Advertisement

ಸಾಕಷ್ಟಿದೆ ಯೂರಿಯಾ, ಆತಂಕ ಪಡದಿರಿ

10:21 AM Aug 02, 2019 | Suhan S |

ಹಾವೇರಿ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಸಾಕಷ್ಟಿದ್ದು, ಕೊರತೆ ಕಂಡು ಬಂದಿಲ್ಲ. ಬೇರೆ ಜಿಲ್ಲೆಗಳಿಂದಲೂ 6063 ಟನ್‌ ಯೂರಿಯಾ ತರಿಸಿಕೊಳ್ಳಲಾಗುತ್ತಿದ್ದು ರೈತರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ ತಿಳಿಸಿದ್ದಾರೆ.

Advertisement

ಯೂರಿಯಾ ಗೊಬ್ಬರ ಅಭಾವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಬೆಳೆಗಳಿಗೆ ಯೂರಿಯಾ ಮೇಲು ಗೊಬ್ಬರವಾಗಿ ಕೊಡುವ ಕಾರ್ಯ ಆರಂಭವಾಗಿದೆ. ಜಿಲ್ಲೆಗೆ ಮುಂಗಾರು ಹಂಗಾಮಿಗೆ 44,580 ಟನ್‌ ಯೂರಿಯಾ ರಸಗೊಬ್ಬರ ಅವಶ್ಯಕತೆಯಿದೆ. ಜುಲೈ ಅಂತ್ಯದವರೆಗೆ ಈ ಬಾರಿ ಜಿಲ್ಲೆಯಲ್ಲಿ 29,948 ಟನ್‌ ಯೂರಿಯಾ ಸರಬರಾಜಾಗಿದ್ದು ಈವರೆಗೆ 25,366 ಟನ್‌ ವಿತರಿಸಲಾಗಿದೆ. 4582 ಟನ್‌(ಖಾಸಗಿ ಮಾರಾಟಗಾರರಲ್ಲಿ 1832 ಟನ್‌ ಮತ್ತು ಸಹಕಾರಿ ಸಂಘಗಳಲ್ಲಿ 1440 ಟನ್‌) ಖಾಸಗಿ ದಾಸ್ತಾನು ಇದ್ದು, ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಮಾರಾಟ ಮಹಾಮಂಡಲದಲ್ಲಿ 1033.45 ಮೆ.ಟನ್‌ ರಸಗೊಬ್ಬರ ಲಭ್ಯವಿದ್ದು ಅವಶ್ಯವಿರುವ ಸಹಕಾರ ಸಂಘಗಳಿಗೆ ಬೇಡಿಕೆಗನುಸಾರವಾಗಿ ಪೂರೈಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಿಂದ 500 ಟನ್‌, ಯಾದಗಿರಿ ಜಿಲ್ಲೆಯಿಂದ 1030 ಟನ್‌ ಒಟ್ಟು 1530 ಟನ್‌ ರಸಗೊಬ್ಬರ, ರಾಷ್ಟ್ರೀಯ ಕೆಮಿಕಲ್ ಫರ್ಟಿಲೈಸರ್‌ ಸಂಸ್ಥೆಯಿಂದ 2000 ಟನ್‌ ರಸಗೊಬ್ಬರ ಇಂದು ಪೂರೈಕೆಯಾಗಲಿದೆ. ಇಫ್ಕೋ ಸಂಸ್ಥೆಯಿಂದಲೂ ಆ. 3ರಂದು 1500 ಟನ್‌ ರಸಗೊಬ್ಬರ ಪೂರೈಕೆಯಾಗಲಿದೆ. ಈ ರಸಗೊಬ್ಬರವನ್ನು ಜಿಲ್ಲೆಯಲ್ಲಿ ಅವಶ್ಯವಿರುವ ವಿವಿಧ ಸಹಕಾರ ಸಂಘಗಳು, ಖಾಸಗಿ ಮಾರಾ ಟಗಾರರಿಗೆ ಪೂರೈಸಲಾಗುವುದು. ಹೀಗೆ ಒಟ್ಟಾರೆ ಜಿಲ್ಲೆಗೆ 6063.45 ಟನ್‌ ರಸಗೊಬ್ಬರ ಪೂರೈಕೆಯಾಗಲಿದ್ದು ಯೂರಿಯಾ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next