ಮುಂಬಯಿ, ಜು. 28: ಪುಸ್ತಕಗಳೇ ನಿಜವಾದ ಸಂಪತ್ತು. ಅವುಗಳನ್ನು ಓದುವುದರಿಂದ ಜ್ಞಾನ ದೊರೆಯುವುದಲ್ಲದೆ ಮನಃಶಾಂತಿ ಲಭಿಸುತ್ತದೆ ಎಂದು ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಇದರ ಸಂಚಾಲಕ ವಿಶ್ವನಾಥ ದೊಡ್ಮನೆ ನುಡಿದರು.
ಡೊಂಬಿವಲಿ ಗೆಳೆಯರ ಸ್ವಾವಲಂಬನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕನ್ನಡ ಪುಸ್ತಕ ಮಳಿಗೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮುಂಬಯಿಯಲ್ಲಿ ಕನ್ನಡ ಪುಸ್ತಕ ಮಳಿಗೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ವೆಂಕಟೇಶ್ ಪೈ ಅವರು ಕೈಗೊಂಡ ಈ ಯೋಜನೆಯನ್ನು ಮೆಚ್ಚಲೇಬೇಕು. ಕನ್ನಡ ಪುಸ್ತಕ ಓದುವ ಹವ್ಯಾಸ ಇರುವವರಾದರೂ ಇದರ ಸದುಪಯೋಗವನ್ನು ಪಡೆದುಕೊಂಡಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ. ತಮ್ಮ ಸಂಗ್ರಹದಲ್ಲಿರುವ ಪುಸ್ತಕಗಳನ್ನು ಕೊಂಡುಹೋಗಿ ಓದುವಂತೆ ಅವರು ಹೇಳುವುದು ಪುಸ್ತಕಗಳ ಮೇಲಿನ ಅವರ ಪ್ರೀತಿಯಿಂದಲೇ. ನಾನು ತಿಳಿದಂತೆ ಕೆಲವಂತೂ ಅಪೂರ್ವ ಪುಸ್ತಕಗಳು ಅವರ ಬಳಿಯಿದ್ದು, ನಾವೆಲ್ಲ ಅದನ್ನು ಓದಬೇಕಾಗಿದೆ. ನಮ್ಮ ಪರಿಚಯದವರೆಲ್ಲರಿಗೂ ಈ ವಿಷಯವನ್ನು ತಿಳಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸೋಣ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ರಮೇಶ್ ಬಿರ್ತಿ ಅವರು, ಇಂದು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಗೊತ್ತಿದ್ದರೂ ಛಲ ಬಿಡದ ವಿಕ್ರಮನಂತೆ ಪ್ರೊ| ವೆಂಕಟೇಶ್ ಪೈ ಅವರು ಕನ್ನಡ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದ ತನಗೆ ಏನು ಲಾಭವಾಗುತ್ತದೆ ಎಂಬ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ. ತನ್ನಂತೆ ಇತರರು ಕನ್ನಡ ಕೃತಿಗಳನ್ನು ಓದಬೇಕು ಎಂಬುದು ಅವರ ಧ್ಯೇಯವಾಗಿದೆ. ತಮ್ಮ ಚಿಕ್ಕ ಕೋಣೆಯನ್ನೇ ಇದಕ್ಕೆ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಪುಸ್ತಕಗಳು ಬೇಕಿದ್ದರೂ ಕೂಡಾ ಅದನ್ನು ಬೆಂಗಳೂರು, ಉಡುಪಿ, ಮಂಗಳೂರಿನ ಪುಸ್ತಕ ಅಂಗಡಿಗಳಿಂದ ಖರೀದಿಸಿ ಓದುಗರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂಬ ಅವರ ಮಾತಿನಲ್ಲಿ ಕನ್ನಡ ಪುಸ್ತಕವನ್ನು ಎಲ್ಲರೂ ಓದಬೇಕು ಎಂಬ ಅವರ ಅದಮ್ಯ ಆಕಾಂಕ್ಷೆ ಎಷ್ಟಿದೆ ಎನ್ನುವುದು ಅರ್ಥವಾಗುತ್ತದೆ. ಅವರ ಈ ಯೋಜನೆಗೆ ಎಲ್ಲರೂ ಬೆಂಬಲ ನೀಡುವ ಅಗತ್ಯವಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ವಿಶ್ವನಾಥ ದೊಡ್ಮನೆ ಇವರನ್ನು ಅತಿಥಿ-ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಗ್ರಂಥ ಗೌರವವನ್ನಿತ್ತು ಅಭಿನಂದಿಸಿದರು. ಯಕ್ಷಗಾನ ವಿಮರ್ಶಕ, ಲೇಖಕ ಕೋಲ್ಯಾರು ರಾಜು ಶೆಟ್ಟಿ ಅವರು ಮಾತನಾಡಿ, ಮುಂಬಯಿ ಫೋರ್ಟ್‌ನ ವಿದ್ಯಾನಿಧಿ ಬುಕ್ ಡಿಪೋದಲ್ಲಿ ನಾವು ಕೆಲವು ಲೇಖಕ, ಮಿತ್ರರು ಒಟ್ಟಾಗುತ್ತಿದ್ದ ಕಾಲ ಒಂದಿತ್ತು. ಆ ಅಂಗಡಿಗೆ ಹೊಸ ಪುಸ್ತಕ ಬಂದಾಗ ಖರೀದಿಸುವುದರ ಜತೆಗೆ ನಮಗೆ ಬೇಕಾದ ಪುಸ್ತಕಗಳನ್ನು ತರಿಸಿಕೊಂಡುವಂತೆ ಹೇಳುತ್ತಿದ್ದೆವು. ಆ ಅಂಗಡಿ ಮುಚ್ಚಲ್ಪಟ್ಟ ಅನಂತರ ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರು ಅಸೋಸಿಯೇಶನ್‌ನಲ್ಲಿ ವ್ಯವಸ್ಥೆ ಮಾಡಿತ್ತಾದರೂ ಅದಕ್ಕೆ ಹೆಚ್ಚಿನ ಪ್ರೋತ್ಸಾಹ ಲಭಿಸಲಿಲ್ಲ. ಪುಸ್ತಕ ಓದುವವರು ಇಂದಿಗೂ ಇದ್ದಾರೆ. ಆದರೆ ಅವರಿಗೆ ಬೇಕಾದ ಪುಸ್ತಕಗಳು ಸಿಗಬೇಕು. ವೆಂಕಟೇಶ್ ಪೈ ಅವರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಎಲ್ಲರ ಸಹಕಾರ ಸದಾಯಿರಲಿ ಎಂದರು.
ಪ್ರವಚನಗಾರ ನಾರಾಯಣ ಬಂಗೇರ ಅವರು ಮಾತನಾಡಿ, ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಾ ಹೆಸರು ಗಳಿಸಿರುವ ಪ್ರೊ| ವೆಂಕಟೇಶ್ ಪೈ ಅವರ ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರದ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಹಂಬಲ ಹೊತ್ತಿದ್ದು, ಭಾಗವತದ ದಶಮ ಸ್ಕಂದ ಮಾತ್ರ ನನ್ನಲ್ಲಿದ್ದು, ಉಳಿದ ಹನ್ನೊಂದು ಸ್ಕಂದಗಳನ್ನು ತರಿಸಿದರೆ ಅದರ ವೆಚ್ಚವನ್ನು ಭರಿಸಲು ನಾನು ಸಿದ್ಧನಿದ್ದೇನೆ ಎಂದರು. ಕನ್ನಡ ಶಿಕ್ಷಕಿ ಕಸ್ತೂರಿ ಐನಪೂರೆ ಮಕ್ಕಳಿಗೆ ಮಾತ್ರ ಕಲಿಸುತ್ತಿದ್ದ ಕನ್ನಡವನ್ನು ವಯಸ್ಕರಿಗೂ ಕಲಿಸುವ ಅವಕಾಶವನ್ನು ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ಮಾಡಿಕೊಟ್ಟಿರುವುದು ಸಂತೋಷದ ವಿಷಯವಾಗಿದೆ ಎಂದು ನುಡಿದರು.
ಕನ್ನಡ ಶಿಕ್ಷಕಿ ಕಸ್ತೂರಿ ಐನಾಪೂರೆ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಪ್ರಬಂಧಕರಾದ ಜ್ಯೋತಿ ಹೆಗ್ಡೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರದ ಕಾರ್ಯ ವೈಖರಿಯನ್ನು ವಿವರಿಸಿದರು. ಪ್ರತಿಭಾ ವೈದ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕೇಂದ್ರದ ಪದಾಧಿಕಾರಿಗಳು, ಸದಸ್ಯೆಯರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.