Advertisement

ಬಿಸಿಲು ನಾಡಿನಲ್ಲಿ ಬಣ್ಣದಾಟ ಸಂಭ್ರಮ

03:42 PM Mar 14, 2017 | Team Udayavani |

ಕಲಬುರಗಿ: ಭಾರತ ದೇಶದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಒಂದಾಗಿರುವ ಹೋಳಿ ಹಬ್ಬವನ್ನು ಸೋಮವಾರ ಜಿಲ್ಲಾದ್ಯಂತ ಜನರು ಬಣ್ಣದಲ್ಲಿ ಮಿಂದೆಳುವ ಮುಖಾಂತರ ಆಚರಿಸಿದರು. ಬೆಳಗ್ಗೆಯಿಂದ ವಿಶೇಷವಾಗಿ ಮಕ್ಕಳು ಹಾಗೂ ಯುವಕರು ಮತ್ತು ಮಹಿಳೆಯರು ವಿವಿಧ ರೂಪದ ಬಣ್ಣಗಳನ್ನು ಪರಸ್ಪರ ಎರಚಿ ಹೋಳಿ ಹಬ್ಬದ ಸಂಭ್ರಮ ಸವಿದರು.

Advertisement

ಯುವಕರಂತೂ ಅಲ್ಲಲ್ಲಿ ವೃತ್ತಗಳಲ್ಲಿ ಎತ್ತರದಲ್ಲಿ ಮಣ್ಣಿನ ಕುಡಿಕೆ(ಗಡಿಗೆ) ಕಟ್ಟಿ ಒಬ್ಬರಿಗೊಬ್ಬರು ಮೇಲೇರಿ ಒಡೆಯುವ ದೃಶ್ಯಗಳು ಕಣ್ಮನ ಸೆಳೆದವು. ಬಿಸಿಲನ್ನು ಲೆಕ್ಕಿಸದೇ ಸಂಭ್ರದಿಂದ ಹೋಳಿ ಹಬ್ಬದಲ್ಲಿ ಆಸಕ್ತಿಯಿಂದ ಪಾಲ್ಗೊಂಡರಲ್ಲದೇ ನಗರದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಹೋಳಿ ಹಬ್ಬದ ಅಂಗವಾಗಿ ವಿವಿಧ ತರಹದ ಬಣ್ಣಗಳನ್ನು ಯುವಕರು ಒಬ್ಬರಿಗೊಬ್ಬರಮೇಲೆ ಎರಚಿದರೆ ಮಕ್ಕಳು ಪಿಚಕಾರಿ ಹಾಗೂ ಬಾಟಲಿಗಳಲ್ಲಿ ಬಣ್ಣ ತುಂಬಿಕೊಂಡು ಎರಚಿದರು.

ಧ್ವನಿವರ್ಧಕಗಳನ್ನು ಹಚ್ಚಿ ಕುಣಿದುಕುಪ್ಪಳಿಸಿದರು. ಪ್ರಮುಖ ರಸ್ತೆಗಳಲ್ಲಿ ಬಣ್ಣವನ್ನು ಮೈಮೇಲೆ ಹಾಕುವುದರಿಂದ ತಪ್ಪಿಸಿಕೊಳ್ಳಲು ಅನೇಕ  ಕಡೆಗಳಲ್ಲಿ ವಾಹನ ಸವಾರರು ಮತ್ತುಪಾದಾಚಾರಿಗಳು ವಿಫಲಯತ್ನ ನಡೆಸಿದರು. ಆದರೂ ಮಕ್ಕಳು ಹಾಗೂ ಯುವಕರು ಓಡೋಡಿ ಬಣ್ಣ ಎರಚಿದರು. 

ಹಲವಾರು ವೃತ್ತಗಳಲ್ಲಿ  ಗುಂಪು, ಗುಂಪಾಗಿ ಸೇರಿದ್ದ ಯುವಕರ ಪಡೆ ಬಣ್ಣಗಳಲ್ಲಿ ಮಿಂದೆದ್ದು, ಕುಣಿದು, ಕುಪ್ಪಳಿಸಿದರು. ದ್ವಿಚಕ್ರವಾಹನಗಳಮೇಲೆ ಅನೇಕ ಯುವಕರು ಸಂಚರಿಸಿ ಬಣ್ಣದಾಟದಲ್ಲಿ  ತೊಡಗಿದರು. ಸವಾರರು ತಾವು ರಂಗು, ರಂಗಾಗಿದ್ದರಲ್ಲದೇ ಅವರ ವಾಹನಗಳೂ ಸಹ ಬಣ್ಣದಲ್ಲಿ ಮುಳುಗೆದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ಪತ್ರಿಕಾ ಭವನದಲ್ಲೂ ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಹೋಳಿ ಹಬ್ಬದ ಹಾಸ್ಯಗೋಷ್ಠಿ ಕಾರ್ಯಕ್ರಮದಲ್ಲಿ ಪತ್ರಕರ್ತರೆಲ್ಲರೂ ಪಾಲ್ಗೊಂಡು ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next