ಶ್ರೀನಗರ: ಕೇಂದ್ರ ಸರಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಶ್ಮೀರ ಕಣಿವೆಯಲ್ಲಿ ಅನಿರ್ಧಾಷ್ಟಾವಧಿ ಕರ್ಫ್ಯೂ ವಿಧಿಸಿತ್ತು ಮತ್ತು ಈ ಸಂಬಂಧ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಇದೀಗ ಸರಿಸುಮಾರು ಎರಡು ತಿಂಗಳುಗಳ ಬಳಿಕ ಕಾಶ್ಮೀರದ ಎಲ್ಲಾ ಭಾಗಗಳಲ್ಲಿ ಗುರುವಾದಂದು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿವೆ.
ಇದಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಆಡಳಿತವು ರಾಜ್ಯದಲ್ಲಿನ ಅಧಿಕಾರಿಗಳಿಗೆ ಸೂಚನೆಯೊಂದನ್ನು ನೀಡಿದೆ.
ಕಾಶ್ಮೀರದ ವಿಭಾಗೀಯ ಕಮಿಷನರ್ ಅವರು ಸೋಮಮಾರದಂದು ಈ ಕುರಿತಾಗಿ ಕಣಿವೆ ರಾಜ್ಯದ ಎಲ್ಲಾ ಉಪ ಕಮಿಷನರ್ ಗಳಿಗೆ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರುಗಳಿಗೆ ನಿರ್ದೇಶನ ಒಂದನ್ನು ನೀಡಿದ್ದು ಆ ಪ್ರಕಾರ ಶಾಲೆಗಳು ಮುಚ್ಚಿದ್ದ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಳುಗಳಲ್ಲಿನ ಪಠ್ಯ ಶುಲ್ಕ ಹಾಗೂ ಶಾಲಾ ವಾಹನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಮತ್ತು ಗುರುವಾರದಂದು ಹೈಯರ್ ಸೆಕಂಡರಿವರೆಗಿನ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳನ್ನು ಪುನರಾರಂಭಿಸುವಂತೆ ಈ ಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು ಕಾಶ್ಮೀರದ ಕಾಲೇಜುಗಳು ಅಕ್ಟೋಬರ್ 09ರಂದು ಪುನರಾರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ.