ಧಾರವಾಡ: ಜಿಲ್ಲೆಯ ಗೋಕುಲ, ತಾರಿಹಾಳ, ರಾಯಾಪುರ, ಗಾಮನಗಟ್ಟಿ, ಬೇಲೂರು ಮತ್ತು ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿ ಇರುವ ಎಲ್ಲಾ ಉದ್ಯಮ ಘಟಕಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಸಭೆಯಲ್ಲಿ ಅವರು ಮಾತನಾಡಿದರು. ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪದ ಪಾಲಿಮರ್ ಘಟಕದಲ್ಲಿ ಸ್ಪೈರಿನ್ ವಿಷಾನಿಲ ಸೋರಿಕೆಯಿಂದಾಗಿ ಸಂಭವಿಸಿದ ಅವಘಡದಿಂದ ಎದುರಾಗಿರುವ ಅಪಾಯ ಗಮನದಲ್ಲಿಟ್ಟುಕೊಂಡು ಜಿಲ್ಲೆಯ ವಿವಿಧ ಕೈಗಾರಿಕಾಭಿವೃದ್ಧಿ ಪ್ರದೇಶಗಳಲ್ಲಿರುವ ಪ್ರಮುಖ ಅಪಾಯಕಾರಿ ಉದ್ಯಮ ಘಟಕಗಳಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕು. ಈ ವಿಷಯದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರವಹಿಸಬೇಕು. ತ್ತೈಮಾಸಿಕವಾಗಿ ನಡೆಸಬೇಕಾದ ಆಪತ್ತು ನಿರ್ವಹಣೆಯ ಅಣುಕು ಪ್ರದರ್ಶನಗಳನ್ನು ಸಮರ್ಪಕವಾಗಿ ಆಯೋಜಿಸಿ ಎಲ್ಲಾ ಸುರಕ್ಷತಾ ಕ್ರಮಗಳ ಅರಿವು ನಿರಂತರ ಮೂಡಿಸುತ್ತಿರಬೇಕು. ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಸದಾಕಾಲ ಜಾಗೃತವಾಗಿರಬೇಕು ಎಂದು ಸೂಚಿಸಿದರು.
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿ ಮಗದುಮ್ ಮಾತನಾಡಿ, ಜಿಲ್ಲೆಯ ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ 8 ಪ್ರಮುಖ ಅಪಾಯಕಾರಿ ಘಟಕಗಳಿವೆ. ಉಳಿದಂತೆ ಧಾರವಾಡ-42, ಹುಬ್ಬಳ್ಳಿ-05 ಹಾಗೂ ಕಲಘಟಗಿ-01 ಅಪಾಯಕಾರಿ ಘಟಕಗಳಿವೆ. ಸಾರ್ವಜನಿಕ ವಲಯದ ಎಚ್‌ಪಿಸಿಎಲ್, ಬಿಪಿಸಿಎಲ್ ಸೇರಿದಂತೆ ಖಾಸಗಿ ವಲಯದ ಮಹಾ ಎಲ್‌ಪಿಜಿ ಮತ್ತಿತರ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕ್ರೆಸ್ಟ್ ಸ್ಪೆಷಾಲಿಟಿ ರೆಸಿನ್ಸ್ ಪ್ರೈವೇಟ್ (ಲಿ) ಘಟಕವು ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಮಾದರಿಯ ಉತ್ಪಾದನೆಗಳ ಸಣ್ಣ ಘಟಕವಾಗಿದೆ. ಅಲ್ಲಿ 27 ಜನ ಖಾಯಂ ಉದ್ಯೋಗಿಗಳು ಸೇರಿ ಒಟ್ಟು 69 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳ ಪಾಲನೆಯ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.
ಕ್ರೆಸ್ಟ್ ಸ್ಪೆಷಾಲಿಟಿ ರೆಸಿನ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿ ಗಳು ಮಾತನಾಡಿ, ತಮ್ಮ ಘಟಕವು 18.72 ಟನ್ ಕ್ಸೈಲಿನ್ ಹಾಗೂ 1 ಟನ್ ಸ್ಪೈರಿನ್ ರಸಾಯನಿಕಗಳ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಕಾರ್ಮಿಕರು ಕಡ್ಡಾಯವಾಗಿ ವೈಯಕ್ತಿಕ ಸುರಕ್ಷತಾ ಉಪಕರಣಗಳಾದ ಮಾಸ್ಕ್, ಸೇಫ್ಟಿ ಗಾಗಲ್, ಕೈಗವಸು, ಬೂಟುಗಳನ್ನು ಬಳಸುತ್ತಾರೆ ಎಂದು ಮಾಹಿತಿ ನೀಡಿದರು.
ಎಸ್‌ಪಿ ವರ್ತಿಕ ಕಟಿಯಾರ್, ಮಹಾನಗರ ಡಿಸಿಪಿ ಕೃಷ್ಣಕಾಂತ್, ಡಾ| ಬಿ.ಸಿ. ಸತೀಶ, ಡಾ| ಸುರೇಶ ಇಟ್ನಾಳ, ಶಿವಾನಂದ ಕರಾಳೆ, ಮಹಮದ್ ಜುಬೇರ್, ಮೋಹನ ಭರಮಕ್ಕನವರ, ಶೋಭಾ ಪೋಳ, ಮಂಜುನಾಥ ಡೊಳ್ಳಿನ, ಈಶ್ವರನಾಯಕ್, ಶ್ರೀಕಾಂತ್, ಸಂಯೋಜಕ ಪ್ರಕಾಶ ಇದ್ದರು.