Advertisement

ಬದುಕು ಬದಲಾಗಿದೆ ನಾವೂ ಬದಲಾಗೋಣ; ಇಎನ್‌ಟಿ ಚಿಕಿತ್ಸೆ: ಏನೇನು ಮುನ್ನೆಚ್ಚರಿಕೆ ವಹಿಸಬೇಕು?

11:31 PM Jun 07, 2020 | Sriram |

ಬೇಸಗೆ ಕಳೆದು ಮಳೆಗಾಲ ಆರಂಭಗೊಂಡಿದೆ. ಜತೆಗೆ ಜ್ವರ, ಗಂಟಲು ನೋವು, ಕಿವಿ ನೋವಿನಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕೆಲ್ಲ ಸ್ವಯಂ ಮದ್ದು ಸಲ್ಲದು. ಈಗ ಹೆಚ್ಚಿನ ಕಡೆ ಇಎನ್‌ಟಿ ಚಿಕಿತ್ಸಾ ಕೇಂದ್ರಗಳು ತೆರೆದುಕೊಂಡಿವೆ. ಆದರೆ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾವು ನಮ್ಮ ಎಚ್ಚರಿಕೆಯಿಂದ ಇರಬೇಕಾದುದು ಅನಿವಾರ್ಯ. ಕಿವಿ, ಮೂಗು ಗಂಟಲು ಸಮಸ್ಯೆಗಳ ಚಿಕಿತ್ಸೆಗಾಗಿ ಇಎನ್‌ಟಿ ಕ್ಲಿನಿಕ್‌ ಅಥವಾ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ಬಂದರೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅತೀ ಅಗತ್ಯ. ವೈದ್ಯರ ಸೂಚನೆಯಂತೆ ತುರ್ತಾಗಿರುವ ಚಿಕಿತ್ಸೆಗಳತ್ತ ಮಾತ್ರ ಗಮನ ನೀಡಿ. ಹಾಗಾದರೆ ಇಎನ್‌ಟಿ ಚಿಕಿತ್ಸಾ ಕೇಂದ್ರಗಳಿಗೆ ಹೋಗುವಾಗ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು? ಯಾರೆಲ್ಲ ಹೋಗಬಹುದು? ಯಾರು ಹೋಗಬಾರದು? ಎಂಬ ಬಗ್ಗೆ ಕೆಲವೊಂದು ಆವಶ್ಯಕ ಮಾಹಿತಿ ಇಲ್ಲಿದೆ.

Advertisement

ಬೇಸಗೆಯಿಂದ ಮಳೆಗಾಲಕ್ಕೆ ಕಾಲಿಡುತ್ತಿರುವ ಈ ದಿನಗಳಲ್ಲಿ ಸಾಮಾನ್ಯವಾಗಿ ಮಕ್ಕಳಿಂದ ಹಿರಿಯರವರೆಗೆ ಕೆಲವೊಮ್ಮೆ ಕಿವಿ, ಮೂಗು ಅಥವಾ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಆ ಬಗ್ಗೆ ಚಿಕಿತ್ಸೆ ಪಡೆಯುವಾಗ ಯಾವೆಲ್ಲ ರೀತಿಯ ಎಚ್ಚರಿಕೆ ವಹಿಸಬೇಕೆಂಬ ಮಾಹಿತಿ ಇಲ್ಲಿದೆ.

-ಇಎನ್‌ಟಿ ವೈದ್ಯರನ್ನು ಭೇಟಿಯಾಗುವ ಮೊದಲೇ ಅಪಾಯಿಂಟ್‌ಮೆಂಟ್‌ ಪಡೆದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಫೋನ್‌ ಕರೆ ಮಾಡಿ ಸಮಯ ನಿಗದಿ ಪಡಿಸುವ ವೇಳೆ ಕ್ಲಿನಿಕ್‌ ಸಿಬಂದಿ ರೋಗಿಯ ಪ್ರಯಾಣ ಮಾಹಿತಿ ಸಂಗ್ರಹಿಸುತ್ತಾರೆ. ಅವರಿಗೆ ಸರಿಯಾದ ಮಾಹಿತಿ ನೀಡುವುದು ಅಗತ್ಯ.

