ಯವಿದೆ. ಕೃಷಿ ಪರಂಪರೆಯ ಸಂಕೇತವಾಗಿರುವ ಕಂಬಳ ಸರಕಾರದ, ದಾನಿಗಳ ನೆರವಿನಿಂದ ನಡೆಯುತ್ತಿದೆ. ಈ ಕುರಿತು ಗಂಭೀರ ಅಧ್ಯಯನ ನಡೆಸುವ ಮೂಲಕ ಕಂಬಳಕ್ಕೂ ವಿಶೇಷ ಸ್ಥಾನಮಾನ ದೊರಕುವಂತಾಗಬೇಕು ಎಂದರು.

ಮುಖ್ಯ ಅತಿಥಿ, ವಂ| ವಿಜಯ ಹಾರ್ವಿನ್‌, ಕಂಬಳ ಕ್ರೀಡೆ ಪ್ರಾಣಿ ಹಿಂಸೆ ಅಲ್ಲ. ಅದು ಈ ನಾಡಿನ, ಮಣ್ಣಿನ ಕಲೆ. ಕಂಬಳದ ಕೋಣಗಳ ಯಜಮಾನರು ಕೋಣಗಳನ್ನು ಮಕ್ಕಳಂತೆ ಸಾಕಿ ಸಲಹುತ್ತಾರೆ ಎಂದರು.

ಜೈನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಿರ್ಮಲ್‌ ಕುಮಾರ್‌ ಜೈನ್‌, ರವೀಂದ್ರ ಶೆಟ್ಟಿ ನುಳಿಯಾಲು, ಎಲ್‌.ಟಿ. ಅಬ್ದುಲ್‌ ರಝಾಕ್‌, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಲೋಕೇಶ್‌ ಸಿ., ತಿಮ್ಮಪ್ಪ ಗೌಡ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಧರ್ಮಪಾಲ ಗೌಡ ಕರಂದ್ಲಾಜೆ, ಸಂಜೀವ ಪೂಜಾರಿ ಕೂರೇಲು, ಕೆ. ಕರುಣಾಕರ ಸುವರ್ಣ, ಕೇಶವ ಬೆದ್ರಾಳ, ಅಜಿತ್‌ ಕುಮಾರ್‌ ಜೈನ್‌, ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ಕಂಬಳ ಕೂಟದ ಸಂಚಾಲಕ ಎನ್‌. ಸುಧಾಕರ ಶೆಟ್ಟಿ ಪ್ರಸ್ತಾವನೆಗೈದರು. ಕಂಬಳ ಕೂಟದ ಅಧ್ಯಕ್ಷ ಎನ್‌. ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಜೆ.ಕೆ. ವಸಂತ ಕುಮಾರ್‌ ರೈ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next