-ಕಿವಿ, ಮೂಗು, ಗಂಟಲು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವೇಳೆ ಡಾಕ್ಟರ್‌ಗಳು ಮತ್ತು ಆಸ್ಪತ್ರೆ ಸಿಬಂದಿ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರೊಂದಿಗೆ ರೋಗಿಗಳಿಗೂ ಅದನ್ನು ಪಾಲಿಸಲು ತಿಳಿಸುತ್ತಾರೆ. ಅದನ್ನು ಪಾಲಿಸುವುದು ಅಗತ್ಯ. ಕ್ಲಿನಿಕ್‌ನಲ್ಲಿನ ನಿಯಮಾವಳಿಗಳನ್ನು ತಪ್ಪದೆ ಪಾಲಿಸಿ.

-ಚಿಕ್ಕಮಕ್ಕಳು, ವೃದ್ಧರನ್ನು ಹೊರತುಪಡಿಸಿ ರೋಗಿ ಒಬ್ಬರನ್ನೇ ಏಕಕಾಲದಲ್ಲಿ ಕ್ಲಿನಿಕ್‌ ಒಳಗೆ ಬಿಡಲಾಗುವುದು. ಆದಷ್ಟು ಕನಿಷ್ಠ ಮಂದಿ ಮಾತ್ರ ಕ್ಲಿನಿಕ್‌ಗೆ ತೆರಳಿ. ಅಲ್ಲದೆ ಕ್ಲಿನಿಕ್‌ಗೆ ಹೋಗಿರುವ ವೇಳೆ ಅಲ್ಲಿರುವ ಪೀಠೊಪಕರಣ, ಬಾಗಿಲು, ಗೋಡೆ ಇತ್ಯಾದಿಗಳನ್ನು ಸ್ಪರ್ಶಿಸಬಾರದು.

Advertisement

-ಸಣ್ಣಪುಟ್ಟ ಸಮಸ್ಯೆಗಳಾದರೆ ಫೋನ್‌ ಅಥವಾ ಇಮೇಲ್‌ ಅಥವಾ ವಾಟ್ಸಪ್‌ ಮೂಲಕವೇ ಔಷಧ ಸೂಚಿಸುತ್ತಾರೆ. ಅಗತ್ಯವೆನಿಸಿದರೆ ಮಾತ್ರ ಕ್ಲಿನಿಕ್‌ಗೆ ಕರೆಯುತ್ತಾರೆ. ಕ್ಲಿನಿಕ್‌ಗಳಲ್ಲಿ ನಗದು ಪೇಮೆಂಟ್‌ ಮಾಡುವುದಕ್ಕಿಂತ ಡಿಜಿಟಲ್‌ ಪಾವತಿಗೆ ಆದ್ಯತೆ ನೀಡಿ. ಪರಸ್ಪರ ಸ್ಪರ್ಶ ಕಡಿಮೆಯಾಗುತ್ತದೆ.

-ಒಂದು ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ, ಅಂತಾರಾಜ್ಯ ಪ್ರಯಾಣ ಮಾಡಿದವರು, ಜ್ವರ, ಒಣಕೆಮ್ಮು, ಉಸಿರಾಟದ ಸಮಸ್ಯೆ ಇತ್ಯಾದಿಗಳಿದ್ದವರು ಕ್ಲಿನಿಕ್‌ ಅಥವಾ ಆಸ್ಪತ್ರೆಗೆ ಬರುವುದನ್ನು ನಿಷೇಧಿಸಲಾಗಿದೆ. ಅಂಥವರು ಕೊರೊನಾ ಚಿಕಿತ್ಸೆಗೆ ನಿಗದಿಪಡಿಸಿದ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗುವುದು ಸೂಕ್ತ.

-ಕ್ಲಿನಿಕ್‌ಗೆ ತೆರಳುವಾಗ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕ್ಲಿನಿಕ್‌ ಒಳಪ್ರವೇಶಿಸುವಾಗ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಬೇಕು. ಟೆಂಪರೇಚರ್‌ ಸ್ಕ್ರೀನಿಂಗ್‌ ಎಲ್ಲ ಕಡೆ ಇರುತ್ತದೆ. ಮನೆಗೆ ಬಂದ ಬಳಿಕವೂ ಸೋಪ್‌ ಬಳಸಿ ಕೈ ತೊಳೆದು ಬಳಿಕ ಬಟ್ಟೆ ವಾಶ್‌ ಮಾಡಿ ಸ್ನಾನ ಮಾಡುವುದು ಒಳಿತು.

ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ.
9148594259

Advertisement

Udayavani is now on Telegram. Click here to join our channel and stay updated with the latest news.

Next